ದಾವಣಗೆರೆ ; ಮೀಸಲಾತಿ ರದ್ದು ಪಡಿಸುವುದಾಗಿ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಇತ್ತೀಚೆಗೆ ಅಮೇರಿಕಾದ ಜಾರ್ಜ್‌ಟೌನ್‌ನ ವಿಶ್ವವಿದ್ಯಾನಿಲಯದಲ್ಲಿ ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷ ಸದಾ ಎಸ್.ಸಿ,ಎಸ್ಟಿ ಮತ್ತು ಓಬಿಸಿ ಮೀಸಲಾತಿಯ ವಿರೋಧಿ ನಡೆಯನ್ನುಅನುಸರಿಸಿಕೊಂಡು ಬಂದಿದೆ.ಮೀಸಲಾತಿ ಎನ್ನುವುದು ದಲಿತರ ಹಕ್ಕು. ಅದನ್ನು ಯಾರೂ ಕೂಡ ಕಸಿದುಕೊಳ್ಳಲು ಭಾರತೀಯ ಜನತಾ ಪಾರ್ಟಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಾರ್ಟಿ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡಿಕೊಂಡು ಬಂದಿದೆ ಎಂದೂ ಕೂಡ ದಲಿತರ ಶ್ರೇಯೋಭಿವೃದ್ಧಿಗಾಗಿ ಸಮಗ್ರ ನೀತಿಯನ್ನು ರೂಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ದಲಿತರನ್ನು ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ರೂಪದಲ್ಲಿ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಸಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಸಂವಿಧಾನವನ್ನು ಬರೆದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅಂದು ಅಪಮಾನ ಮಾಡಲಾಗಿತ್ತು. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿ ಅವರ ವಿಚಾರಕ್ಕೆ ತಿಲಾಂಜಲಿ ನೀಡಲು ಹೊರಟಿದ್ದಾರೆಂದು ಆರೋಪಿಸಿದರು.
ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಸಹ ಮೀಸಲಾತಿ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.ಕಾಕಾ ಕಾಲೇಲ್ಕರ್ ಮತ್ತು ಡಿಪಿ ಮಂಡಲ್ ಸಮಿತಿಯ ವರದಿಗಳನ್ನು ಕಸದ ತೊಟ್ಟಿಗೆ ಎಸೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರಗಳು ಮಾಡಿತ್ತು. ಚುನಾವಣೆಯ ಸಮಯದಲ್ಲಿ ಮಾತ್ರ ಕಾಂಗ್ರೆಸ್ ದಲಿತರು, ಮೀಸಲಾತಿ ಹಾಗೂ ಸಂವಿಧಾನದ ಕುರಿತು ಮೊಸಳೆ ಕಣ್ಣೀರನ್ನು ಸುರಿಸುತ್ತದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಎಸ್.ಸಿ.,ಎಸ್.ಟಿ.ಗಳ 25 ಸಾವಿರ ಕೋಟಿ ಹಣವನ್ನು ಬೇರೆಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದು ಕೂಡ ಎಸ್.ಸಿ, ಎಸ್.ಟಿ.ಗಳಿಗೆ ಮಾಡಿದ ಘೋರ ಅಪಮಾನ.ಎಸ್.ಸಿ./ಎಸ್.ಟಿ.ಗಳ ಅಭಿವೃದ್ಧಿಗಾಗಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಇದ್ದ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದಾರೆ. 187 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆಂದು ಆರೋಪಿಸಿದರು.
ವಿದೇಶಕ್ಕೆ ಹೋದಾಗಲೆಲ್ಲ ಭಾರತಕ್ಕೆ ಮಾನಹಾನಿ ಮಾಡುವ ರಾಹುಲ್ ಗಾಂಧಿ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಜನರೇ ಸರಿಯಾದ ಪಾಠ ಕಲಿಸಬೇಕಾಗಿದೆ ಎಂದರು. ರಾಹುಲ್ ಗಾಂಧಿ ಅಮೇರಿಕಾದಲ್ಲಿ ಈ ರೀತಿ ಮಾತನಾಡಿರುವುದು ಖಂಡನೀಯ.ಈ ಹೇಳಿಕೆಯಿಂದ ದಲಿತರಿಗೆ ನೋವಾಗಿದೆ.ಈ ಕೂಡಲೇ ರಾಹುಲ್ ಗಾಂಧಿ ದೇಶದ ಎಸ್ಸಿ,ಎಸ್ಟಿ ಸಮುದಾಯದ ಕ್ಷಮೆ ಕೇಳಬೇಕು.ಈ ಕೂಡಲೇ ರಾಷ್ಟ್ರಪತಿಗಳು ಅವರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಾಜಶೇಖರ್. ಮಾಜಿ ಶಾಸಕರು ಎಸ್ ವಿ ರಾಮಚಂದ್ರಪ್ಪ. ಬಸವನಾಯಕ್. ರಾಜೇಶ್ . ಗಾಯತ್ರಿ ಸಿದ್ದೇಶ್ವರ. ಲೋಕಿಕೆರೆ ನಾಗರಾಜ್. ರಾಜನಹಳ್ಳಿ ಶಿವಕುಮಾರ್ . ಶ್ರೀನಿವಾಸ್ ದಾಸ್ ಕರಿಯಪ್ಪ . ಪ್ರಧಾನ ಕಾರ್ಯದರ್ಶಿಗಳು ಅಣ್ಣೇಶ್ ಅನಿಲಾಯಕ್ ಮಾಧ್ಯಮ ಸಹ ಪ್ರಮುಖರು ಶಶಿಕುಮಾರ್, ಮಂಜಾನಾಯಕ್, ಶಿವಕುಮಾರ್, ಜಿ.ವಿ. ಗಂಗಾಧರ್, ಸುರೇಶ್, ದೊಡ್ಡೇಶ್, ರಮೇಶ್ ಉಪಸ್ಥಿತರಿದ್ದರು.