ದಾವಣಗೆರೆ: ಹೊನ್ನಾಳಿ ಹಾಗೂ ನ್ಯಾಮತಿ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ಈ ಭಾಗದ ಮೆಕ್ಕೆಜೋಳ ಹೊಲದಲ್ಲಿ ಕಾಣಿಸಿಕೊಂಡ ಚಿರತೆ ಜನರನ್ನು ನೋಡಿ ಭೀತಿಯಿಂದ ಓಡ ತೊಡಗಿದೆ. ಬಳಿಕ ಜನರು ಪ್ರಾಣದ ಭಯದಿಂದ ಕಲ್ಲಿನಿಂದ ಒಡೆಯಲು ಶುರು ಮಾಡಿದ್ದಾರೆ. ನಂತರ ಆ ಚಿರತೆ ಹಿಡಿದು ಕಾಲು ಕಟ್ಟಿದ್ದಾರೆ.
ಕೋಟೆ ಮಲ್ಲೂರು ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಭಯ ಹುಟ್ಟಿಸಿತ್ತು. ಅಲ್ಲದೇ ನಾಲ್ವರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣದಿಂದ ಇಲ್ಲಿನ ಜನರು ತಾವೇ ಕೈಯಲ್ಲಿ ದೊಣ್ಣೆ ಹಿಡಿದು ಚಿರತೆ ಸೆರೆ ಹಿಡಿದಿದ್ದಾರೆ.
ಮೆಕ್ಕೆಜೋಳ ಹೊಲದಲ್ಲಿ ಚಿರತೆಯು ಮೊದಲು ಅವಿತು ಕುಳಿತಿದೆ. ಇದನ್ನು ಅಲ್ಲಿನ ಜನರು ನೋಡಿದ್ದಾರೆ. ಬಳಿಕ ಹಿಂಡು ಹಿಂಡಾಗಿ ಬಂದ ಜನ ದೊಣ್ಣೆ ಹಿಡಿದು ಒಟ್ಟಿಗ ನುಗ್ಗಿದ್ದಾರೆ. ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡಿದ ಚಿರತೆಗೆ ಕಲ್ಲುಗಳಿಂದ ಹೊಡೆದಿದ್ದಾರೆ. ನಂತರ ಚಿರತೆಯನ್ನು ಹಿಡಿದು ಕಾಲು ಕಟ್ಟಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರ ತಂಡ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಚಿರತೆ
ಈ ಚಿರತೆ ಕಳೆದ ಮೂರ್ನಾಲ್ಕು ದಿವಸದಿಂದ ಜ್ಚರದಿಂದ ಬಳಲುತ್ತಿತ್ತು. ಹಾಗಾಗಿ ಮೆಕ್ಕೆಜೋಳದಲ್ಲಿ ಮಲಗುತ್ತಿತ್ತು. ಈ ಚಿರತೆಗೆ 108 ಡಿಗ್ರಿ ತಾಪಾಮಾನವಿದ್ದು, ಬದುಕಿದ್ದೇ ಹೆಚ್ಚು. ಹೀಗಾಗಿ ಚಿರತೆ ನಿತ್ರಾಣಗೊಂಡು ಓಡಾಡಲು ಆಗದೇ ಜನರಿಗೆ ಸಿಕ್ಕಿದೆ.
ಅರಣ್ಯಾಧಿಕಾರಿ ಶಶಿಧರ್ ಕಡೆಯಿಂದ ಚಿಕಿತ್ಸೆ
ನಿತ್ರಾಣಗೊಂಡ ಚಿರತೆಗೆ ಡಿಎಫ್ ಒ ಶಶಿಧರ್ ಶಿವಮೊಗ್ಗದ ತ್ಯಾವರೆಕೊಪ್ಪದಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದಾರೆ. ಅದೃಷ್ಟವಶಾತ್ ಚಿರತೆ ಬದುಕುಳಿದಿದೆ. ಸದ್ಯ ಚಿಕಿತ್ಸೆ ನೀಡಲಾಗಿದ್ದು, ಗುಣಮುಖವಾದ ನಂತರ ರೆಸ್ಕ್ಯೂ ಸೆಂಟರ್ ಗೆ ಚಿರತೆ ಬಿಡಲಾಗುವುದು ಎಂದು ಡಿಎಫ್ ಓ ಶಶಿಧರ್ ತಿಳಿಸಿದ್ದಾರೆ.