


ನಾಯಕನಹಟ್ಟಿ: ಬರದ ನಡುವೆಯೂ ಇಂದು ನಾಯಕನಹಟ್ಟಿಯಲ್ಲಿ ಅದ್ದೂರಿ ರಥೋತ್ಸವ ನಡೆಯಲಿದೆ.ಪಾಲ್ಗುಣ ಮಾಸದ ಚಿತ್ತಾ ನಕ್ಷತ್ರದ ಸಮಯ ಸಮೀಪಿಸುತ್ತಿದ್ದಂತೆ ಪಟ್ಟಣದ ತೇರುಬೀದಿಯಲ್ಲಿ ಸಾಗರೋಪಾದಿಯಲ್ಲಿ ಸೇರುವ ಭಕ್ತ ಸಮೂಹದ ನಡುವೆ ಪವಾಡ ಪುರುಷ ಕುಳಿತಿರುವ ರಥ ‘ಜಗದೊಡೆಯ ತಿಪ್ಪೇಶನಿಗೆ ಜಯವಾಗಲಿ.. ಜಯವಾಗಲಿ ಎಂದು ರಥ ಹೊರಡಲಿದೆ.ಮಧ್ಯಾಹ್ನ 3ಕ್ಕೆ ದೊಡ್ಡ ರಥೋತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಸಿದ್ಧತೆಗಳು ಭರದಿಂದ ಸಾಗಿವೆ.
ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಭಕ್ತರು ಪಟ್ಟಣಕ್ಕೆ ಬರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.ಹಟ್ಟಿ ಪರಿಷೆ ಎಂದೇ ಪ್ರಸಿದ್ಧವಾಗಿರುವ ಈ ಜಾತ್ರೆಯಲ್ಲಿ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಸೇರಿದಂತೆ ರಾಜ್ಯದ ವಿವಿಧೆಡೆಯ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.

ಮೊದಲು ಹೂವಿನಪಲಕ್ಕಿಯಲ್ಲಿ ಅಲಂಕಾರ ಮಾಡಿ, ರಥದ ಒಳಗೆ ಬರೋದನ್ನು ನೋಡಿದಕ್ಕೆ ಎರಡು ಕಣ್ಣು ಸಾಲದು.ಪಟ್ಟಣದ ಬಸವಣ್ಣನ ರಾಜ ಗಾಂಭೀರ್ಯ ನಡಿಗೆಯ ಮಾರ್ಗದರ್ಶನ ದಲ್ಲಿ ಬಂದು ಮಹಾರಥದ ಮೇಲೆ ತಿಪ್ಪೇಶನು ಏರಿದಾಗ ನೆರೆದ ಭಕ್ತರ ಮನದಲ್ಲಿ ಜಯಘೋಷಗಳ ನಾದ ಹೊಮ್ಮುತ್ತದೆ.

ಎಡಬಲಾಂ ದಡೆ’ ಎನ್ನುವ ಧ್ವನಿ ಹೊರಹೊಮ್ಮುತ್ತಿದ್ದಂತೆ ಬೃಹತ್ ಗಾತ್ರದ ಮಿಣಿ (ಹಗ್ಗ)ಹಿಡಿದು ರಥ ಎಳೆದಾಗ ಭಕ್ತರು ಮನಸ್ಸಿನಲ್ಲಿ ತಿಪ್ಪೇಶನ ಛಾಯೆ ಮೂಡುತ್ತದೆ.ಧ್ಯಾನದ ಮೂಲಕ ಯೋಗಿಯಾಗಿ, ಶಿವನನ್ನು ನೆನೆಯುವ ಮೂಲಕ ಅವಧೂತನಾಗಿ, ಭಕ್ತಿಯೋಗ, ಕರ್ಮ ಯೋಗ, ಜ್ಞಾನಯೋಗದ ಮೂಲಕ ಸಮಾಜದಲ್ಲಿದ್ದ ಅಂಧಕಾರವನ್ನು ಹೋಗಲಾಡಿಸಲು ಜಾಗೃತಿ ಮೂಡಿಸಿದ ಸಂತರು ಗುರು ತಿಪ್ಪೇರುದ್ರಸ್ವಾಮಿ. 16ನೇ ಶತಮಾನದ ಬಸವಾದಿ ಶರಣರು ಸಾರಿದ ಮಹೋನ್ನತ ವಿಚಾರಧಾರೆಗಳನ್ನು 16-17ನೇ ಶತಮಾನದ ಕಾಲಘಟ್ಟದಲ್ಲಿ ಪ್ರಚುರಪಡಿಸಿದವರು ತಿಪ್ಪೇರುದ್ರಸ್ವಾಮಿ. ಅಲ್ಲದೇ ಸಮಾಜಮುಖಿ ವಿಚಾರಧಾರೆ ಗಳಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಸಮಾಜ ನಿರ್ಮಾಣದ ಕನಸನ್ನು ಸಾಕಾರಗೊಳಿಸಿದವರು.
