ದಾವಣಗೆರೆ : ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ಪೆನ್ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು. ಕ್ಷಣಕ್ಕೊಂದು ಟ್ವಿಸ್ಟ್ ಪಡ್ಕೊಂತಿದೆ. ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಸಂತ್ರಸ್ತ ಮಹಿಳೆಯಿಂದ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಹಾಗಾದ್ರೆ ಪ್ರಜ್ವಲ್ ರೇವಣ್ಣ ಸರಿಯಾಗ್ ತಗ್ಲಾಕ್ಕೊಂಡ್ರಾ.? ಇದ್ರಿಂದ ಅಲರ್ಟ್ ಆದ ಮಾಜಿ ಸಿಎಂ ಹೆಚ್ಡಿಕೆ ಹೊಸ ಕ್ಯಾತೆ ತೆಗೆಯುತ್ತಿದ್ದಾರಾ.? SIT ಮೇಲೆ ನಂಬಿಕೆ ಇಲ್ಲ ಅಂತಿರೋ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರಿಗೆ CBI ತನಿಖೆ ಮೇಲೆ ಯಾಕೆ ಅಷ್ಟೊಂದು ಇಂಟ್ರೆಸ್ಟ್.? ಸಿಬಿಐಗೆ ವಹಿಸಿದ್ರೆ ಈ ಪ್ರಕರಣವನ್ನ ಮುಚ್ಚಿ ಹಾಕಲಾಗುತ್ತಾ.?
ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪ ಎದುರಿಸುತ್ತಿರೋ ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದ್ರಿಂದ ಪ್ರಜ್ವಲ್ಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ವಿಡಿಯೋದಲ್ಲಿದ್ದ ಕೆಲ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡುವಂತೆ ಹೇಳಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಸ್ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಮನೆಯ ಮಹಿಳಾ ಕೆಲಸದಾಕೆಗೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಂದೆ ಮಗನಿಗೆ SIT ನೋಟಿಸ್ ನೀಡಿದೆ. ಆದರೆ SIT ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡನೇ ದೂರು ದಾಖಲಾಗಿರುವುದು ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ತಂದಿದೆ.
ಇನ್ನ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿಯನ್ನ ಕುಟುಕಿದೆ. ಹಾಗಾದ್ರೆ ರಾಜ್ಯ ಕಾಂಗ್ರೆಸ್ನ ಆ ಟ್ವೀಟ್ಗಲ್ಲಿ ಏನಿದೆ ಗೊತ್ತಾ..? ಅದನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ.
ಕಾಂಗ್ರೆಸ್ ಟ್ವೀಟ್ ನಂಬರ್. 01
ಮಹಿಳೆಯರ ಘನತೆ ಕಸಿದಿರುವ ಪ್ರಕರಣವನ್ನು ವ್ಯವಸ್ಥಿತವಾಗಿ ರಾಜಕೀಯ ಮೇಲಾಟದ ಪ್ರಕರಣವನ್ನಾಗಿ ಮಾಡಲು ಹೊರಟಿದ್ದಾವೆ BJP ಮತ್ತು JDS ಪಕ್ಷಗಳು. ರೇವಣ್ಣ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ ಎಂದಿದ್ದ ಬ್ರದರ್ ಸ್ವಾಮಿಗಳು ಪೆನ್ಡ್ರೈವ್ ಪ್ರಕರಣವನ್ನು ರಾಜಕೀಯ ದಾಳ ಮಾಡಿಕೊಳ್ಳಲು ಮುಂದಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ನೈತಿಕತೆ ಇದ್ದಿದ್ದೇ ಆದರೆ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡಲಿ, ಎರಡೂ ಪಕ್ಷಗಳು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ಕೆಲಸ ಮಾಡಿ ತಮ್ಮ ಅಭ್ಯರ್ಥಿಯ ತಪ್ಪಿನ ಕೆಲಸಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕುಟುಕಿದೆ.
