ಬೆಂಗಳೂರು: ದೇವನಗರಿಯಲ್ಲಿ ಆಗಾಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಹರಿಹರ ಶಾಸಕ ಬಿ.ಪಿ.ಹರೀಶ್ ನಡುವೆ ಜುಗಲ್ ಬಂಧಿ ನಡೆಯುತ್ತಿದ್ದು, ಈಗ ಎಸ್‌ಎಸ್‌ಎಂ ಶಾಸಕ ಹರೀಶ್ ವಿರುದ್ಧ ಸ್ಟೋಟಕ ಹೇಳಿಕೆ ನೀಡಿರುವುದು. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿರುವಂತೆ ಹರಿಹರ ಶಾಸಕ ಬಿ.ಪಿ.ಹರೀಶ್ 2014 ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮನೆಯ ಬಾಗಿಲು ಕಾಯುತ್ತಿದ್ದರು. ನಮ್ಮ ಪರವಾಗಿಯೇ ಪ್ರಚಾರ ಮಾಡಿದ್ದು ನಿಜ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.

ಮನೆ ಬಾಗಿಲು ಕಾದಿದ್ದು ನಿಜ

2014ರ ಲೋಕಸಭಾ ಚುನಾವಣೆ ವೇಳೆ ಹರೀಶ್ ಸಿದ್ದೇಶ್ವರ ವಿರುದ್ಧ ಏನೆಲ್ಲ ಮಾತನಾಡಿದ್ದು, ನಮ್ಮ ಮನೆಯ ಬಾಗಿಲು ಕಾದಿದ್ದು ಎಲ್ಲವೂ ನಿಜ. ಕಾಂಗ್ರೆಸ್ ಸೇರಲು ಬಂದಿದ್ದು ರೇಣುಕಾಚಾರ್ಯ ಅಲ್ಲ ಎಂದು ತಿಳಿಸಿದರು.2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿಲ್ಲ ಎಂದಾದರೆ ಧರ್ಮಸ್ಥಳದಲ್ಲಿ ಗಂಟೆ ಹೊಡೆಯುವಂತೆ ಹರೀಶ್‌ಗೆ ರೇಣುಕಾಚಾರ್ಯ ಹೇಳಿರುವುದು ಸರಿಯಾಗಿಯೇ ಇದೆ. “ಹರೀಶ್ ನನಗೇನೂ ಹೊಸಬನಲ್ಲ, ಸಿಪಿಐನಲ್ಲಿದ್ದಾಗ ನಾವೇ ಗೆಲ್ಲಿಸಿದ್ದು, ಅವನಿಗೆ ಅವರಪ್ಪನ ಸಮಾಧಿ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ ನಮಗೆ ಮಾರಿದ್ದ ಜಾಗದಲ್ಲಿ ಸಮಾಧಿ ಇತ್ತು. ಬಾರೋ ತಮ್ಮ ಅದನ್ನ ಸರಿಪಡಿಸಿಕೋ. ಎಂದು ನಾವೇ ಹೇಳಿದ್ದೆವು. ಕೊನೆಗೆ ನಮ್ಮ ಮೇಲೆ ಕೇಸ್ ಹಾಕಿ ಪೊಲೀಸ್ ಸ್ಟೇಷನ್‌ಗೆ ಓಡಾಡುವಂತೆ ಮಾಡಿದ. ಅವನೇನೂ ನಮಗೆ ಹೊಸಬನಲ್ಲ” ಎಂದರು.

