


ಭದ್ರಾವತಿ : ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ ಜಿದ್ದಾಜಿದ್ದಿಯಲ್ಲಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಸುರೇಶ್ ಮರು ನೇಮಕವಾದರು.
ಭದ್ರಾವತಿಯಲ್ಲಿ ಸಾಮಾನ್ಯವಾಗಿ ಚುನಾವಣೆ ಬಂತು ಅಂದ್ರೆ ಸಾಕು ಅದರ ಜಿದ್ದಾಜಿದ್ದಿ ಜೋರು ಇರುವುದು ಕಾಮನ್ ಆಗಿದ್ದು, ಕಾಂಗ್ರೆಸ್ ಜೆಡಿಎಸ್ ಬೆಂಬಲಿಗರು ತಮ್ಮದೇ ತಂಡ ಕಟ್ಟಿ ಮತದಾರರ ಮನವೊಲಿಸಿದರು. ಆದರೆ ಅಂತಿಮವಾಗಿ ವಿಜಯದ ಲಕ್ಷ್ಮಿ ಸುರೇಶ್ ಗೆ ಒಲಿಯಿತು..

ಸುನೀಲ್ ಕೂಡ ಹೆಚ್ಚಿನ ಮತಗಳನ್ನು ತೆಗೆದುಕೊಂಡು ಸ್ಪರ್ಧೆ ಒಡ್ಡಿದ್ದರೂ ಸುರೇಶ್ ಜಯದ ಹಾದಿಯನ್ನು ಸವಿಸೋದಕ್ಕೆ ಆಗಲಿಲ್ಲ. ಸುರೇಶ್ 577 ಮತಗಳನ್ನು ಪಡೆದರೆ ಸುನೀಲ್ ಅಂದಾಜು 400 ಕ್ಕೂ ಹೆಚ್ಚು ಮತಗಳನ್ನು ಪಡೆದರು. ಅಂತಿಮವಾಗಿ ಮತದಾನದ ವಿವರ ಸರಿಯಾದ ಮಾಹಿತಿ ಬರಬೇಕಿದೆ.

ನಗರದ ಜೆಟಿಎಸ್ ಶಾಲೆಯಲ್ಲಿ ಮತದಾನ ನಡೆದಿದ್ದು,
ಅಧ್ಯಕ್ಷ ಸ್ಥಾನಕ್ಕೆ ನೇರ ಪೈಪೋಟಿ ಇತ್ತು. ಸುರೇಶ್ ಹಾಗೂ ಸುನಿಲ್ ಸ್ಪರ್ಧಾಳುಗಳಾಗಿದ್ದರು.. ಈ ನಡುವೆ ಸುರೇಶ್ ಎರಡು ಬಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದು, ಈ ಬಾರಿ ಪುನಃ ಪುನರಾಯ್ಕೆಗೆ ಸ್ಫರ್ಧೆ ಮಾಡಿದ್ದರು. ಇನ್ನು ಪ್ರತಿಸ್ಫರ್ಧಿ ಸುನೀಲ್ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಪೈಪೋಟಿ ಏರ್ಪಟ್ಟಿತ್ತು.
ಪೋಸ್ಟರ್ ಹಿಡಿದು ಮತಕ್ಕಾಗಿ ಬೇಡಿಕೆ
ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನೇ ಆಯ್ಕೆ ಮಾಡಿ ಎಂದು ಸ್ಪರ್ಧಾಳುಗಳ ಬೆಂಬಲಿಗರು ಮತದಾರರನ್ನು ಓಲೈಸುತ್ತಿದ್ದು ಕಂಡು ಬಂತು. ಇನ್ನು ಪೊಲೀಸ್ ಬಿಗಿ ಭದ್ರತೆಯಲ್ಲಿ ಮತದಾನ ನಡೆಯಿತು..ಈ ನಡುವೆ ಗುಂಪು, ಗುಂಪಾಗಿ ಯಾರು ಗೆಲ್ಲುತ್ತಾರೆ, ಎಷ್ಟು ಮತ ಪಡೆದಿರಬಹುದು ಹೀಗೆ ಹತ್ತಾರು ಮಾತುಗಳನ್ನು ಆಡುತ್ತಿದ್ದು ಕಂಡು ಬಂತು. ಪೊಲೀಸರು ಐಡಿ ಕಾರ್ಡ್ ತೆಗೆದುಕೊಂಡು ಒಳ ಬಿಡುತ್ತಿದ್ದರು.
ಮೂರು ವರ್ಷಕ್ಕೊಂದು ಚುನಾವಣೆ
3 ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಿತು.
ಹೋರಾಟಕ್ಕೆ ಹೊಸ ನಾಯಕನ ಆಯ್ಕೆ
ಸುಮಾರು 30 ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗದಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು ಇದೀಗ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಿದರು.
1044 ಗುತ್ತಿಗೆ ಕಾರ್ಮಿಕರು
ಕಾರ್ಖಾನೆಯಲ್ಲಿ 1300ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಸಂಘದಲ್ಲಿ 1044 ಮಂದಿ ಸದಸ್ಯರಿದ್ದಾರೆ. ಉಳಿದಂತೆ ಗುತ್ತಿಗೆ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ 3 ವರ್ಷಗಳ ಅಧಿಕಾರಾವಧಿಯಲ್ಲಿ ಬಹುತೇಕ ಅವಧಿ ಹೋರಾಟದಲ್ಲಿಯೇ ಕಳೆದಿದ್ದಾರೆ. ಆದರೆ ಕಾರ್ಖಾನೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ ಹೊರತು ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ವಿಪರ್ಯಾಸದ ಸಂಗತಿ. ಇಂತಹ ಸಂಕಷ್ಟದ ಸಮಯದಲ್ಲಿ ಪುನಃ ಹೊಸ ನಾಯಕರ ಆಯ್ಕೆಯಲ್ಲಿ ಗುತ್ತಿಗೆ ಕಾರ್ಮಿಕರು ತೊಡಗಿಸಿಕೊಂಡಿರುವುದು ಕ್ಷೇತ್ರದಲ್ಲಿ ಇದೀಗ ಗಮನ ಸೆಳೆಯುತ್ತಿದೆ.
ಹೊಸ ಸಂಚಲನ
ಕೇಂದ್ರ ಬೃಹತ್ ಕೈಗಾರಿಕೆ ಹಾಗು ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿಯವರು ಕಾರ್ಖಾನೆಯನ್ನು ಮರುನಿರ್ಮಾಣಗೊಳಿಸುವ ಕುರಿತು ಹೇಳಿಕೆ ನೀಡಿರುವುದು ಗುತ್ತಿಗೆ ಕಾರ್ಮಿಕರಲ್ಲೂ ಹೊಸ ಸಂಚಲನ ಮೂಡಿದೆ. ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ನೂತನ ನಾಯಕರ ಆಯ್ಕೆ ಚುನಾವಣೆ ಮೂಲಕ ಆಯ್ಕೆಗೊಂಡಿದ್ದು, ಹೋರಾಟ ಮುಂದುವರೆಯುವುದೇ ಅಥವಾ ಸ್ಥಗಿತಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.