ದಾವಣಗೆರೆ : ನೀವೇನಾದ್ರೂ ಸಂತಸಕ್ಕೋ ಅಥವಾ ದುಃಖಕ್ಕೋ ಪಾರ್ಟಿ ಮಾಡಬೇಕೆಂದು ಬಿಯರ್ ತರಲು ಹೊರಟರೆ ಜ.20 ರೊಳಗೆ ತರಬೇಕು..ಜ.20 ರನಂತರ ತಂದರೆ ನಿಮ್ಮ ಕಿಸೆಯಲ್ಲಿನ ಹಣ ಖಂಡಿತ ಖಾಲಿಯಾಗಲಿದೆ.

ಹೌದು..ಈ ಮಾತು ಹೇಳೋದಕ್ಕೆ ಕಾರಣವೂ ಇದ್ದು, ಸರಕಾರ ಬಿಯರ್ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಸದ್ಯ ಹಾಟ್ ಡ್ರೀಂಕ್ಸ್ ಗೆ ಹೋಲಿಸಿದರೆ ಬಿಯರ್ ಕೊಂಚ ಮಟ್ಟಿಗೆ ಪರವಾಗಿಲ್ಲ. ಆದ್ದರಿಂದ ಹೆಚ್ಚಿನದಾಗಿ ಎಲ್ಲರೂ ಬಿಯರ್ ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಬಿಯರ್ ಕೂಡ ಹೆಚ್ಚು ಸೇಲ್ ಆಗುತ್ತಿದೆ. ಈ ಕಾರಣದಿಂದ ದರ ಹೆಚ್ಚಳ ಮಾಡಿದರೆ ಹಲವರು ಹಾಟ್ ಡ್ರೀಂಕ್ಸ್ ಗೆ ಹೋಗುತ್ತಾರೆ ಎಂಬ ಚಿಂತನೆ ಸರಕಾರದ್ದಾಗಿದೆ.

ಬಜೆಟ್ ಗೂ ಮುನ್ನ ದರ ಏರಿಕೆ

ಜ.20 ರ ನಂತರ ಬಿಯರ್ ನ ಪರಿಷ್ಕೃತ ದರ ಹೊರಬೀಳುವ ಸಾಧ್ಯತೆ ಇದೆ. ಬಜೆಟ್ ಮುನ್ನವೇ ಹೊಸ ದರ ಬರುವ ನಿರೀಕ್ಷೆ ಇದೆ. ಈಗಾಗಲೇ 6 ತಿಂಗಳ ಹಿಂದೆ ಬಿಯರ್ ಸೇರಿದಂತೆ ಮದ್ಯದ ತೆರಿಗೆ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಈಗ ಬಜೆಟ್ ಗೂ ಮುನ್ನ ಮತ್ತೆ ಬಿಯರ್ ಗಳ ತೆರಿಗೆ ಹೆಚ್ಚಿಸಿ ಆ ಮೂಲಕ ಬೊಕ್ಕಸ ತುಂಬಿಸಿಕೊಳ್ಳಲು ಕೈಹಾಕಿದೆ.

ಎಷ್ಟಾಗುತ್ತದೆ ದರ

ಜ.20 ರ ನಂತರ 10 ರಿಂದ 40 ರೂ.ಗಳವರೆಗೆ ಹೆಚ್ಚಿಸಲು ಚಿಂತಿಸಿರುವ ಸರ್ಕಾರ ಈಗಾಗಲೇ ನೋಟಿಫಿಕೇಷನ್ ಸಹ ಹೊರಡಿಸಿದೆ. 100 ರೂ.ನಿಂದ 150 ರೂ. ವರೆಗೆ ಇರುವ ಬಿಯರ್ ಗಳಿಗೆ 10 ರೂ. 150 ರೂ.ನಿಂದ 200 ರೂ. ವರೆಗಿನ ಬಿಯರ್ ಗಳು 20 ರೂ. 200 ರೂ.ಗಳಿಂದ 250 ರೂ.ಗಳಿಗೆ 30ರೂ. 250 ರಿಂದ 300 ರೂ.ಗೆ 40 ರೂ. ಹೆಚ್ಚಿಸುವ ಸಾಧ್ಯತೆಯಿದೆ.ಈಹಿಂದೆ 99 ರೂ. ಇದ್ದ ಬಿಯರ್ ಗಳು 120 ರೂ.ವರೆಗೆ ತೆರಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. 150 ರೂ. ಗೆ ಮಾರಾಟವಾಗುತ್ತಿದ್ದ ಬಿಯರ್ ಗಳಿಗೆ ಈಗ 35 ರೂ. ತೆರಿಗೆ ವಿಧಿಸಿ 185 ರೂ. ನಿಗದಿ ಪಡಿಸಿ ಆದೇಶಿಸಿದ ಸರ್ಕಾರ ಒಂದು ವರ್ಷದ ಒಳಗೆ ಇದರ ದರವನ್ನ ಹೆಚ್ಚಿಸಲು ಮುಂದಾಗಿದೆ.

