ಹೊನ್ನಾಳಿ (ದಾವಣಗೆರೆ): ಹತ್ತು ರೂಪಾಯಿ ಟೂಥ್ ಪೇಸ್ಟ್ ನೀಡಿ ಅದರೊಳಗಿರುವ ಲಾಟರಿ ಬಂದ್ರೆ ನಿಮಗೆ ಫ್ರಿಡ್ಜ್, ಎಲ್‍ಇಡಿ ಟಿವಿ, ವಾಷಿಂಗ್ ಮಷಿನ್, ಚಾರ್ಜೆಬಲ್ ಸ್ಕೂಟಿ ನೀಡಲಾಗುವುದು ಎಂದು ನಂಬಿಸಿ ಸಾಕಷ್ಟು ಜನ ಹಣ ಕಳೆದುಕೊಂಡಿರುವ ಘಟನೆ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ಏನಿದು ವಂಚನೆ
ಒಂದು ಟೂಥ್ ಪೇಸ್ಟ್‌ನ್ನು ರೂ. 10ಕ್ಕೆ ನೀಡಿರುವ ವಂಚಕರು, ಅದರಲ್ಲಿ ಲಾಟರಿ ಟಿಕೆಟ್ ಇರಿಸಿ ಲಾಟರಿಯಲ್ಲಿ ಆಯ್ಕೆಯಾದರೆ ಫ್ರಿಡ್ಜ್, ಎಲ್‍ಇಡಿ ಟಿ.ವಿ, ವಾಷಿಂಗ್ ಮೆಷಿನ್, ಚಾರ್ಜೆಬಲ್ ಸ್ಕೂಟಿ ಬಹುಮಾನವಾಗಿ ಸಿಗುತ್ತದೆ ಎಂದು ಸುಳ್ಳು ಹೇಳುವ ಮೂಲಕ ರೂ. 6,500 ಹಣ ಕಟ್ಟಿಸಿಕೊಂಡು ಅದಕ್ಕೆ ಒಂದಿಷ್ಟು ಮನೆ ಬಳಕೆ ವಸ್ತುಗಳನ್ನು ನೀಡಿ ಸಾರ್ವಜನಿಕರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಅದರೊಳಗೆ ವಂಚನೆಗೆ ಒಳಗಾದ ಯಕ್ಕನಹಳ್ಳಿ ಗ್ರಾಮದ ರಾಮಾಂಜನೇಯ ಅವರು ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಪತ್ತು ಜನರಿಗೆ ಮಾತ್ರ ಈ ಸೌಲಭ್ಯ
‘ಕೋಲ್ಗೇಟ್ ಪೇಸ್ಟ್ ಒಳಗಡೆ ಇರುವ ಲಾಟರಿ ಚೀಟಿಯನ್ನು ತೆಗೆದುಕೊಂಡು ಹೊನ್ನಾಳಿಯಲ್ಲಿರುವ ಪಾಂಡುರಂಗಪ್ಪ ಮೆಟಲ್ ಸ್ಟೋರ್‌ಗೆ ಬರಬೇಕು. 20 ಜನರಿಗೆ ಈ ಸೌಲಭ್ಯ ಸಿಗಲಿದೆ. ಯಾರಿಗೆ ಲಾಟರಿ ಹೊಡೆಯುತ್ತದೆಯೋ ಅವರಿಗೆ ಫ್ರಿಡ್ಜ್, ಎಲ್‍ಇಡಿ ಟಿವಿ, ವಾಷಿಂಗ್ ಮಷಿನ್, ಚಾರ್ಜೆಬಲ್ ಸ್ಕೂಟಿ ನೀಡಲಾಗುವುದು ಎಂದು ಮುಗ್ಧ ಜನರನ್ನು ನಂಬಿಸುತ್ತಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಳ್ಳಿಗಳೇ ಟಾರ್ಗೇಟ್
ಹಳ್ಳಿಗಳಿಗೆ ವ್ಯಾಪಾರಕ್ಕೆ ಬಂದ ಸಂದರ್ಭದಲ್ಲಿ ರೂ. 6,500 ಕಟ್ಟಿಸಿಕೊಂಡು ಆ ಹಣಕ್ಕೆ ಒಂದು ಮಿಕ್ಸರ್, ದೋಸೆ ತವಾ, ಕುಕ್ಕರ್ ಮತ್ತು ಹರಿವಾಣವನ್ನು ನೀಡಿದ್ದರು. ಹೊನ್ನಾಳಿಗೆ ಬಂದು ಡ್ರಾನಲ್ಲಿ ತಪ್ಪದೇ ಭಾಗವಹಿಸುವಂತೆ ಹೇಳಿದ್ದರು. ಅದರಂತೆ ಜ.6 ರಂದು ಲಾಟರಿ ಚೀಟಿಯನ್ನು ಹೊನ್ನಾಳಿಯಲ್ಲಿರುವ ಪಾಂಡುರಂಗಪ್ಪ ಮೆಟಲ್ ಸ್ಟೋರ್‌ಗೆ ತಂದು ತೋರಿಸಿದಾಗ ಅವರು ಈ ಲಾಟರಿ ಚೀಟಿಗೂ ನಮಗೂ ಸಂಬಂಧವಿಲ್ಲ. ನಾವು ಯಾರನ್ನೂ ಕಳುಹಿಸಿಲ್ಲ. ಇದೇ ರೀತಿ ಎರಡು ಮೂರು ದಿನಗಳಿಂದ 20ರಿಂದ 30 ಜನ ಬಂದು ವಿಚಾರಿಸಿಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.ಮೋಸ ಹೋಗಿರುವುದು ತಿಳಿದು ದೂರು ನೀಡಿದ್ದು, ವಂಚಕರನ್ನು ಕೂಡಲೇ ಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.