ಸುನೀಲ್ ಕುಮಾರ್ ಸಿರಿಗೆರೆ
ತರಳಬಾಳು ಹುಣ್ಣಿಮೆ ಮಹೋತ್ಸವವು ಈ ಬಾರಿ ಸರಳವಾಗಿ ಸಾಂಪ್ರದಾಯಿಕವಾಗಿ ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಮಹಾಮಂಟಪ ಮುಂಭಾಗದಲ್ಲಿ ಫೆ. 22 ರಿಂದ 24ರ ವರೆಗೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಜರುಗಲಿದ್ದು, ಸಕಲ ಸಿದ್ದತೆಗಳು ಭರದಿಂದ ಸಾಗಿವೆ.
ಕಾರ್ಯಕ್ರಮ ವೀಕ್ಷಿಸಲು 5 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ದಾಸೋಹ ಮಂಟಪದ ಒಳಭಾಗದಲ್ಲಿ 1 ಎಲ್.ಇ.ಡಿ ಹಾಗೂ ಆಟದ ಮೈದಾನಗಳಲ್ಲಿ 2 ಎಲ್.ಇ.ಡಿಗಳ ವ್ಯವಸ್ಥೆ ಮಾಡಲಾಗಿದೆ.
ವೇದಿಕೆ ಎಡಭಾಗದಲ್ಲಿ ವಿಶೇಷ ಮಂಟಪ ನಿರ್ಮಿಸಿದ್ದು, ಅದರೊಳಗೆ ವಿಶ್ವಬಂಧು ಮರುಳಸಿದ್ದರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪ ನಮನ ಸಲ್ಲಿಸಲಿದ್ದಾರೆ.
3 ದಿನಗಳ ಕಾಲ ಬೆಳಗ್ಗೆಯಿಂದ ರಾತ್ರಿಯವರೆಗೆ ದಾಸೋಹಕ್ಕಾಗಿ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಬಫೆ ಹಾಗೂ ಟೇಬಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಫೆ.22ರಂದು ಸುಮಾರು 25 ಸಾವಿರ, ಫೆ.23 ರಂದು ಸುಮಾರು 30ಸಾವಿರ, ಫೆ.24ರಂದು ಸು 50 ರಿಂದ 60 ಸಾವಿರ ಭಕ್ತಾದಿಗಳ ನಿರೀಕ್ಷೆ ಮಾಡಲಾಗಿದೆ. ಅದರ ತಯಾರಿಗಳು ಜೋರಾಗಿ ನಡೆದಿವೆ. ಜೊತೆಗೆ ಪರಿಕರಗಳ ವೀಕ್ಷಣೆಗೆ 60 ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ.
ರಾಣೇಬೆನ್ನೂರು, ಹುಬ್ಬಳ್ಳಿ ಗುಡಗೇರಿ, ಹಾವೇರಿ ಮರವಂಜಿ, ಚಳಗೇರಿಗಳಿಂದ 30 ಸಾವಿರ ಶೇಂಗಾ ಹೋಳಿಗೆ, ದಿದ್ದಿಗೆ, ಅಸಗೋಡು, ನಲ್ಲೂರು, ಬೆನಕನಹಳ್ಳಿ, ಪಲ್ಲಗಟ್ಟೆ, ಕಂಬತ್ತಳ್ಳಿ, ಬೆಳ್ಳೋಡಿ, ಮುಚ್ಚನೂರು ಎಮ್ಮನಬೇತೂರು ಗ್ರಾಮಗಳಿಂದ 1 ಲಕ್ಷ ಲಾಡುಉಂಡೆ, ತಿಪಟೂರು ತಾಲೂಕಿನಿಂದ 30 ಸಾವಿರ ಕೊಬ್ಬರಿ ಬರ್ಫಿಗಳನ್ನು ಮಹೋತ್ಸವಕ್ಕೆ ಭಕ್ತರು ದಾಸೋಹಕ್ಕಾಗಿ ಸಮರ್ಪಿಸಿದ್ದಾರೆ.
ಫೆ.22 ರ ಕಾರ್ಯಕ್ರಮದಲ್ಲಿ ಏನಿದೆ
ಫೆ.22ರ ಗುರುವಾರ ಸಂಜೆಯ ಕಾರ್ಯಕ್ರಮದಲ್ಲಿ ವಿಜಯಪುರ ಜ್ಞಾನಯೋಗಾಶ್ರಮ ಶ್ರೀ ಬಸವಲಿಂಗ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಶಾಸಕರಾದ ಡಾ.ಎ.ಚಂದ್ರಪ್ಪ, ಬಿ.ಪಿ.ಹರೀಶ್, ಹೆಚ್.ಡಿ.ತಮ್ಮಯ್ಯ, ಬಿ.ದೇವೇಂದ್ರಪ್ಪ ಹಾಗೂ ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾದ ಡಿ.ವಿ.ಪರಮಶಿವಮೂರ್ತಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಆರ್.ಜಿ.ಮುಕುಂದಸ್ವಾಮಿ ಆಗಮಿಸಲಿದ್ದು, ಗಂಗಾವತಿ ಪ್ರಾಣೇಶ್ ಹಾಗೂ ಡಾ. ಅಣ್ಣಾಪುರ ಶಿವಕುಮಾರ್ ಅವರು ಉಪನ್ಯಾಸ ನೀಡಲಿದ್ದಾರೆ. ಜೊತೆಗೆ ವಿಶ್ವಬಂಧು ಮರುಳಸಿದ್ದರ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.