
ಶಿವಮೊಗ್ಗ,: ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಡಾ ಹಗರಣದಲ್ಲಿ ಸಿಲುಕಿದ ಬಳಿಕ ಈಗ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ಹಗರಣಗಳನ್ನು ಬೀದಿಗೆ ತರಬೇಡಿ ಎಂದು ವಿವಿಧ ರೀತಿಯಲ್ಲಿ ಧಮಕಿ ಹಾಕಿ ಗದಾಪ್ರಹಾರ ಮಾಡಲು ಹೊರಟಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಮಧ್ಯದಲ್ಲಿರುವ ಕೋಟ್ಯಾಂತರ ಬೆಲೆಬಾಳುವ ಕೆಐಡಿಬಿಯಿಂದ ಖರ್ಗೆಯವರ ಟ್ರಸ್ಟ್ಗೆ ಪಡೆದ ಸಿಎ ಸೈಟ್ನ್ನು ಕೂಡ ಪ್ರಿಯಾಂಕ ಖರ್ಗೆಯವರು ಈಗ ವಾಪಾಸ್ಸು ನೀಡಿದ್ದಾರೆ. ಮೂಡಾ ಹಗರಣಕ್ಕೆ ಇಡಿ ಪ್ರವೇಶ ಆದ ಮೇಲೆ ಸಿಎಂ ಕುಟುಂಬದ ಪ್ರಭಾವ ಬಹಿರಂಗವಾಗಿದೆ. ಇಡಿ ಯವರು ಹಲವು ನೋಟಿಸ್ ಕೊಟ್ಟರೂ ರಾಜ್ಯ ಸರ್ಕಾರದಿಂದ ಸಮರ್ಪಕ ಉತ್ತರ ಬಾರದ ಕಾರಣ ಇಡಿ ನೇರವಾಗಿ ಮೂಡಾ ಕಚೇರಿಗೆ ರೈಡ್ ಮಾಡಿದೆ. ಮೊದಲು ತನ್ನ ಪತ್ನಿ ಮೂಡಾಕ್ಕೆ ಪತ್ರ ಬರೆದಿಲ್ಲ ಎಂದು ವಾದಿಸುತ್ತಿದ್ದ ಮುಖ್ಯಮಂತ್ರಿಗಳು ಈಗ ಪತ್ರ ಬಹಿರಂಗವಾದ ಮೇಲೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಪತ್ರದ ಮೇಲೆ ವೈಟ್ನರ್ ಹಾಕಿ ತಿದ್ದುಪಡಿ ಮಾಡಲಾಗಿದೆ.
ಮೂಡಾಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಹೆಲಿಕಾಪ್ಟರ್ನಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತೆಗೆದುಕೊಂಡು ಹೋಗಿ ಹಗರಣ ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಆರ್ಟಿಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ, ಅಬ್ರಾಹಂ ಮತ್ತು ಪ್ರದೀಪ್ ಅವರು ರಾಜ್ಯಪಾಲರಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪ್ರಾಸಿಕ್ಯೂಷನ್ಗೆ ಕೋರ್ಟ್ ಒಪ್ಪಿಗೆ ನೀಡಿದ ನಂತರ ಈಗ ಮುಖ್ಯಮಂತ್ರಿಗಳಿಗೆ ಆತಂಕ ಪ್ರಾರಂಭವಾಗಿದೆ. 2004ರಿಂದ ಮೂಡಾದಲ್ಲಿ ಇವರ ಅವಧಿಯಲ್ಲಿ ಪ್ರಭಾವ ಬೀರಿ ಸಾವಿರಾರು ಕೋಟಿ ಹಗರಣವಾಗಿದ್ದು, ಬಡವರಿಗೆ ಸಲ್ಲಬೇಕಾದ ನಿವೇಶನಗಳು ಪ್ರಭಾವಿಗಳ ಪಾಲಾಗಿದೆ. ಎಸ್ಐಟಿಯಿಂದ ಪಾರದರ್ಶಕ ತನಿಖೆ ಸಾಧ್ಯವಿಲ್ಲ, ಮುಖ್ಯಮಂತ್ರಿ ಸ್ಥಾನಕ್ಕೆ ಮಸಿ ಬೆಳೆಯುವ ಪ್ರಯತ್ನ ಮಾಡಬೇಡಿ, ಕೋರ್ಟ್ ಆದೇಶಕ್ಕೆ ಬೆಲೆ ಕೊಡಿ ಎಂದರು.


