ಶಿವಮೊಗ್ಗ.
ಕ್ಯಾನ್ಸರ್ ಮುಕ್ತ ಸಮಾಜಕ್ಕಾಗಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಹಿರಿಯ ಕ್ಯಾನ್ಸರ್ ತಜ್ಞ ಹಾಗೂ ಎಂಐಒ ಮಂಗಳೂರಿನ ನಿರ್ದೇಶಕ ಡಾ. ಸುರೇಶ್ ರಾವ್ ಹೇಳಿದರು.
ಅವರು ಸಾಹಸ ಮತ್ತು ಸಂಸ್ಕøತಿ ಅಕಾಡೆಮಿ, ಮಥುರಾ ರಜತೋತ್ಸವ, ಸಂಧ್ಯಾ ದೀಪ ಶಿವಮೊಗ್ಗ, ಅರ್ಚಕ ವೃಂದ, ಆರೋಗ್ಯ ಭಾರತಿ ಹಾಗೂ ತೀರ್ಥಹಳ್ಳಿಯ ಎಂಐಒ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮಿಗಳ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಮತ್ತು ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತವೂ ಸೇರಿದಂತೆ ಇಡೀ ವಿಶ್ವದಲ್ಲಿ ಕ್ಯಾನ್ಸರ್ ಹಬ್ಬಿದ್ದು, ತಿಳಿವಳಿಕೆ ಕೊರತೆಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಕ್ಯಾನ್ಸರ್ ರೋಗದ ಲಕ್ಷಣಗಳನ್ನು ಬೇಗನೆ ತಿಳಿದುಕೊಂಡು ಪತ್ತೆ ಹಚ್ಚಬೇಕು. ಮುಖ್ಯವಾಗಿ 50 ವರ್ಷ ವಯಸ್ಸಾದವರು ಕಡ್ಡಾಯವಾಗಿ ತಪಾಸಣೆ ಮಾಡಿಸಬೇಕು. ಯಾವ ಕಾಯಿಲೆ ಅಥವಾ ನೋವು ದೀರ್ಘ ಕಾಲ ಇದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಅದು ಕೂಡ ಕ್ಯಾನ್ಸರ್ ನ ಲಕ್ಷಣವಾಗಿರಬಹುದು ಎಂದರು.
ಸಾಮಾನ್ಯವಾಗಿ ಮೂರು ಅಥವಾ ನಾಲ್ಕನೇ ಹಂತಕ್ಕೆ ಕ್ಯಾನ್ಸರ್ ರೋಗ ತಲುಪಿದಾಗ ರೋಗಿಗಳು ವೈದ್ಯರ ಬಳಿಗೆ ಬರುತ್ತಾರೆ. ಈ ಕೊನೆಯ ಹಂತದಲ್ಲಿ ಕಾಯಿಲೆ ಗುಣಪಡಿಸುವುದು ಸಾಧ್ಯವೇ ಇಲ್ಲವಾಗುತ್ತದೆ. ಬದುಕುವ ದಿನಗಳು ಕೂಡ ಕಡಿಮೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಆಗ ನೀಡುವ ಕ್ಯಾನ್ಸರ್ ಚಿಕಿತ್ಸೆಗಳು ಅತ್ಯಂತ ದುಬಾರಿಯಾಗಿರುತ್ತವೆ. ಇದು ಲಕ್ಷದಿಂದ ಕೋಟಿಯವರೆಗೂ ತಲುಪುವ ಸಾಧ್ಯತೆ ಇರುತ್ತದೆ. ಶ್ರೀಮಂತರು ಹೇಗೋ ತೋರಿಸುತ್ತಾರೆ. ಆದರೆ, ತೀರಾ ಬಡವರಿಂದ ಇದು ಸಾಧ್ಯವಿಲ್ಲ ಎಂದರು.
ಆದ್ದರಿಂದ ಪ್ರತಿಯೊಬ್ಬರೂ ಕ್ಯಾನ್ಸರ್ ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬೇಕು. ವಿಶೇಷವಾಗಿ ಮಹಿಳೆಯರಿಗೆ ಸ್ತನ ಮತ್ತು ಗರ್ಭ ಕೋಶದ ಕ್ಯಾನ್ಸರ್ ಕೊನೆ ಹಂತಕ್ಕೆ ಬರಲು 10 ವರ್ಷದಿಂದ 20 ವರ್ಷಗಳತನಕ ಸಮಯವಿರುತ್ತದೆ. ಆದರೂ ಕೂಡ ಮಹಿಳೆಯರು ನಿರ್ಲಕ್ಷ್ಯ ವಹಿಸುತ್ತಾರೆ. ಅದನ್ನು ಬಿಟ್ಟು ಪ್ರಾರಂಭಿಕ ಹಂತದಲ್ಲಿಯೇ ತಪಾಸಣೆಗೆ ಒಳಪಡಿಸಿಕೊಳ್ಳಬೇಕು ಎಂದರು.
