


ಶಿವಮೊಗ್ಗ : ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಿಮುಲ್ ನಿರ್ದೇಶಕ ಮಂಜುನಾಥ್ ಗೌಡಗೆ ಇಡಿ ಬಿಗ್ ಶಾಕ್ ನೀಡಿದ್ದು, ಅವರ ಪತ್ನಿಗೆ ಸೇರಿ 13.91 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.
ಈ ಕುರಿತಂತೆ ಎಕ್ಸ್ ನಲ್ಲಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಇಡಿ, ಶಿವಮೊಗ್ಗ ಜಿಲ್ಲಾ ಸಹಕಾರಿ ಬ್ಯಾಂಕಿನಿಂದ ಹಣವನ್ನು ವಂಚಿಸಿದ ಪ್ರಕರಣದಲ್ಲಿ, ಶಿವಮೊಗ್ಗ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಆರ್ ಎಂ ಮಂಜುನಾಥ ಗೌಡ ಮತ್ತು ಅವರ ಪತ್ನಿಗೆ ಸೇರಿದ ಪ್ರಸ್ತುತ ಮಾರುಕಟ್ಟೆ ಮೌಲ್ಯದ ರೂ. 13.91 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಇಡಿ, ಬೆಂಗಳೂರು ವಲಯ ಕಚೇರಿಯು ಪಿಎಂಎಲ್ಎ, 2002 ರ ನಿಬಂಧನೆಗಳ ಅಡಿಯಲ್ಲಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿಸಿದೆ

ಇನ್ನು ಜೈಲಿನಲ್ಲಿರುವ ಮಂಜುನಾಥ್ ಗೌಡ
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ ಸಂಬಂಧ ಈಗಾಗಲೇ ಮಾಜಿ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಅವರನ್ನು ಬಂಧಿಸಲಾಗಿದೆ. ಅವರು ಜೈಲಿನಲ್ಲಿದ್ದಾರೆ. ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಏಪ್ರಿಲ್ 08 ರಂದು ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ಸಹ ನಡೆಸಿದ್ದರು. ಬಳಿಕ ಇಡಿ, ಶಿವಮೊಗ್ಗ ಡಿಸಿಸಿ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಅಧಿಕೃತವಾಗಿ ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಕೋರ್ಟ್, ಕೂಡ ಮಂಜುನಾಥ ಗೌಡ ಅವರನ್ನು 14 ದಿನ ಇಡಿ ಕಸ್ಟಡಿಗೆ ನೀಡಿತ್ತು.

ವೈದ್ಯಕೀಯ ಸವಲತ್ತು ನಿಡುವಂತೆ ಸೂಚಿಸಿದ್ದ ಕೋರ್ಟ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡಗೆ ಆರೋಗ್ಯ ಸಮಸ್ಯೆ ಹಿನ್ನೆಲೆ ಅಗತ್ಯ ವೈದ್ಯಕೀಯ ಸವಲತ್ತು ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಅಲ್ಲದೇ ದಿನದಲ್ಲಿ 30 ನಿಮಿಷ ವಕೀಲರಿಂದ ಮಂಜುನಾಥ್ ಗೌಡ ಭೇಟಿಗೆ ಕೋರ್ಟ್ ಅವಕಾಶ ನೀಡಿತ್ತು.ಅಲ್ಲದೇ ಇಡಿ ಅಧಿಕಾರಿಗಳು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಮ್ಯಾನೇಜರ್ ಸೇರಿದಂತೆ ಇತರರ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಆದ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ಹಿನ್ನೆಲೆ:
ಶಿವಮೊಗ್ಗ ನಗರದ ಗಾಂಧಿ ಬಜಾರ್ನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ರೂ ವಂಚನೆ ನಡೆದಿತ್ತು. 2014ರಲ್ಲಿ ಈ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2014ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಬಳಿಕ ಇಡಿ ಸಹ ಇಸಿಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಮಂಜುನಾಥ್ ಗೌಡಗೆ ಸಮನ್ಸ್ ಜಾರಿಗೊಳಿಸಿತ್ತು. ಇಡಿ ಸಮನ್ಸ್ ಪ್ರಶ್ನಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನ ಇತ್ತೀಚೆಗೆ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಡಿ ಮಂಜುನಾಥ್ ಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಸದ್ಯ ಸಹಕಾರವಲಯದಲ್ಲಿ ಹೆಸರು ಮಾಡಿದ್ದ ಮಂಜುನಾಥ್ ಗೌಡಗೆ ಇಡಿ ಡ್ರಿಲ್ ನಡೆಸುತ್ತಿದ್ದು, ಇನ್ನಷ್ಟು ಮಾಹಿತಿ ಹೊರಬೇಕಿದೆ.