ದಾವಣಗೆರೆ: ಕಾಂಗ್ರೆಸ್ ಸೇರಲು ಹಣ ಪಡೆದಿರುವುದನ್ನು ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಅವರು ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂದು ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಸವಾಲು ಹಾಕಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರಲು ಹಣ ತೆಗೆದುಕೊಂಡಿಲ್ಲ ಎಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ತೊಯ್ದ ಹಸಿಬಟ್ಟೆಯಲ್ಲಿ ಗಂಟೆ ಹೊಡೆದು ಪ್ರಮಾಣ ಮಾಡುತ್ತೇನೆ ಎಂದು ತಿಳಿಸಿದರು.
ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಅವರು ನಾನು ಹಣ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದೇನೆ ಎಂದು ಅನೇಕರ ಮುಂದೆ ಹೇಳುವ ಮೂಲಕ ನನಗೆ ಅವಮಾನ ಮಾಡಿದ್ದಾರೆ. ಅವರು ನಾನು ಹಣ ಪಡೆದೇ ಕಾಂಗ್ರೆಸ್ ಸೇರಿದ್ದೇನೆ ಎಂದು ಅವರು ಬಂದು ಗಂಟೆ ಹೊಡೆಯಲಿ ಎಂದು ಸವಾಲು ಹಾಕಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಯಾವತ್ತು ಬಂದು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಗಂಟೆ ಹೊಡೆಯುತ್ತಾರೋ ಅವತ್ತೇ ನಾನು ಸಹ ಗಂಟೆ ಹೊಡೆಯುತ್ತೇನೆ ಎಂದು ತಿಳಿಸಿದರು.
ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಒಂದೇ ಒಂದು ನಯಾಪೈಸೆ ತೆಗೆದುಕೊಂಡಿಲ್ಲ. ನಾನು ಬಿಜೆಪಿಯಲ್ಲಿನ ಜಾತಿ ರಾಜಕೀಯದಿಂದ ಬೇಸತ್ತು ಅಭಿವೃದ್ಧಿ ರಾಜಕೀಯಕ್ಕಾಗಿ ಕಾಂಗ್ರೆಸ್ ಸೇರಿದ್ದಾಗಿ ತಿಳಿಸಿದರು.ಮಹಾನಗರ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಎಚ್.ಕೆ. ಬಸವರಾಜ್, ಹುಚ್ಚಂಗೆಪ್ಪ ಇದ್ದರು.