ಮಾಜಿ ಸಚಿವ ರವೀಂದ್ರನಾಥ್‌ಗೆ ಆಪರೇಷನ್ ಆಗಿತ್ತು. ಅವರ ಮನೆಯವರಿಗೂ ಕಣ್ಣಿನ ಆಪರೇಷನ್ ಆಗಿದ್ದು ಮನೆಗೆ ಹೋಗಿ ಮಾತನಾಡಿಸಿಕೊಂಡು ಬಂದಿದ್ದಕ್ಕೇ ಹರೀಶ್ ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡಿದ್ದಾನೆ. ಅವನಿಗೇನು ತಲೆಗಿಲೆ ಸರಿ ಐತೋ… ಇಲ್ಲವೋ., ಜನರು ಆಯ್ಕೆ ಮಾಡಿದ್ದಾರೆ. ಅದರಂತೆ ಕೆಲಸ ಮಾಡಬೇಕು ಅದನ್ನ ಬಿಟ್ಟು ಪೇಪರ್, ಟಿವಿಯಲ್ಲಿ ಬರುತ್ತೀನಿ ಅಂತ ಏನೇನೋ ಮಾತನಾಡುವುದಾ ಎಂದು ಪ್ರಶ್ನಿಸಿದರು. ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಕಾರ್ಪೋರೇಟ್ ಆಗಲಿಕ್ಕೆ ಅವರ ಅಣ್ಣ ಶ್ರೀನಿವಾಸ್ ಕಾರಣ. ಅಣ್ಣ- ತಮ್ಮನ ನಡುವೆ ಏನೇನೋ ಇದೆ. ಅದರಲ್ಲಿ ನನ್ನ ಪಾತ್ರವೇನೋ ಇಲ್ಲ. ಅಂತಹವರ ಬಗ್ಗೆ ಹೆಚ್ಚು ಮಾತನಾಡಲಿಕ್ಕೆ ಹೋಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೇಣುಕಾಚಾರ್ಯಗೆ ಅಸಹ್ಯ ಎಂದಿದ್ದ ಶಾಸಕ ಬಿ.ಪಿ.ಹರೀಶ್

ಹಾಲಿ ಶಾಸಕ ಬಿಪಿ ಹರೀಶ್ ಇತ್ತೀಚೆಗೆ ಮಾಜಿ ಶಾಸಕ ರೇಣುಕಾಚಾರ್ಯ ಹೆಸರು ಹೇಳೋಕೆ ಬೇಜಾರಾಗುತ್ತೆ, ಅಸಹ್ಯ ಆಗುತ್ತೆ ಎಂದಿದ್ದರು. ನಂತರ ಶಾಸಕ ಬಿಪಿ ಹರೀಶ್ ಅವರ ಹೇಳಿಕೆ ಬಗ್ಗೆ ಮಾಜಿ ಶಾಸಕ, ವಿಪಕ್ಷ ನಾಯಕ ರೇಣುಕಾಚಾರ್ಯ ಅವರು ವಾಗ್ದಾಳಿ ನಡೆಸಿದ್ದರು. ಸತ್ಯ ಹೇಳೋಕೆ ಧರ್ಮಸ್ಥಳಕ್ಕೆ ಬರುವಂತೆ ಹೇಳಿದ್ದರು.

ಸತ್ಯ ಹರಿಶ್ಚಂದ್ರ ನಿಮ್ಮ ಮನೆಯಲ್ಲೇ ಹುಟ್ಟಿದ್ದಾನಾ?

ಹಾಲಿ ಶಾಸಕರು, ನಾವು ಮಾಜಿ ಶಾಸಕರು ದೊಡ್ಡವರು ಬಹಳ ಆದರ್ಶ, ಮರ್ಯಾದಾ ಪುರುಷ. ಹಾಗಾಗಿ ಈ ರೀತಿ ಮಾತಾಡಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಈ ಹಿಂದೆ 2018ರಲ್ಲಿ ಹೀನಾಯವಾಗಿ ಸೋತಾಗ ಪ್ರತಿ ದಿನ ನಮ್ಮ ಮನೆಯಲ್ಲಿ ಬಂದು ಇರ್ತಿದ್ರು. ಈ ಬಗ್ಗೆ ಇಡೀ ದಾವಣಗೆರೆ ಜಿಲ್ಲೆಯ ಜನರಿಗೇ ಗೊತ್ತಿದೆ.ನಿನಗಿಂತ ಬಹಳ ಚೆನ್ನಾಗಿ ಭಾಷೆ ಬಳಸೋಕೆ ನನಗೂ ಬರುತ್ತೆ. ಐದು ವರ್ಷಗಳ ಕಾಲ ನಿನ್ನ ಎಲ್ಲಾ ಕೆಲಸಗಳನ್ನು ನಾನೇ ಮಾಡಿಸಿಕೊಟ್ಟಿದ್ದೆ. ಅಸಹ್ಯ ಅನ್ನೋರು ನನ್ನಂತವನ ಸಹವಾಸ ಏಕೆ ಮಾಡಿದ್ದು. ಈಗ ಸತ್ಯ ಹರಿಶ್ಚಂದ್ರ ನಂತೆ ಮಾತಾಡ್ತೀಯಾ? ಯಾಕೆ ಸತ್ಯ ಹರಿಶ್ಚಂದ್ರ ನಿಮ್ಮ ಮನೆಯಲ್ಲೇ ಹುಟ್ಟಿದ್ದಾ? ಇನ್ಮೇಲೆ ಹೀಗೆ ಮಾತಾಡಿದ್ರೆ ಉತ್ತರ ಕೊಡ್ತೇನೆ ಎಂದು ಶಾಸಕ ಹರೀಶ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದರು. ಇನ್ನು ನಿನ್ನ ಪರವಾಗಿ ಭರ್ಜರಿ ಭಾಷಣ ಮಾಡಿದ್ದೇನೆ. ನಿನ್ನ ಗೆಲುವಿಗಾಗಿ ಸಾಕಷ್ಟು ಕಾರ್ಯಕ್ರಮಕ್ಕೆ ಕರೆದಿದ್ದೀಯಾ. ಅಲ್ಲೆಲ್ಲ ಬಂದು ಜನರಲ್ಲಿ ಹರೀಶ್‌ನನ್ನ ಗೆಲ್ಲಿಸಿ ಎಂದು ಜನರ ಬಳಿ ಮನವಿ ಮಾಡಿದ್ದೇನೆ. ಅದರ ವಿಡಿಯೋ ಕೂಡ ಇದೆ. ನನ್ನ ಒತ್ತಡದ ನಡುವೆಯೂ ಹರೀಶ್ ಗೆಲುವಿಗಾಗಿ ಜನರಲ್ಲಿ ಕೇಳಿಕೊಂಡಿದ್ದೇನೆ ಎಂದಿದ್ದರು.

