


ದಾವಣಗೆರೆ: ಆಕೆ ಬಡತನದ ಹೆಣ್ಣು ಮಗಳು, ತಂದೆ ಗಾರೆ ಕೆಲಸ ಮಾಡಿ ಜೀವನ ಮಾಡಬೇಕಾದ ಸ್ಥಿತಿ. ಈ ನಡುವೆ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮಗಳಿಗೆ ಕ್ಯಾನ್ಸರ್ ತಗುಲಿದ್ದು, ಭವಿಷ್ಯವೇ ಡೋಲಾಯಾನವಾಗಿತ್ತು. ಆದರೂ ಬಾಲಕಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶೇ.93.44ರಷ್ಟು (625ಕ್ಕೆ 584) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಹೌದು. ಕ್ಯಾನ್ಸರ್‌ಗೆ ತುತ್ತಾಗಿ ಗುಣಮುಖಳಾಗಿದ್ದ ನಗರದ ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಬಿ.ಶಾಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶೇ 93.44ರಷ್ಟು (625ಕ್ಕೆ 584) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ವಿದ್ಯಾರ್ಥಿನಿ 9ನೇ ತರಗತಿಯಲ್ಲಿ ಓದುತ್ತಿರುವಾಗ ರಕ್ತದ ಕ್ಯಾನ್ಸರ್ (ಅಕ್ಯೂಟ್ ಮೈಲಾಯ್ಡ್ ಲ್ಯುಕೇಮಿಯಾ) ದೃಢಪಟ್ಟಿತ್ತು.

ಕ್ಯಾನ್ಸರ್ ಚಿಕಿತ್ಸೆಗೆ ರೂ. 13.60 ಲಕ್ಷ ಖರ್ಚಾಗುವುದಾಗಿ ವೈದ್ಯರು ತಿಳಿಸಿದ್ದರು. ಗಾರೆ ಕೆಲಸ, ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿರುವ ವಿದ್ಯಾರ್ಥಿನಿಯ ಪಾಲಕರು ಅಷ್ಟೊಂದು ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದರು. ಆಗ ಶಾಲೆಯ ಗಣಿತ ಶಿಕ್ಷಕ ಕೆ.ಟಿ.ಜಯಪ್ಪ ಹಾಗೂ ಮಂಗಳೂರಿನ ಜುಲೇಖಾ ಯೇನೆಪೋಯ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸಿದ್ದರು.

ಅನಾರೋಗ್ಯದಿಂದಾಗಿ ಈಕೆಗೆ 2023–24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖಳಾದ ಬಳಿಕ ಸಂಪೂರ್ಣ ಹಾಜರಾತಿಯೊಂದಿಗೆ 2024–25ನೇ ಶೈಕ್ಷಣಿಕ ಸಾಲಿನಲ್ಲಿ ಈ ಸಾಧನೆ ಮಾಡಿದ್ದಾಳೆ.