ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತಂತೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನೇಲೆ ಈಗ ಹಾಲಿ ಅಧ್ಯಕ್ಷ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ 20ರೊಳಗೆ ನಿರ್ಧಾರವಾಗಲಿದೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಮೊದಲುಇ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ನಂತರ ರಾಜ್ಯಾಧ್ಯಕ್ಷ ಯಾರಾಗಬೇಕೆಂದು ತೀರ್ಮಾನವಾಗಲಿದೆ. ಈ ಸಂಬಂಧ ದೆಹಲಿಯಲ್ಲಿ ಪ್ರಕ್ರಿಯೆಗಳು ನಡೆಯುತ್ತಿದೆ. ಸದ್ಯವೇ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದಾರೆ. ಎಲ್ಲ ಶಾಸಕರ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಕೇಂದ್ರದ ಶಿಸ್ತು ಸಮಿತಿ ಯತ್ನಾಳರಿಗೆ ನೋಟಿಸ್ ಕೊಟ್ಟಿದ್ದು, 72 ಗಂಟೆಗಳ ಗಡುವು ಕೂಡ ಇತ್ತು. ಇದಾದ ಬಳಿಕ ಏನಾಗುತ್ತಿದೆ ಎಂಬುದು ನನಗೆ ಗೊತ್ತಿಲ್ಲ, ಆ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದ ಅವರು ಕೇಂದ್ರದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ, ಅವರು ಹಿರಿಯರು ಅವರ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.ಯತ್ನಾಳ್‌ರಿಗೆ ನೋಟಿಸ್ ಕೊಡಲು ತಾಕತ್ತಿಲ್ಲ ಎಂಬ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜಣ್ಣ ಅವರು ನಮ್ಮ ಪಕ್ಷದವರೇ? ಅವರು ಕಾಂಗ್ರೆಸ್ ಪಕ್ಷದವರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ ಎಂದರು.

ವಿಶ್ವವಿದ್ಯಾಲಯಗಳಿಗೆ ಹೆಚ್ಚು ಹಣ ಕೊಡಬೇಕಿರುವುದರಿಂದ ಅವುಗಳನ್ನು ಮುಚ್ಚಲು ಸರಕಾರ ಸನ್ನದ್ದವಾಗಿದೆ. ಇದು ದುರದೃಷ್ಟಕರ. ಅದರಲ್ಲೂ ಬಿಜೆಪಿ ಸರಕಾರ ಇದ್ದಾಗ ತೆರೆದ ಹೊಸ ವಿವಿಗಳನ್ನು ಮುಚ್ಚುವ ಕೆಲಸವನ್ನು ಸರಕಾರ ಮಾಡುತ್ತಿದೆ. ವಿವಿಗಳಿಗೆ 300 ಕೋಟಿ, 400 ಕೋಟಿ ಅನುದಾನ ಕೊಡಬೇಕಿದೆ. ಅನುದಾನ ಕೊಟ್ಟರೆ ವಿವಿಗಳು ಕೆಲಸ ಮಾಡಲು ಸಾಧ್ಯ ಮತ್ತು ಅದರಿಂದ ಬಡ ಮಕ್ಕಳಿಗೆ ಅನುಕೂಲ ಆಗುತ್ತದೆ. ಕಾಂಗ್ರೆಸ್ ಸರಕಾರದ ನಿರ್ಧಾರ ಶೋಭೆ ತರುವುದಿಲ್ಲ ಇದರಿಂದ ಒಳಿತಾಗುವುದಿಲ್ಲ, ಬದಲಾಗಿ ಮಕ್ಕಳಿಗೆ ಅನಾನುಕೂಲ ಆಗಲಿದೆ. ಮಕ್ಕಳಿಗೆ ಇವತ್ತು ಅನ್ಯಾಯ ಆಗುತ್ತಿದೆ. ಇನ್ನಾದರೂ ರಾಜ್ಯ ಸರಕಾರ ಎಚ್ಚತ್ತುಕೊಂಡು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸಿದರು.

ಗ್ಯಾರಂಟಿಗಳಿಂದ ಅನುದಾನ ಹೊಂದಿಸಲು ಸಾಧ್ಯವಾಗುತ್ತಿಲ್ಲ, ಪೆಟ್ರೋಲ್ ದರ ಏರಿಸಿದರು. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಬೇರೆ ಬೇರೆ ಬೆಲೆ ಏರಿಕೆ ಆಗುತ್ತಿದೆ. ಅನುದಾನ ಕೊಡಲು ಆಗದೆ ಯುನಿವರ್ಸಿಟಿಗಳನ್ನು ಮುಚ್ಚಿಹಾಕುವ ಕೆಲಸವನ್ನು ರಾಜ್ಯ ಸರಕಾರ ಹೊರಟಿದೆ. ಇದನ್ನು ಖಂಡಿತವಾಗಿ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

Share.
Leave A Reply

Exit mobile version