ಶಿಗ್ಗಾವಿ;
“ಪಕ್ಷದ ಕಾರ್ಯಕರ್ತರು, ಜಿಲ್ಲೆಯ ಶಾಸಕರು, ಸಚಿವರು ಸೇರಿದಂತೆ ಎಲ್ಲರ ಒಗ್ಗಟ್ಟಿನಿಂದ ಕಾಂಗ್ರೆಸ್ ಶಿಗ್ಗಾವಿಯಲ್ಲಿ ಯಶಸ್ಸು ಕಂಡಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟರು.
ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಪಠಾಣ್ ಅವರ ಗೆಲುವಿನ ಹಿನ್ನೆಲೆಯಲ್ಲಿ ಭಾನುವಾರ ನಡೆದ ಕೃತಜ್ಞತಾ ಸಮಾವೇಶದಲ್ಲಿ ಶಿವಕುಮಾರ್ ಮಾತನಾಡಿದರು.
“ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ ಮತದಾರರು ಹಾಗೂ ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಸಲ್ಲಿಸಲು ನಾವು ಇಲ್ಲಿಗೆ ಆಗಮಿಸಿದ್ದೇವೆ.
ನಾನು 2020ರ ಆಗಸ್ಟ್ ನಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ನಾನು ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಹೇಳಿದ್ದೆ.
ಶಿಗ್ಗಾವಿ ಕ್ಷೇತ್ರದಲ್ಲಿನ ಗೆಲವು ಕೇವಲ ಪಠಾಣ್ ಅವರ ಗೆಲುವಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹಾಗೂ ಮತದಾರರ ಗೆಲುವು.
ಹಾವೇರಿ ಉತ್ತರ ಕರ್ನಾಟಕದ ಹೆಬ್ಬಾಗಿಲು. ಈ ಜಿಲ್ಲೆಯ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ನೀಡಿ, ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಿ ರಾಜ್ಯಕ್ಕೆ ಒಂದು ಸಂದೇಶ ನೀಡಿದ್ದೀರಿ.
ಈ ಕ್ಷೇತ್ರ ಕೇವಲ ಪಠಾಣ್ ಅವರ ಕ್ಷೇತ್ರ ಮಾತ್ರವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರವಾಗಿ ಪರಿವರ್ತನೆ ಆಗಲಿದೆ. ಸಿದ್ದರಾಮಯ್ಯ, ಶಿವಾನಂದ ಪಾಟೀಲ್, ಸತೀಶ್ ಜಾರಕಿಹೊಳಿ ಅವರು ಈ ಕ್ಷೇತ್ರದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಅವರು ಸೂರಿಲ್ಲದ ಜನರ ಪಟ್ಟಿ ಮಾಡಿ ಅವರಿಗೆ ಮನೆ ನೀಡುವ ಕೆಲಸ ಮಾಡುತ್ತಿದ್ದಾರೆ. ನಾನು ಈ ಕ್ಷೇತ್ರದ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನಾವೆಲ್ಲ ಒಟ್ಟಾಗಿ ಸೇರಿ ನಿಮ್ಮ ಸೇವೆ ಮಾಡುತ್ತೇವೆ.
ಶಿಗ್ಗಾವಿ ಹಾಗೂ ಚನ್ನಪಟ್ಟಣ ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ. ಅವರ ಸುಪುತ್ರರು ಸ್ಪರ್ಧಿಸಿದಂತಹ ಕ್ಷೇತ್ರ. ಈ ಕ್ಷೇತ್ರಗಳ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿ ಎಂದು ನಮ್ಮ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ವೇಣುಗೋಪಾಲ್ ಅವರು ಕರೆ ಮಾಡಿ ಹೇಳಿದರು.
ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಬೆಳಗಾವಿಯಲ್ಲಿ ನಡೆಸಿದ ಅಧಿವೇಶನಕ್ಕೆ ಶತಮಾನೋತ್ಸವದ ಸಂಭ್ರಮ. ಹೀಗಾಗಿ ಇದೇ 27ರಂದು ಬೆಳಗಾವಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಆ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ನಾವು ಆಹ್ವಾನ ನೀಡುತ್ತಿದ್ದೇವೆ.
ನಮ್ಮ ಸರ್ಕಾರ ನುಡಿದಂತೆ ನಡೆದು ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಬಿಜೆಪಿ ಅಥವಾ ಜೆಡಿಎಸ್ ನವರಿಂದ ಇಂತಹ ಕಾರ್ಯಕ್ರಮ ನೀಡಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿಗಳು ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ನಮ್ಮ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡುತ್ತಿದ್ದರು. ಈ ಯೋಜನೆಗಳು ಜಾರಿ ಮಾಡಲು ಸಾಧ್ಯವಿಲ್ಲ ಎಂದರು. ಆದರೆ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ.
ಮಹಾರಾಷ್ಟ್ರ, ಮಧ್ಯಪ್ರದೇಶ, ಹರ್ಯಾಣ ಸೇರಿದಂತೆ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ನಮ್ಮ ಕಾರ್ಯಕ್ರಮಗಳನ್ನು ನಕಲು ಮಾಡಿದ್ದಾರೆ. ಆಮೂಲಕ ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.
ನಾವು ಜನರ ಭಾವನೆ ಮೇಲೆ ರಾಜಕಾರಣ ಮಾಡುತ್ತಿಲ್ಲ, ಜನರ ಬದುಕಿನಲ್ಲಿ ಬದಲಾವಣೆ ತರಲು ರಾಜಕಾರಣ ಮಾಡುತ್ತಿದ್ದೇವೆ. ನಮಗೆ ಎಲ್ಲಾ ಜಾತಿ, ಧರ್ಮಗಳು ಒಂದೇ.
ಬಸವಣ್ಣ, ಶಿಶುನಾಳ ಶರೀಫರ ಚಿಂತನೆಯೇ ಕಾಂಗ್ರೆಸ್ ಪಕ್ಷದ ಚಿಂತನೆ. ಧರ್ಮ ಯಾವುದಾದರೂ ತತ್ವ ಒಂದೇ ಎನ್ನುವಂತೆ ಈ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಜನ ಮತ ನೀಡಿದ್ದೀರಿ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇವುಗಳೇ ನಮ್ಮ ಸಾಕ್ಷಿ ಗುಡ್ಡೆ.
ಪಠಾಣ್ ಅವರು ಶಾಸಕರಲ್ಲ, ನಿಮ್ಮ ಸೇವಕರು. ಅವರು ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಷ್ಟ ಕೇಳುತ್ತಾರೆ. 2028ಕ್ಕೆ ರಾಜ್ಯದಲ್ಲಿ ಮತ್ತೆ ನಿಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ನಮ್ಮೆಲ್ಲರಿಗೂ ವಿಶ್ವಾಸವಿದೆ. ಅದಕ್ಕೆ ಈ ಉಪಚುನಾವಣೆಯಲ್ಲಿ ನೀವು ಮುನ್ನುಡಿ ಬರೆದಿದ್ದೀರಿ. ಈ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲಾ ಕಾರ್ಯಕರ್ತರು, ನಾಯಕರಿಗೆ ಧನ್ಯವಾದಗಳು.