ಗುರು ತಿಪ್ಪೇರುದ್ರಸ್ವಾಮಿ ಮೂಲತಃ ಪಯಣ ಸಂಸ್ಕೃತಿಯವರು. ಊರೂರು ಅಲೆಯುತ್ತಾ ವೈಚಾರಿಕ ಸತ್ಯಗಳನ್ನು ಜನಪದರಿಗೆ ತಿಳಿಸುವ ಮೂಲಕ ಮನೋ ಜಾಗೃತಿಗೆ ಮುನ್ನುಡಿ ಬರೆದವರು. ಅವರು ಕೈಗೊಂಡ ಹಲವು ವೈಚಾರಿಕ ಕಾರ್ಯಗಳನ್ನು ಜನಪದರು ಪವಾಡಗಳೆಂದೇ ಆರಾಧಿಸಿದರು. ಹೀಗೆ ಹತ್ತು ಹಲವು ಪವಾಡಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ಮನೆಮಾಡಿದವರು ತಿಪ್ಪಯ್ಯ ರುದ್ರಸ್ವಾಮಿಗಳು.
ಕಾಯಕಯೋಗಿಯ ಸಾಮಾಜಿಕ ಸುಧಾರಣೆಗಳು
ಕಾಯಕದಿಂದ ಮನುಕುಲದ ಪ್ರಗತಿ ಎಂದು ಕಾಯಕ ತತ್ವವನ್ನು ಸಾರಿದ ಗುರು ತಿಪ್ಪೇಶರು ತಾವು ಮಾಡುತ್ತಿದ್ದ ಪ್ರತಿ ಕಾಯಕದಲ್ಲೂ ಜೀವಪರ ಕಾಳಜಿಯನ್ನು ಮೆರೆದರು. ಇದರ ಪ್ರತಿಫಲವೇ ನಾಡಿನ ಲಕ್ಷಾಂತರ ಭಕ್ತರ ಮನೋಮಂದಿರದಲ್ಲಿ ತಿಪ್ಪೇರುದ್ರಸ್ವಾಮಿ ದೈವತ್ವಕ್ಕೇರಿದರು. ಏಕಕಾಲಕ್ಕೆ ಶಿವಭಕ್ತ ಪಣಿಯಪ್ಪನ ಮನೆಯಲ್ಲಿ ಹಾಗೂ ಹರಳಯ್ಯರ ಮನೆಯಲ್ಲಿ ಲಿಂಗಪೂಜೆ ಮತ್ತು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಜಾತ್ಯತೀತ ಮನೋಭಾವಕ್ಕೆ ಸಾಕ್ಷಿಯಾದರು.ನಾಯಕನಹಟ್ಟಿಯ ಬರವನ್ನು ಕಂಡು ನೈಸರ್ಗಿಕವಾಗಿ ನೀರಿನ ಮೂಲಗಳನ್ನು ಗುರುತಿಸಿ ಸುಸಜ್ಜಿತವಾದ 5 ಬೃಹತ್ ಕೆರೆಗಳನ್ನು ಕಟ್ಟಿಸಿದರು. ನೀರಿನ ಮಹತ್ವವನ್ನು ಹೇಳಿ ಜಲ ಜಂಗಮರಾದರು.
