ಕೊಪ್ಪಳ : ಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಹೊರ ಹೋದ ಬೆನ್ನೇಲೆ ಈಗ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟಿನ ಚೈನ್ ಕಟ್ಟಾಗಿ ಗೇಟ್ ಮೂಲಕ ಅಪಾರ ಪ್ರಮಾಣದ ನೀರು, ನದಿ ಪಾತ್ರಕ್ಕೆ ಹರಿಯುತ್ತದೆ. ಈ ಘಟನೆ ರಾತ್ರಿ 11 ಗಂಟೆ ವೇಳೆಗೆ ನಡೆದಿದ್ದು ನದಿ ಪಾತ್ರದ ಜನರಲ್ಲಿ ಭಾರಿ ಆತಂಕವನ್ನೇ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಹರಿದು ಬಂದಿದೆ. ತುಂಗಭದ್ರಾ ಡ್ಯಾಂ ಒಟ್ಟು 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು ಆದರೆ ಡ್ಯಾಂನಲ್ಲಿ 33 ಟಿಎಂಸಿ ಹೂಳು ತುಂಬಿದ ಹಿನ್ನೆಲೆಯಲ್ಲಿ ಡ್ಯಾಂ ಸಂಗ್ರಹ ಸಾಮರ್ಥ್ಯ 100 ಟಿಎಂಸಿಯಷ್ಟಿದೆ.
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 100 ಟಿಎಂಸಿ ಅಷ್ಟು ನೀರು ಒಡಲಾಳದಲ್ಲಿದೆ. ನದಿಯ ನೀರಿನ ಒಳ ಹರಿವಿನ ಹೆಚ್ಚಳದ ಸ್ಥಿತಿ ನೋಡಿ ಡ್ಯಾಮ್ ನ ಟ್ರಸ್ಟ್ ಗೇಟ್ ಗಳ ಮೂಲಕ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ಆದರೆ ಶನಿವಾರ ರಾತ್ರಿ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ನ ಚೈನ್ ಕಟ್ಟಾಗಿದ್ದು ಗೇಟ್ ನ ಮೂಲಕ 35,000 ಕ್ಯೂಸೆಕ್ ಗೂ ಕ್ಕೂ ಹೆಚ್ಚು ನೀರು ನದಿ ಪಾತ್ರಕ್ಕೆ ಹರಿಯುತ್ತಿದೆ. ಇದು ನದಿ ಪಾತ್ರದ ಹಳ್ಳಿಗಳಲ್ಲಿ ಭಾರಿ ಆತಂಕವನ್ನು ಉಂಟು ಮಾಡಿದೆ.
ತುಂಗಭದ್ರಾ ನೀರಾವರಿ ಇಲಾಖೆಯು ಸಹ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಸ್ಥಳಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಸೇರಿದಂತೆ ನೀರಾವರಿ ಇಲಾಖೆಯ ತಜ್ಞರ ತಂಡವು ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಮುಖ್ಯ ಗೇಟ್ ನ ಚೈನ್ ಕಟ್ ಆಗಿರುವುದರಿಂದ ಅದನ್ನು ದುರಸ್ತಿ ಮಾಡುವುದು ಕಷ್ಟ ಸಾಧ್ಯವಾಗಿದೆ. ನೀರಾವರಿಯ ತಜ್ಞ ಅಧಿಕಾರಿಗಳಿಗೂ ಸಹಿತ ದೊಡ್ಡ ಸವಾಲು ಎದುರಾಗಿದೆ. ಸ್ಥಳದಲ್ಲಿಯೇ ವಿವಿಧ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
ವಿವಿಧ ತಂತ್ರಜ್ಞಾನ ಸಂಪರ್ಕದ ಮೋರೆ ಹೋಗಿದ್ದಾರೆ. ಈ ಹಿಂದೆಯೂ ಸಹ ಡ್ಯಾಂ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಡ್ಯಾಂನಿಂದ ನದಿಪಾತ್ರಕ್ಕೆ ಹರಿದು ಹೋಗಿತ್ತು. ಆಗಲೂ ಸಹ ಗೇಟ್ ದುರಸ್ಥಿಗೆ ನೀರಾವರಿ ತಜ್ಞರ ತಂಡ ಹರಸಾಹಸ ಮಾಡಿದ್ದರು. ಈಗ ಮುಖ್ಯ ಕ್ರಸ್ಟ್ ಗೇಟ್ ಚೈನ್ ಕಟ್ ಆಗಿ ಭಾರಿ ಆತಂಕ ಮೂಡಿಸಿದೆ.