ಜನರ ತೆರಿಗೆ ಹಣ ದುರುಪಯೋಗವಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವವರೆಗೆ ಬಿಜೆಪಿ ಹೋರಾಟ ಮುಂದುವರೆಸುತ್ತದೆ. ಕಾಂಗ್ರೆಸ್ ಈಗ ಇಂಡಿಯನ್ ನ್ಯಾಷನಲ್ ಕರ್ಫಶನ್ ಪಾರ್ಟಿ ಎಂಬುವುದು ಮತ್ತೊಮ್ಮೆ ಸಾಭೀತಾಗಿದೆ. 2005ರಲ್ಲಿ ನಡೆದ 2ಜಿ ಸೆಕ್ಟ್ರಂ, ಕಾಮನ್ವೆಲ್ತ್, ಆದರ್ಶ್ ಸೊಸೈಟಿ ಹಗರಣ, ನ್ಯಾಷನಲ್ ಹೆರಲ್ಡ್ ಹಗರಣಗಳು ದೇಶದ ಜನರ ಕಣ್ಣುಂದೆ ಇದೆ. ಈಗ ವಕ್ಫ್ ಆಸ್ತಿಯಲ್ಲೂ ಕೂಡ ಕಾಂಗ್ರೆಸ್ ನಾಯಕರು ಲೂಟಿ ಮಾಡಿದ್ದಾರೆ ಎಂಬುವುದು ಬಹಿರಂಗವಾಗಿದೆ. ಜಂಟಿ ಸಂಸದೀಯ ಸಮಿತಿ ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ. ಅದಕ್ಕಾಗಿ ಕಾಂಗ್ರೆಸ್ ನವರು ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
2013ರಲ್ಲಿಯೇ ಪ್ರಹ್ಲಾದ್ ಜೋಷಿ ಅಣ್ಣ ಭ್ರಷ್ಟಚಾರ ಮಾಡಿದ್ದಾರೆ ಎಂಬ ಆರೋಪವಿತ್ತು. ಅದು ನ್ಯಾಯಾಲಯದಲ್ಲಿ ಇದೆ. ಸಂಸದ ಜೋಷಿಯವರೆಗೂ ಅವರ ಅಣ್ಣನವರಿಗೂ ಯಾವುದೇ ಸಂಬಂಧವಿಲ್ಲ. ಅವರ ಕಳೆದ 22 ವರ್ಷಗಳಿಂದ ದೂರವಿದ್ದಾರೆ. ಈಗ ಮತ್ತೆ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಆ ಪ್ರಕರಣವನ್ನು ಕೆದಕಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.ವಿಶಾಖಪಟ್ಟಣದ ರೋಗಗ್ರಸ್ಥ ಕೈಗಾರಿಕೆ ಪುನರ್ಜ್ಜೀವನಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಕೈ ಹಾಕಿದೆ. ಮುಂಬರುವ ದಿನಗಳಲ್ಲಿ ವಿಐಎಸ್ಎಲ್ ಕೂಡ ಪುನರ್ಜ್ಜೀವನವಾಗಲಿದೆ. ವಿಮಾನನಿಲ್ದಾಣಕ್ಕೆ ಸಂಬಂಧಿಸಿದಂತೆ 12 ವಿಮಾನಗಳು ಹಾರಾಟವಾಗುತ್ತಿದೆ. ಸರ್ಕಾರ ಸಹಕಾರ ನೀಡಿದರೆ ಅಲ್ಲಿ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದರು.
ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನಿ ಕೇಂದ್ರ ಸ್ಥಾಪನೆಗೆ 20 ಕೋಟಿ ಹಣ ಕೇಂದ್ರದಿಂದ ಮಂಜೂರು ಆಗಿದೆ. ಇದರಿಂದ ನೂರಾರು ಬಡ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಹಿಂದೆ ಖೇಲ್ ಇಂಡಿಯಾ ಸಂಕಿರಣಕ್ಕೆ 25ಕೋಟಿ ಹಣ ಬಂದಿತ್ತು. ಆದರೆ ಆಗಲೂ ಕೆಲವರು ವಿರೋಧ ಮಾಡಿದರು. ಹಣ ವಾಪಾಸ್ಸು ಹೋಯಿತು. ಈಗ ಇದು ಮಕ್ಕಳಿಗೆ ಅಗತ್ಯವಾದ ನಗರ ಮಧ್ಯದಲ್ಲಿ ಅನುಕೂಲವಾಗುವ ಒಂದು ವಿಜ್ಞಾನ ಕೇಂದ್ರವಾಗಿದ್ದು, ವಿರೋಧಿಸಿದವರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಿವರಾಜ್, ಹರಿಕೃಷ್ಣ, ಮಾಲತೇಶ್, ಜಗದೀಶ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.