ಕಾಂಗ್ರೆಸ್ ಟ್ವೀಟ್ ನಂಬರ್. 02
“ಇದು ನಾಲ್ಕೈದು ವರ್ಷದ ಹಿಂದಿನ ವಿಡಿಯೋ“ ಎಂದಿದ್ದರು ರೇವಣ್ಣ. ದೇವರಾಜೇಗೌಡ ನಾಲ್ಕೈದು ತಿಂಗಳಿಂದಲೂ ವಿಡಿಯೋಗಳಿವೆ, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದರು. ಇದರ ಅರ್ಥ ಬ್ರದರ್ ಸ್ವಾಮಿಗಳಿಗೆ ಎಲ್ಲವೂ ಮೊದಲೇ ತಿಳಿದಿತ್ತು, ಹಾಗೂ ಪೆನ್ ಡ್ರೈವ್ ಬಿಡುಗಡೆಗೆ “ಕುಮಾರಕೃಪೆ“ಯೂ ಇತ್ತು. ಆದರೆ ಈಗ ಪ್ರಜ್ವಲ್ ರೇವಣ್ಣನ ಮಂಚದ ಸಾಧನೆಗಳು ತಪ್ಪೇ ಅಲ್ಲ, ಅದನ್ನು ಜಗತ್ತಿಗೆ ತಿಳಿಸಿದ್ದೇ ತಪ್ಪು ಎನ್ನುತ್ತಿದ್ದಾರೆ. ಪ್ರಜ್ವಲ್ ಕೃತ್ಯಗಳನ್ನು ಈ ರೀತಿಯಲ್ಲಿ ಸಮರ್ಥಿಸುವ ಬ್ರದರ್ ಸ್ವಾಮಿಗಳು ಏಕೆ ಸಂತ್ರಸ್ತೆಯರ ಪರವಾಗಿ ಒಂದೇ ಒಂದು ಮಾತಾಡುತ್ತಿಲ್ಲ? ಸಂತ್ರಸ್ತೆಯರನ್ನು ಸಂತೈಸುವ ಹೊಣೆಗಾರಿಕೆ ಪ್ರದರ್ಶಿಸುವುದು ಯಾವಾಗ?
ಕಾಂಗ್ರೆಸ್ ಟ್ವೀಟ್ ನಂಬರ್. 03
ಪ್ರಜ್ವಲ್ ವಿರುದ್ಧ ಬ್ಲೂ ಕರ್ನಾರ್ ನೋಟಿಸ್ ಹೊರಡಿಸಿ ಇಂಟರ್ ಪೋಲ್ ಸಹಕಾರ ಕೋರಿತ್ತು ನಮ್ಮ ಸರ್ಕಾರ. ಆದರೆ ವಿದೇಶದಲ್ಲಿರುವ ಪ್ರಜ್ವಲ್ ಬಂಧನಕ್ಕೆ ಕೇಂದ್ರ ಸರ್ಕಾರದಿಂದ ಇದುವರೆಗೂ ಯಾವುದೇ ಸಕಾರಾತ್ಮಕ ಸಹಕಾರ ಸಿಕ್ಕಿಲ್ಲ. ವಿದೇಶಾಂಗ ಇಲಾಖೆ ಮೌನವಹಿಸಿ ಕುಳಿತಿದೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಜ್ವಲ್ ರಕ್ಷಣೆಗೆ ನಿಂತಿರುವುದು ಇದರಿಂದ ಸ್ಪಷ್ಟವಾಗುತ್ತದೆ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟ್ವೀಟ್ ನಂಬರ್. 04
ಚುನಾವಣೆಯ ನಂತರ ಬ್ರದರ್ ಸ್ವಾಮಿಯವರನ್ನು ಬಿಜೆಪಿ ದೂರ ಮಾಡಿದಂತೆ ಕಾಣುತ್ತಿದೆ, ಬ್ರದರ್ ಸ್ವಾಮಿಗಳು ಏಕಾಂಗಿ ಪ್ರೆಸ್ ಮೀಟ್ ಮಾಡ್ತಿದ್ದಾರೆ, ಅವರ ಹೆಗಲ ಮೇಲಿನ ಕೇಸರಿ ಶಾಲು ಮಾಯವಾಗಿದೆ! ಬಿಜೆಪಿ ಜೆಡಿಎಸ್ ಪಕ್ಷವನ್ನು ಬಳಸಿ ಬಿಸಾಡಿ ಆಗಿದೆ! ಈ ಮೈತ್ರಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ನಷ್ಟವಾಗಿದೆ ಎಂದು ಜ್ಞಾನೋದಯವಾಗಿದೆಯೇ ಅಂತೇಳಿ ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ಟ್ವೀಟ್ ನಂಬರ್. 05
ಬಿಜೆಪಿಯವರ ಮತ್ತೊಂದು ಅಸಹ್ಯದ ಪ್ರಕರಣ ಬೆಳಕಿಗೆ ಬಂದಿದೆ, ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪುರಾಣದ ವಾರಸುದಾರ ದೇವರಾಜೇಗೌಡ ಕೂಡ ಸಂತ್ರಸ್ತೆಯೊಬ್ಬರನ್ನು ವಿಡಿಯೋ ಕಾಲ್ ಮಾಡಿ, ಬ್ಲಾಕ್ ಮೇಲ್ ಮಾಡಿದ್ದಾರಂತೆ. ಚಪಲ ಜನತಾ ಪಕ್ಷದವರಿಗೆ ಮಹಿಳೆಯರ ಬಗ್ಗೆ ಕನಿಷ್ಠ ಗೌರವ ಇಲ್ಲದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಸಂತ್ರಸ್ತರನ್ನು ಸಂತೈಸುವ ಬದಲು ಬಳಸಿಕೊಳ್ಳಲು ಮುಂದಾಗಿರುವುದು ರಾಜ್ಯ ಬಿಜೆಪಿ
