ಶಿವಮೊಗ್ಗ.
ನಗರದ ಪ್ರತಿಷ್ಠಿತ ಸಿಟಿ-ಕೋ- ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರ ಸ್ಥಾನಕ್ಕೆ ಡಿ. 29 ರಂದು ಚುನಾವಣೆ ನಡೆಯಲಿದ್ದು, ನಗರದೆಲ್ಲೆಡೆ 400ಕ್ಕೂ ಹೆಚ್ಚು ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ಮಹಾನಗರ ಪಾಲಿಕೆ ಕಣ್ಣುಮುಚ್ಚಿ ಕುಳಿತಿದೆ.
15 ಸ್ಥಾನಕ್ಕೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ನಗರದಾದ್ಯಂತ ನೂರಾರು ಫ್ಲೆಕ್ಸ್ ಗಳು ಪ್ರಮುಖ ವೃತ್ತಗಳಲ್ಲಿ ಅಳವಡಿಸಿದ್ದು, ಪಾಲಿಕೆಯ ಪರಿಸರ ವಿಭಾಗಕ್ಕೆ ಇದರ ಮಾಹಿತಿ ಇಲ್ಲ. ಆಯುಕ್ತರ ಗಮನಕ್ಕೂ ತರಲಾಗಿದ್ದು, ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಜನಸಾಮಾನ್ಯರಿಗೊಂದು ಕಾನೂನು, ಪ್ರಬಲ ವ್ಯಕ್ತಿಗಳಿಗೊಂದು ಕಾನೂನು ಪಾಲಿಕೆಯಲ್ಲಿ ಇದೆಯಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಹಿಂದೆ ಲೋಕಾಯುಕ್ತರು ಫ್ಲೆಕ್ಸ್ ಮುಕ್ತ ನಗರ ಮಾಡಬೇಕು ಎಂದು ಸುಮೊಟೋ ಕೇಸ್ ದಾಖಲಿಸಿದ್ದರು.
ಆ ನಂತರ ಸ್ವಲ್ಪ ನಿಯಂತ್ರಣದಲ್ಲಿದ್ದ ಫ್ಲೆಕ್ಸ್ ಹಾವಳಿ ಮಿತಿ ಮೀರಿದ್ದು, ಇತ್ತೀಚೆಗೆ ನಗರಕ್ಕೆ ಆಗಮಿಸಿದ ಉಪ ಲೋಕಾಯುಕ್ತರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪಾಲಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಕೂಡಲೇ ಲೋಕಾಯುಕ್ತರ ಸೂಚನೆ ಉಲ್ಲಂಘಿಸಿದ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಫ್ಲೆಕ್ಸ್ ಅಳವಡಿಸಿದ ವ್ಯಕ್ತಿಗಳಿಂದ ಶುಲ್ಕ ಸಂಗ್ರಹ ಮಾಡಿದರೆ ಪಾಲಿಕೆಗೆ ಆದಾಯವಾದರೂ ಬರುತ್ತಿತ್ತು. ಈಗ ಪಾಲಿಕೆಯ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