ಕಾಂಗ್ರೆಸ್‌ನವರಿಗೆ ಸೇಲ್ ಆಗಿದ್ದೆ

2023ರ ಚುನಾವಣೆಯಲ್ಲಿ ನಿನಗೆ ಅಧಿಕಾರ ಬಂತು. ಈ ಹಿಂದೆ ನೀನು ಕಾಂಗ್ರೆಸ್‌ನವರಿಗೆ ಸೇಲ್ ಆಗಿದ್ದೆ. ನಿಮ್ಮ ಕ್ಷೇತ್ರ ಹರಿಹರದಲ್ಲಿ 5000 ಮತಗಳು ಲೀಡ್ ಕಾಂಗ್ರೆಸ್‌ಗೆ ಬಂತು ಯಾಕೆ? ಮೊನ್ನೆಯೂ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡಿದ್ದಾರೆ ಎಂದು ಶಾಸಕ ಹರೀಶ್ ವಿರುದ್ಧ ರೇಣುಕಾಚಾರ್ಯ ಆರೋಪ ಮಾಡಿದ್ದರು. 2014ರಲ್ಲಿಚುನಾವಣೆಯಲ್ಲಿ ಎಂಪಿಗೆ ಸಿದ್ದೇಶ್ವರನನ್ನ ನಿಲ್ಲಿಸಬೇಡಿ ಸೋಲ್ತೀರಿ ಅಂದಿದ್ದರು. ಆದ್ರೆ ನಾವೆಲ್ಲಾ ಸೇರಿ ಸಿದ್ದೇಶ್ವರ ಅವರ ಗೆಲುವಿಗೆ ಶ್ರಮಿಸಿದೆವು. 2014 ರ ಲೋಕಸಭಾ ಚುನಾವಣೆ ಸಿದ್ದೇಶ್ವರ ಗೆಲ್ಲಬಾರದು ಎಂದು ಹರೀಶ್ ಹೇಳಿದ್ದರು. ಒಂದು ವೇಳೆ ನೀ ಹೇಳಿಲ್ಲ ಅಂದರೆ ಧರ್ಮಸ್ಥಳಕ್ಕೆ ಬಾ. ಬರಬೇಕು ನೀನು ಧರ್ಮಸ್ಥಳಕ್ಕೆ. ನಾನು ಸುಮ್ನೆ ಬಿಡಲ್ಲ ಎಂದು ರೇಣುಕಾಚಾರ್ಯ, ಶಾಸಕ ಬಿಪಿ ಹರೀಶ್‌ಗೆ ಸವಾಲು ಹಾಕಿದ್ದು, ಇದರ ಮುಂದುವರಿದ ಭಾಗವಾಗಿ ಈಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿದ್ದಾರೆ.

 

Share.
Leave A Reply

Exit mobile version