ಪಕ್ಷ ಅಸಹ್ಯದ ಪರಮಾವಧಿಗೆ ತಲುಪಿರುವುದಕ್ಕೆ ನಿದರ್ಶನ ಅಂತೇಳಿ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಅಷ್ಟೇ ಅಲ್ಲ, ಪ್ರಜ್ವಲ್ ಕರ್ಮಕಾಂಡಗಳ ಬಗ್ಗೆ ಮಾತಾಡುತ್ತಿದ್ದ ಬಿಜೆಪಿಯ ದೇವರಾಜೇಗೌಡ ಕೂಡ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ದಾಖಲಾಗಿದೆ. ರಾಜ್ಯ BJP ನಾಯಕರ ಕೈ, ಬಾಯಿ, ಚಾರಿತ್ರ್ಯ ಯಾವುದೂ ಶುದ್ಧವಿಲ್ಲದಿರುವುದಕ್ಕೆ ಮತ್ತೊಂದು ನಿದರ್ಶನವಿದು. ಬಿಜೆಪಿ ನಾಯಕರಿಗಾಗಿಯೇ ಕಳಚಲಾಗದ ಪ್ಯಾಂಟನ್ನು ವಿನ್ಯಾಸಗೊಳಿಸುವ ಅಗತ್ಯವಿದೆ ಅಂತೇಳಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕುಟುಕಿದೆ.
ಇದೆಲ್ಲದರ ನಡುವೆ ಪ್ರಜ್ವಲ್ ಪ್ರಕರಣ ಸಂಬಂಧ ಕಾರ್ತಿಕ್ ಹಾಗೂ ದೇವರಾಜೇಗೌಡಗೆ SIT ನೋಟಿಸ್ ನೀಡಿದೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ನಿಮಗೆ ಗೊತ್ತಿರ್ಲಿ, ಇತ್ತೀಚೆಗೆ ಕೆಲ ದಾಖಲೆ ಬಿಡುಗಡೆ ಮಾಡಿದ್ದ ದೇವರಾಜೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಹೀಗಾಗಿ, ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳು, ಮೊಬೈಲ್ ಸಂಭಾಷಣೆಯ ಆಡಿಯೋ, ಫೋಟೋ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ದೇವರಾಜೇಗೌಡ್ರಿಗೆ ನೋಟಿಸ್ ಕೊಟ್ಟಿದ್ದಾರೆ.
ಕಹಾನಿ ಮೇ ಟ್ವೀಸ್ಟ್ ಏನು ಅಂದ್ರೆ ಬಂಧನ ಭೀತಿಯಿಂದ ವಿದೇಶಕ್ಕೆ ಪರಾರಿಯಾಗಿರೋ ಪ್ರಜ್ವಲ್ ರೇವಣ್ಣ ಮೇ 15ರಂದು ಬೆಂಗಳೂರಿಗೆ ಮರಳುವ ಬಗ್ಗೆ ಇಂಟರ್‌ಪೋಲ್ ಸುಳಿವು ಕೊಟ್ಟಿದೆ. ಪ್ರಜ್ವಲ್ ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ಮೇ 15ರಂದು ಹೊರಡುವ ವಿಮಾನ ರಾತ್ರಿ 12.30ಕ್ಕೆ ಬೆಂಗಳೂರು ತಲುಪಲಿದೆ ಎಂದು ಇಂಟರ್‌ಪೋಲ್ ಮಾಹಿತಿ ರವಾನಿಸಿದೆ ಎನ್ನಲಾಗುತ್ತಿದೆ. ಆದ್ರೆ ಈ ತಿಂಗಳ ಆರಂಭದಲ್ಲೂ ಇಂಥದ್ದೇ ಗುಲ್ಲೆದ್ದಿತ್ತು. ಆದ್ರೆ ಪ್ರಜ್ವಲ್ ರಾಜ್ಯಕ್ಕೆ ಆಗಮಿಸಿರ್ಲಿಲ್ಲ.. ಅಷ್ಟೇ ಅಲ್ಲ., ದೇಶದಲ್ಲಿ ಲೋಕಸಭಾ ಚುನಾವಣೆ ಮುಗಿಯೋವರೆಗೂ ಪ್ರಜ್ವಲ್ ಬೆಂಗಳೂರಿಗೆ ವಾಪಸ್ ಆಗಲ್ಲ ಅನ್ನೋ ಮಾತುಗಳೂ ಹರಿದಾಡ್ತಾಯಿವೆ.