ಬೆಳಕಿನ ಸಂಕೇತದ ಪಂಚಲೋಹ ಕಳಶ
ಮುಗಿಲೆತ್ತರಕ್ಕೆ ಮೈಚಾಚಿ ನಿಂತಿರುವ 80 ಅಡಿ ಎತ್ತರದ ಬೃಹತ್ ರಥದ ಮೇಲೆ ಅಳವಡಿಸಿರುವ 6 ಅಡಿ ಎತ್ತರದ ಬಂಗಾರ ಲೇಪಿತ ಪಂಚಲೋಹ ಕಳಶವು ಬೆಳಕಿನ ಸಂಕೇತವಾಗಿದೆ. ಈ ಭಾಗದಲ್ಲಿ ನೂತನ ವಧು–ವರರು ತಿಪ್ಪೇಶನ ರಥದ ಮೇಲೆ ಪ್ರತಿಷ್ಠಾಪಿಸಿರುವ ಕಳಶವನ್ನು ತೋರಿಸುವ ಸಂಪ್ರದಾಯವಿದೆ. ಇದೇ ಕಾರಣಕ್ಕೆ ಜಾತ್ರೆಯಲ್ಲಿ ಸಾವಿರಾರು ನವವಿವಾಹಿತರು ಕಾಣಸಿಗುತ್ತಾರೆ.ರಥವು ಸಾಗುವಾಗ ಹೂವು–ಹಣ್ಣು, ಕಾಯಿ, ಚೂರು ಬೆಲ್ಲ, ಕಾಳುಮೆಣಸು, ಘಮಘಮಿಸುವ ದವನದ ಹೂವು ಸೇರಿದಂತೆ ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ರಥಕ್ಕೆ ತೂರಿ ಭಕ್ತಿ ಸಮರ್ಪಿಸುತ್ತಾರೆ. ಒಟ್ಟಾರೆ ಮಾನವೀಯತೆಯನ್ನು ಮೀರಿದ ಸತ್ಯ ಬೇರೊಂದಿಲ್ಲ ಎಂದು ಸಾರಿದ ತಿಪ್ಪೇಶರು ಜ್ಞಾನಮಾರ್ಗ, ಭಕ್ತಿಮಾರ್ಗ, ಕರ್ಮಮಾರ್ಗದಲ್ಲಿ ನಡೆಯಬೇಕು. ಹಾಗೇ ಮಾಡಿದಷ್ಟು ನೀಡು ಭೀಕ್ಷೆ ಎಂಬ ಸಂದೇಶವನ್ನು ಜಗಕ್ಕೆ ನೀಡಿದ್ದಾರೆ.
ಬಿಗಿಭದ್ರತೆ
7 ಜನ ಡಿವೈಎಸ್ಪಿ, 16 ಮಂದಿ ಸಿಪಿಐ, 52 ಜನ ಪಿಎಸ್ಐ, 82 ಜನ ಎಎಸ್‌ಐ, 211 ಮಂದಿ ಹೆಡ್‌ಕಾನ್‌ಸ್ಟೆಬಲ್, 418 ಮಹಿಳಾ ಮತ್ತು ಪುರುಷ ಕಾನ್‌ಸ್ಟೆಬಲ್, 3 ಕೆಎಸ್‌ಆರ್‌ಪಿ ತುಕಡಿ, 6 ಡಿಎಆರ್ ಪಡೆ, 550 ಗೃಹ ರಕ್ಷಕ ದಳದ ಸಿಬ್ಬಂದಿ, 2 ಫೈರ್ ಡೆಂಟರ್, 1 ಟೈಗರ್ ವಾಹನ, 1 ವಜ್ರ ವಾಹನ, 3 ಕ್ಯೂಆರ್‌ಟಿ ವಾಹನ, 3 ಇಂಟರ್ ಸೆಪ್ಟರ್‌ಗಳನ್ನು ನಿಯೋಜಿಸಲಾಗಿದೆ.7 ಕಡೆ ಚೆಕ್‌ಪೋಸ್ಟ್ ಹಾಗೂ 24 ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. 46 ಸಿ.ಸಿ.ಟಿವಿ ಕ್ಯಾಮೆರಾ, 4 ವಾಚ್ ಟವರ್ ತೆರೆಯಲಾಗಿದೆ. ರಥೋತ್ಸವದ ವೇಳೆ ಎತ್ತರದ ಪ್ರದೇಶದಿಂದ ಡ್ರೋನ್ ಮೂಲಕ ವಿಡಿಯೊ ಚಿತ್ರೀಕರಣ ನಡೆಯಲಿದೆ.ಜಾತ್ರೆಯಲ್ಲಿ ಜನರ ಆರೋಗ್ಯ ತಪಾಸಣೆಗೆಂದು 20 ವೈದ್ಯರು, 4 ಪ್ರಥಮ ಚಿಕಿತ್ಸಾ ಕೇಂದ್ರಗಳು, 7 ಜನ ಔಷಧ ವಿತರಕರು, 6 ಜನ ಆಹಾರ ಪರಿವೀಕ್ಷಕರು, ಶೂಶ್ರೂಷಕಿಯರು, 4 ಆಂಬುಲೆನ್ಸ್ ಸೇರಿದಂತೆ ಒಟ್ಟು 170ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.