ಬೇಸಿಗೆಯಲ್ಲಿ ಬಿಯರ್ ಹೆಚ್ಚು ಸೇವನೆ

ಈಗಾಗಲೇ ಮದ್ಯ ದರ ಹೆಚ್ಚಿಸಿದ್ದರಿಂದ ಶೇ10 ರಿಂದ ಶೇ.15 ರವರೆಗೆ ಮದ್ಯ ಮಾರಾಟದ ಮೇಲೆ ಹೊಡೆತ ಬಿದ್ದಿದ್ದು, ಈಗ ಇನ್ನಷ್ಟು ನಷ್ಟ ಮದ್ಯ ಮಾರಾಟಗಾರರ ಮೇಲೆ ಬೀಳಲಿದೆ. ಇನ್ನು ಬೇಸಿಗೆ ಹತ್ತಿರವಿರುವುದರಿಂದ ಬಿಯರ್ ಗೆ ಬೇಡಿಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಬಜೆಟ್ ಗೂ ಮುನ್ನ ದರ ಹೆಚ್ಚಳಕ್ಕೆ ಕೈಹಾಕಿದೆ

ಅಬಕಾರಿಯಿಂದ ನಿರೀಕ್ಷಿತ ಆದಾಯವಿಲ್ಲ

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಅಬಕಾರಿಯಿಂದ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಸರಕಾರ ಬಜೆಟ್‌ಗೆ ಮುನ್ನವೇ ಬಿಯರ್ ದರ ಏರಿಕೆ ಮಾಡಿದೆ.ಮೊದಲೇ ಐಎಂಎಲ್ ಹಾಗೂ ಬಿಯರ್ ಮಾರಾಟ ಕುಸಿತ ಕಂಡು ಅಬಕಾರಿ ಉದ್ಯಮವೇ ಸಂಕಷ್ಟ ಎದುರಿಸುತ್ತಿರುವ ಹೊತ್ತಿನಲ್ಲಿ ಸರಕಾರ ಸುಂಕ ಏರಿಕೆ ಮೂಲಕ ಬಿಯರ್ ಪ್ರಿಯರ ಮೇಲೆ ದೊಡ್ಡ ಬರೆ ಎಳೆದಿದೆ.

ಆಲ್ಕೋಹಾಲ್ ಹಂತದ ಮೇಲೆ ದರ ಹೆಚ್ಚಳ

ಪ್ರತಿ ಬಿಯರ್ ಬಾಟಲಿಗೆ ಕನಿಷ್ಠ 10ರಿಂದ 50 ರೂ.ಗಳವರೆಗೆ ಅದರಲ್ಲಿನ ಆಲ್ಲೋಹಾಲ್ ಹಂತದ ಮೇಲೆ ದರ ಹೆಚ್ಚಾಗಲಿದೆ. ಲ್ಯಾಗರ್ ಬಿಯರ್ (ಕಡಿಮೆ ಆಲ್ಕೋಹಾಲ್ ಅಂಶವಿರುವ) ಬಿಯರ್‌ಗಳ ದರ ಅಷ್ಟೇನೂ ಹೆಚ್ಚಾಗುವುದಿಲ್ಲ. ಆದರೆ, ಸ್ಟ್ರಾಂಗ್ ಬಿಯರ್‌ಗಳ ಬೆಲೆ ಭಾರಿ ಏರಿಕೆಯಾಗಲಿದೆ. ಉದಾಹರಣೆಗೆ ಸಾಮಾನ್ಯ ಜನರು ಹೆಚ್ಚು ಸೇವಿಸುವ ಬುಲೆಟ್ ಬಿಯರ್ ಬೆಲೆ ಸದ್ಯ 98 ರೂ. ಇದ್ದರೆ, ಅದು 145 ರೂ.ಗೆ ಏರಿಕೆಯಾಗಲಿದೆ. ಪರಿಷ್ಕೃತ ದರ ಇದೇ 20ರಿಂದ ಜಾರಿಗೆ ಬರಲಿದೆ.