ಸಾಮಾನ್ಯವಾಗಿ ಕ್ಯಾನ್ಸರ್ ಲಕ್ಷಣಗಳು ಎಂದರೆ ಮಲ ಮೂತ್ರ ವಿಸರ್ಜನೆಯಲ್ಲಿ ವ್ಯತ್ಯಾಸ, ಮುಟ್ಟಿನಲ್ಲಿ ತೊಂದರೆ, ದೇಹದ ಯಾವುದೇ ಭಾಗದಲ್ಲಿ ಗೆಡ್ಡೆ, ಗಂಟಲಲ್ಲಿ ಸಿಕ್ಕಿಕೊಂಡ ಅನುಭವ, ನಿರಂತರ ಕೆಮ್ಮು ಮುಂತಾದವು ಆಗಿವೆ ಎಂದರು.
ಉತ್ತಮ ಜೀವನ ಶೈಲಿಯಿಂದ ಕ್ಯಾನ್ಸರ್ ಕಾಯಿಲೆ ಬಾರದಂತೆ ತಡೆಗಟ್ಟಬಹುದಾಗಿದೆ. ಸಿಹಿಯನ್ನು ಅತಿಯಾಗಿ ಸೇವಿಸುವುದು, ಗುಟ್ಕಾ, ಸಿಗರೇಟ್ ಬಳಕೆ, ಮದ್ಯಪಾನ ಮುಂತಾದ ಹಲವು ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ಬರಬಹುದಾಗಿದೆ ಎಂದರು.
ಭಾರತದಲ್ಲಿ ಕ್ಯಾನ್ಸರ್ ಕಾಯಿಲೆಗೆ ಇದುವರೆಗೂ ಔಷಧಿಯನ್ನು ಕಂಡುಹಿಡಿದಿಲ್ಲ. ವಿದೇಶದ ಔಷಧಿಗಳು ಮತ್ತು ಚಿಕಿತ್ಸಾ ಪದ್ಧತಿ ನಮ್ಮಲ್ಲಿದೆ. ಭಾರತ ಕೂಡ ಇದಕ್ಕೆ ಮುಂದಾಗಬೇಕು. ನಮ್ಮ ಆಯುರ್ವೇದ ಪದ್ಧತಿಯಿಂದಲೂ ಕೂಡ ಪ್ರಾರಂಭದ ಹಂತದ ಕ್ಯಾನ್ಸರ್ ಅನ್ನು ಗುಣಪಡಿಸಲು ಸಾಧ್ಯವಿದೆ. ಯೋಗ ಸೇರಿದಂತೆ ಉತ್ತಮ ಹವ್ಯಾಸಗಳಿಂದ ಯಾವುದೇ ಕಾಯಿಲೆಗಳನ್ನು ದೂರವಿಡಬಹುದು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಗುರುರಾಜ್, ಡಾ. ಭವ್ಯ ಕೆ.ಪಿ. ಅಂಬಿಕಾ ನಾಗಭೂಷಣ್ ಅವರು ಕಾಯಿಲೆಗಳ ಬಗ್ಗೆ ಉಪನ್ಯಾಸ ನೀಡಿದರು.
ಸಾಹಸ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಎ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಸಂತ್ ಹೋಬಳಿದಾರ್, ಶ್ರೀನಿವಾಸ್ ಪುರಾಣಿಕ್, ಶ್ರೀಧರ್, ಎನ್. ಗೋಪಿನಾಥ್, ವಿನಾಯಕ ಬಾಯರಿ ಮುಂತಾದವರಿದ್ದರು.
ಅ.ನಾ. ವಿಜಯೇಂದ್ರರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಿ. ಕೃಷ್ಣಾನಂದ ನಿರೂಪಿಸಿದರು. ಪಲ್ಲವಿ ಸ್ವಾಗತಿಸಿದರು. ಡಾ. ಸೌಮ್ಯಾ ರಾವ್ ಪ್ರಾರ್ಥಿಸಿದರು.