ಕುಡಿಯುವ ನೀರು ಸರಬರಾಜಿಗೆ ಸಮೀಪದಲ್ಲಿರುವ 7 ರೈತರ ಜಮೀನುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳ ಎಲ್ಲ ಗ್ರಾಮ ಪಂಚಾಯಿತಿಯಿಂದ ಒಂದೊಂದು ಟ್ಯಾಂಕರ್ ನೀಡಲು ಸೂಚಿಸಲಾಗಿದೆ. ಶಿವಮೊಗ್ಗದ ಹಾಲು ಒಕ್ಕೂಟದಿಂದ 30 ಸಾವಿರ ಲೀಟರ್ ಸಾಮರ್ಥ್ಯದ 6 ಲಾರಿ ಟ್ಯಾಂಕರ್ ಸೇರಿ 50ಕ್ಕೂ ಹೆಚ್ಚು ನೀರಿನ ಟ್ಯಾಂಕರ್‌ಗಳ ಮೂಲಕ ಕಂದಾಯ ಅಧಿಕಾರಿಗಳ ಉಸ್ತುವಾರಿಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ಸ್ವಚ್ಛತೆಗೆ ಕ್ರಮ
ಪಟ್ಟಣ ಪಂಚಾಯಿತಿಯ ಸಹಯೋಗದಲ್ಲಿ ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. 8 ಕಡೆ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಒಳಮಠದ ದೇವಾಲಯದ ಮುಂಭಾಗ ಹಾಗೂ ತೇರು ಬೀದಿಯಲ್ಲಿನ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಚಪ್ಪರಗಳನ್ನು ತೆರವುಗೊಳಿಸಿ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.ಮುಕ್ತಿ ಬಾವುಟ ಹರಾಜಿಗೆ ಒಪ್ಪಂದ ಪತ್ರ: ಜಾತ್ರೆಯ ಕೇಂದ್ರಬಿಂದು ರಥೋತ್ಸವ. ರಥೋತ್ಸವಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು ಮಾಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ವರ್ಷ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಸ್ಥಳದಲ್ಲಿ ಹಾಜರಿರಬೇಕು. ಹಾಗೇ ಮುಕ್ತಿ ಬಾವುಟ ಪಡೆದವರು ಒಂದು ವರ್ಷದಲ್ಲಿ ಹಣ ಪಾವತಿಸಬೇಕು. ಅದಕ್ಕಾಗಿ ಒಪ್ಪಂದ ಪತ್ರ ನೀಡಬೇಕು ಎಂದು ದೇವಾಲಯದ ಇಒ ಎಚ್. ಗಂಗಾಧರಪ್ಪ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಬರುತ್ತಿರುವ ಭಕ್ತರು
ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಚಿತ್ರದುರ್ಗ, ಚಳ್ಳಕೆರೆ, ಜಗಳೂರು, ಭರಮಸಾಗರ, ದಾವಣಗೆರೆ, ಕೊಟ್ಟೂರು, ಆಂಧ್ರಪ್ರದೇಶದ ಕಲ್ಯಾಣದುರ್ಗ, ರಾಯದುರ್ಗ, ಅನಂತಪುರ ಜಿಲ್ಲೆಯಿಂದ ಸಾವಿರಾರು ಭಕ್ತರು ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಬರುತ್ತಿದ್ದಾರೆ.