ಆಗಸ್ಟ್‌ನಲ್ಲಿಯೇ ಕರಡು

2024-25 ಮುಖ್ಯಮಂತ್ರಿ ನೆರೆಯ ರಾಜ್ಯದ ಬೆಲೆಗಳಿಗೆ ಅನುಗುಣವಾಗಿ ಐಎಎಲ್ (ಇಂಡಿಯನ್ ಮೇಡ್ ಲಿಕ್ಕರ್) ಹಾಗೂ ಬಿಯರ್ ಸ್ಟ್ರಾಬ್ ಗಳನ್ನು ಪರಿಷ್ಕರಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ, ಐಎಂಎಲ್ ದರ ಪರಿಷ್ಕರಿಸಲಾಗಿತ್ತು. ಆದರೆ, ಬಿಯರ್ ಮೇಲಿನ ನಾಲೈದು ತಿಂಗಳ ಹಿಂದೆಯೇ ಬಿಯರ್ ದರ ಪರಿಷ್ಕರಣೆಗೆ ಕರಡು ಅಧಿಸೂಚನೆ ಪ್ರಕಟಿಸಿ ಆಕ್ಷೇಪಣೆ ಸ್ವೀಕರಿಸಲಾಗಿತ್ತು. ಆ ಪ್ರಸ್ತಾವಕ್ಕೆ ಈಗ ಸರಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ. ಇದರಿಂದ ಕೆಲ ಬಿಯರ್ ಬ್ರಾಂಡ್‌ಗಳ ಮೇಲೆ ಸುಂಕ ಏರಿಕೆಯಾಗಿ ಹೆಚ್ಚುವರಿ ಆದಾಯ ಸಂಗ್ರಹವಾಗಲಿದೆ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಹೇಳುತ್ತಾರೆ.

ಗುರಿ ಸಾಧನೆ ಬಹುತೇಕ ಅನುಮಾನ

ರಾಜ್ಯಸರಕಾರ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರೂ. ಆದಾಯದ
ಗುರಿ ನೀಡಿದೆ. ಆದರೆ, 2024ರ ಡಿ.31ರವರೆಗೆ ಅಂದರೆ ಮೊದಲ 9 ತಿಂಗಳಲ್ಲಿ 23,733 ಕೋಟಿ ರೂ. ಮಾತ್ರ ಆದಾಯ ಸಂಗ್ರಹವಾಗಿದೆ. ಇನ್ನುಳಿದ ಮೂರು ತಿಂಗಳಲ್ಲಿ ಸುಮಾರು 15 ಸಾವಿರ ಕೋಟಿ ರೂ. ಆದಾಯ ಸಂಗ್ರಹದ ಸವಾಲು ಅಬಕಾರಿ ಮುಂದಿದೆ.ಆದರೆ, ಸದ್ಯದ ಸ್ಥಿತಿಯಲ್ಲಿ ಏಳು ಸಾವಿರ ಕೋಟಿ ರೂ. ಸಂಗ್ರಹ ಮಾಡಿದರೆ ಹೆಚ್ಚೆಚ್ಚು. ಹಾಗಾದರೆ, ಸುಮಾರು ಏಳು ಸಾವಿರ ಕೋಟಿ ರೂ. ಆದಾಯ ಕೊರತೆ ಎದುರಿಸಬೇಕಾಗುತ್ತದೆ. ಅದೇ ಕಾರಣಕ್ಕಾಗಿ ಇದೀಗ ಬಿದುರ್ ಮೇಲಿನ ಸುಂಕ ಏರಿಕೆ ಮಾಡಲಾಗಿದೆ ಎನ್ನುತ್ತಾರೆ ಅಬಕಾರಿ ಉದ್ಯಮದವರು.

