ದಾವಣಗೆರೆ: ಮತದಾನ ಸಂವಿಧಾನ ನೀಡಿರುವ ಅಮೂಲ್ಯ ಹಕ್ಕು. ತಪ್ಪದೇ ಎಲ್ಲರೂ ಮತದಾನದ ಹಕ್ಕು ಚಲಾಯಿಸಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಎಂದು ಮನವಿ ಮಾಡಿದರು.
ತಾಲೂಕಿನ ಆನಗೋಡು ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಮತದಾನ ತಾವು ಇಚ್ಛಿಸಿದ ಅಭ್ಯರ್ಥಿಗೆ ಹಾಕಬಹುದು. ಯಾವುದೇ ರೀತಿಯ ಗೊಂದಲಗಳಿಲ್ಲದೆ ನಿಸ್ಸಂಶ, ನಿರಾಳವಾಗಿ ಮತ ಚಲಾಯಿಸಬೇಕೆಂದರು.
ಮತದಾನ ನಮ್ಮ ಹೆಮ್ಮೆಯ ಸಂಕೇತ. ಬದಲಾವಣೆಗೆ ಇರುವ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರ. ಪ್ರತಿಯೊಬ್ಬರೂ ತಪ್ಪದೇ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕೆಂದು ಕೋರಿದರು.
ಅರ್ಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಿಮ್ಮ ಮತ ವ್ಯರ್ಥವಾಗಬಾರದು. ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕೆಂದು ಮನವಿ ಮಾಡಿದರು.