ವಿಜಯ್ ಮಲ್ಯ, ಚೋಕ್ಸಿ, ಲಲಿತ್ ಮೋದಿ ಸೇರಿದಂತೆ ಹಲವರು ದೇಶದ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ಪಂಗಾನಾಮ ಹಾಕಿ ವಿದೇಶಗಳಲ್ಲಿ ಸೆಟ್ಲ್ ಆಗಿದ್ದಾರೆ. ಅವರಿಗೆ ರೆಡ್ಕಾರ್ನರ್ ನೋಟಿಸ್ ಕೊಟ್ಟು ಮೋದಿ ಸರ್ಕಾರ ಇನ್ನು ಯಾಕೆ ಬಂಧಿಸಿಲ್ಲ. ಅವರನ್ನ ಪತ್ತೆ ಹಚ್ಚೋಕೆ ನಮ್ಮ ಕೇಂದ್ರ ಸರ್ಕಾರಕ್ಕೆ ಕಷ್ಟವಾಗ್ತಾಯಿದ್ಯಾ..? ಇಲ್ಲ, ಬೇಕೂ ಅಂತ್ಲೇ ಅವರ ರಕ್ಷಣೆಗೆ ನಿಂತಿದ್ಯಾ ಅನ್ನೋ ಅನುಮಾನವೂ ಇದೆ. ಇದೇ ರೀತಿ ಪ್ರಜ್ವಲ್ ಪ್ರಕಣದಲ್ಲೂ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿರೋ ಬೂಟಾಟಿಕೆ ತೋರಿಸುತ್ತಿದೆ ಅನ್ನೋ ಶಂಕೆ ವ್ಯಕ್ತವಾಗ್ತಾಯಿದೆ. ಇದೆಲ್ಲದರ ನಡುವೆ SIT ತನಿಖೆ ಮೇಲೆ ರಾಜ್ಯ ಸರ್ಕಾರದ ಪ್ರಭಾವ ಬೀರುತ್ತೆ.
ಹೀಗಾಗಿ ಈ ಪ್ರಕರಣವನ್ನ ಸಿಬಿಐಗೆ ವಹಿಸಿ ಅಂತೇಳಿ ಕಮಲ ದಳ ಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಹಾಗಾದ್ರೆ CBI ಕೇಂದ್ರ ಸರ್ಕಾರದ ಅಧೀನದಲ್ಲಿದ್ಯಾ.? ಸ್ವತಂತ್ರ ತನಿಖಾ ಸಂಸ್ಥೆಗಳು ಅಂತ ಹೇಳಿಕೊಂಡ್ರೂ ಈ ಸಂಸ್ಥೆಗಳ ಮೇಲೆ ಪರೋಕ್ಷವಾಗಿ ಸರ್ಕಾರಗಳು ಪ್ರಭಾವ ಬೀರುತ್ತಿರೋದು ಮುಚ್ಚಿಟ್ಟ ಸತ್ಯವೇನೂ ಅಲ್ಲ. ಅಂದ್ರೆ ಸದ್ಯ ಬೀಸೋ ದೊಣ್ಣೆಯಿಂದ ಪಾರಾಗೋಕೆ, ಪ್ರಕರಣವನ್ನ ಸಿಬಿಐಗೆ ವಹಿಸಿ ಅಂತೇಳಿ ಕಮಲ ದಳ ಪಕ್ಷಗಳು ಪಟ್ಟು ಹಿಡಿಯುತ್ತಿವೆಯಾ.? ಪ್ರಜ್ವಲ್ ಪ್ರಕರಣದಲ್ಲಿ ನಡೆಯುತ್ತಿರೋ ರಾಜಕೀಯ ಹೈಡ್ರಾಮಾದ ಬಗ್ಗೆ ನೀವೇನಂತಿರಾ?