ಪರೋಕ್ಷವಾಗಿ ಐಎಂಎಲ್‌ಗೆ ಉತ್ತೇಜನ

ಸರಕಾರ ಈ ರೀತಿ ಬಿಯರ್ ಸುಂಕ ಹೆಚ್ಚಳದ ಮೂಲಕ ಪರೋಕ್ಷವಾಗಿ ಐಎಂಎಲ್ ಮಾರಾಟ ಹೆಚ್ಚಳ ಮಾಡಿಸಲು ಮುಂದಾಗಿದೆ. ಬಿಯ‌ರ್ ಮಾರಾಟದಿಂದ ಸರಕಾರಕ್ಕೆ ಕಡಿಮೆ ಸುಂಕ ಸಂಗ್ರಹವಾಗಲಿದೆ. ಅದೇ ಐಎಂಎಲ್ ಮಾರಾಟ ಜಾಸ್ತಿಯಾದರೆ ಸುಂಕವೂ ದುಪ್ಪಟ್ಟು ಸಂಗ್ರಹವಾಗಲಿದೆ. ಹಾಗಾಗಿ, ಬಿಯರ್ ನಿರುತ್ತೇಜನಗೊಳಿಸಿ ಐಎಂಎಲ್ ಮಾರಾಟ ಹೆಚ್ಚಳವನ್ನು ಪ್ರೋತ್ಸಾಹಿಸುತ್ತಿದೆ.

ಮಾರಾಟ ಕುಸಿತ

ಪ್ರಸಕ್ತ ಹಣಕಾಸು ವರ್ಷದಲ್ಲಿ ನಾನಾ ಕಾರಣಗಳಿಂದಾಗಿ ಮದ್ಯದ ಮಾರಾಟ ಪ್ರಮಾಣ ಇಳಿಕೆಯಾಗಿದೆ. ದರದಲ್ಲಿ ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಾತ್ಮಕತೆ ತರಲು ಐಎಂಎಲ್ ದರದಲ್ಲಿ ರಾಷನಲೈಜೇಷನ್ ಜಾರಿಗೊಳಿಸಿದ್ದರೂ ಮಾರಾಟದಲ್ಲಿ ಹೇಳಿಕೊಳ್ಳುವ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ. ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಡಿಸೆಂಬರ್) ಐಎಂಎಲ್ ಮಾರಾಟ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.1.07ರಷ್ಟು ಕುಸಿತವಾಗಿದೆ. ಬಿಯರ್ ಮಾರಾಟ ಮಾತ್ರ ಶೇ.8.22ರಷ್ಟು ಹೆಚ್ಚಳವಾಗಿದೆ.
ಕಳೆದ ವರ್ಷದ ಮೊದಲ ಮೂರು ತೈಮಾಸಿಕದಲ್ಲಿ 533.26 ಲಕ್ಷ ಕಾರ್ಟನ್ ಬಾಕ್ಸ್ ಐಎಂಎಲ್ ಮಾರಾಟವಾಗಿದ್ದರೆ, ಈ ವರ್ಷ 527.82 ಲಕ್ಷ ಕಾರ್ಟನ್ ಬಾಕ್ಸ್ ಮಾರಾಟವಾಗಿದೆ. ಆದರೆ, ಬಿಯರ್ ಮಾರಾಟ 324.40 ಲಕ್ಷ ಕಾರ್ಟನ್ ಬಾಕ್ಸ್‌ನಿಂದ 351.07 ಲಕ್ಷಟನ್ ಕಾರ್ಟನ್ ಬಾಕ್ಸ್‌ ಗೆ ಏರಿಕೆಯಾಗಿದೆ. ಈ ಎಲ್ಲ ಕಾರಣಗಳಿಂದ ಬಿಯರ್ ದರ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಎಣ್ಣೆಪ್ರಿಯರ ಆಯ್ಕೆ ಹಾಟ್ ಡ್ರಿಂಕಾ ಅಥವಾ ಬಿಯರ್ ಎಂದು ಕಾದು ನೋಡಬೇಕಿದೆ.

Share.
Leave A Reply

Exit mobile version