ಚಿತ್ರದುರ್ಗ : ನದಿ, ನಾಲೆಗಳಿಲ್ಲದ ಬರಗಾಲದ ಜಿಲ್ಲೆ, ಮಳೆ ಬರುವುದೇ ಅಪರೂಪ. ಪ್ರತಿ ವರ್ಷ ಯಾವಾಗ ಮಳೆ ಬರುತ್ತೋ ಎಂದು ಜನ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆ ರಾತ್ರೋರಾತ್ರಿ ಸುಂದರ, ನಯನ ಮನೋಹರ, ರಮಣೀಯ ಸ್ಥಳವನ್ನು ಸೃಷ್ಟಿಸಿದೆ.ಈ ಸ್ಥಳವನ್ನು ನೋಡಲು ಜಿಲ್ಲೆಯ ನಾನಾ ಕಡೆಗಳಿಂದ ಸಾವಿರಾರು ಜನರು ಬಂದಿದ್ದು, ರಾಜಕಾರಣಿಗಳು, ಅಧಿಕಾರಿಗಳ ದಂಡು ಸಹ ಇಲ್ಲಿಗೆ ಬರುತ್ತಿದೆ.
ಹೌದು…ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಲಿ ಗ್ರಾಮದ ರಾಮಸಾಗರದ ಕೆರೆ 45 ವರ್ಷದ ಬಳಿಕ ತುಂಬಿದ್ದು, ಜನರ ಸಂತಸಕ್ಕೆ ಪಾರಾವೇ ಇರಲಿಲ್ಲ.
ಮಳೆಯಿಂದಾಗಿ ರಾಮಸಾಗರ ಕೆರೆ 45 ವರ್ಷಗಳ ಬಳಿಕ ಈ ಬಾರಿ ತುಂಬಿದ್ದು, ಸ್ಥಳೀಯರ ಮೊಗದಲ್ಲಿ ಮಂದಹಾಸ ಮೂಡಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಗೆ ಇಂತಹ ಬೃಹತ್ ಕೆರೆಗಳೇ ಜೀವಾಳ, ಹೀಗಿರುವಾಗ ಕಳೆದ ಹದಿನೈದು ವರ್ಷಗಳಿಂದ ಸರಿಯಾದ ಮಳೆ ಇರಲಿಲ್ಲ. ಕೊಳವೆ ಬಾವಿ ಬತ್ತಿ ಹೋಗಿದ್ದವು. ಈಗ ಎಲ್ಲ ಬೋರ್ ಗಳು ರೀಚಾರ್ಜ್ ಆಗಿದ್ದು, ರೈತರಿಗೆ ಮತ್ತೆ ಉದ್ಯೊಗ ಸಿಗಲಿದೆ.
ಕೆರೆ ಕೋಡಿ ಬಿದ್ದ ವಿಷಯ ತಿಳಿದ ಜಿಲ್ಲೆಯ ಜನರು, ಬರದ ಭೂಮಿಯಲ್ಲಿ ಇಂಥಹದ್ದೊಂದು ನಯನ ಮನೋಹರ ದೃಷ್ಯಗಳನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ತಂಡೋಪ ತಂಡವಾಗಿ ಕೆರೆಯತ್ತ ಹರಿದು ಬರುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬರದ ನಾಡಲ್ಲಿ ಸುಂದರ ಜಲಧಾರೆಯನ್ನು ಹರಿಯುವುದನ್ನು ಜನ ಅನುಭವಿಸುತ್ತಿದ್ದಾರೆ. ಇದೇ ವೇಳೆ ಹರಿಯುತ್ತಿರುವ ನೀರಿಗೆ ಜನಪ್ರತಿನಿಧಿಗಳು, ಗ್ರಾಮಸ್ಥರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ. ಈ ಭಾಗದಅತಿ ದೊಡ್ಡ ಕೆರೆಗಳಲ್ಲಿ ಇದೂ ಒಂದು. ಹೀಗಾಗಿ ತುಂಬಿ ಹರಿಯುತ್ತಿದ್ದ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲು ಪಕ್ಷಾತೀತವಾಗಿ ರಾಜಕಾರಣಿಗಳ ದಂಡು ಡೋಲು ವಾದ್ಯ ಸಮೇತ ಆಗಮಿಸಿದ್ದು, ವಿಶೇಷ.
ಜನಸಾಮಾನ್ಯರು ಕೆರೆಯನ್ನು ನೋಡಲು ಮಕ್ಕಳೊಂದಿಗೆ ಧಾವಿಸುತ್ತಿದ್ದಾರೆ. ಅಲ್ಲದೇ ಕೆಲವರು ನೀರಿನಲ್ಲಿ ಮಿಂದೇಳುತ್ತಿದ್ದಾರೆ. ಇನ್ನು ಕೆಲವರು ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿದ್ದಾರೆ. ಮಹಿಳೆಯರು ಗಂಗೆ ಪೂಜೆ ನೆರವೇರಿಸಿದರು. ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕೆಲವರು ಕೇಕೆ ಹಾಕಿ ಸಂಭ್ರಮಿಸಿದರು.
…
ನಮ್ಮೂರು ಕೆರೆ 45 ವರ್ಷದ ಬಳಿಕ ತುಂಬಿದ್ದು, ನಮ್ಮ ತಿಮ್ಮಪ್ಪಯ್ಯನಹಳ್ಳಿ ಜನಕ್ಕೆ ಭಾರೀ ಸಂತೋಷವಾಗಿದೆ. ಸದ್ಯ ಈಗ ಇದೊಂದು ಪ್ರವಾಸಿ ಸ್ಥಳವಾಗಿದೆ, ತಿಮಪ್ಪಯ್ಯನಹಳ್ಳಿ, ಗಜ್ಜುಗಾನಹಳ್ಳಿಯಿಂದ ರಾಮಸಾಗರಕ್ಕೆ ನೀರು ಬರುತ್ತದೆ. ಪ್ರತಿ ವರ್ಷ ಹೀಗೆ ಕೆರೆಗೆ ನೀರು ಬಂದರೆ, ಯಾರು ಕೂಡ ಉದ್ಯೊಗ ಹರಿಸಿ ಎಲ್ಲೋ ಹೋಗೋದಿಲ್ಲ.
–ತಿಪ್ಪೇಶ್ ಎಲಿಗಾರ್, ತಿಮ್ಮಪ್ಪಯ್ಯನಹಳ್ಳಿ ಗ್ರಾಮದ ಮುಖಂಡ
.