ಚಿತ್ರದುರ್ಗ,ಜೂ.12: ಒಂದು ವಾರದಿಂದ ನಾಪತ್ತೆಯಾಗಿದ್ದ ಪತಿಯ ಆಗಮನಕ್ಕಾಗಿ ಕಾಯುತ್ತಿದ್ದ ಮೂರು ತಿಂಗಳ ಗರ್ಭಿಣಿಗೆ ಕಂಡಿದ್ದು ಗಂಡನ ಶವ. ಮಗು ಜನಿಸುವ ಮುನ್ನವೇ ಸಾವನ್ನಪ್ಪಿದ ಅಪ್ಪ. ಮಗುವಿನ ಜವಾಬ್ದಾರಿ ಯಾರದ್ದು ? ನನ್ನ ಮಗನಂತೆ ದರ್ಶನ್ ಕೊಲೆಯಾಗಬೇಕು ಇದು ಮೊನ್ನೆತಾನೇ ದರ್ಶನ್ ಹಾಗೂ ಅವರ ಗ್ಯಾಂಗ್ ನಿಂದ ಹತ್ಯೆಗೊಳಗಾದ ರೇಣುಕಾಸ್ವಾಮಿ ಪತ್ನಿ ಹಾಗೂ ಪೋಷಕರ ಅಳಲು, ಆಕ್ರೋಶ…
ಕಳೆದ ಶನಿವಾರ ಮನೆಗೆ ಬಾರದೆ ಕಣ್ಮರೆಯಾಗಿದ್ದ ರೇಣುಕಾಸ್ವಾಮಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾಗಿದ್ದು, ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಚಿತ್ರದುರ್ಗದಲ್ಲಿನ ಮನೆಗೆ ಮೃತ ಶರೀರ ಬಂದಿದೆ.
ಏನನ್ನು ಮಾತನಾಡದೆ ಮುಗ್ದ ಮನಸಿನ ಮಗುವಂತೆ ಮಲಗಿದ್ದ ಪತಿಯನ್ನು ಕಂಡು ಮೂರು ತಿಂಗಳ ಗರ್ಭಿಣಿ ಪತ್ನಿ ಸಹನಾ ಹೃದಯಾಘಾತವಾದಂತೆ, ಮೂಖ ವಿಸ್ಮಿತಳಾಗಿ ನಿಂತು ಕುಸಿದು ಬಿದ್ದರೆ. ಮತ್ತೊಂದೆಡೆ ವಂಶೋದ್ದಾರಕ, ಇದ್ದ ಒಬ್ಬನೇ ಮಗನನ್ನು ಕಳೆದಕೊಂಡ ತಂದೆ ಕಾಶಿನಾಥ ಶಿವನ ಗೌಡ, ತಾಯಿ ರತ್ನಪ್ರಭ ಅವರ ಆಕ್ರಂದನ ಮುಗಿಲುಮಟ್ಟಿತ್ತು.
ರಾತ್ರಿ 8 ಗಂಟೆ ಸುಮಾರಿಗೆ ಬಂದ ಮೃತ ದೇಹಕ್ಕೆ ವೀರಶೈವ ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ ಸಲ್ಲಿಸಲಾಯಿತು. ನಂತರ ಜೋಗಿಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ರೇಣುಕಾಸ್ವಾಮಿ ಸಂಬಂಧಿಕರು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ನನ್ನ ಮನೆಯವರನ್ನು ಕೊಲೆ ಮಾಡಲಾಗಿದೆ. ನಮಗೆ ನ್ಯಾಯ ಕೊಡಿಸಿ. ನಾನು ಮೂರು ತಿಂಗಳ ಗೃಹಿಣಿ ಇದ್ದು, ಮುಂದೆ ಜನಿಸುವ ಮಗುವಿಗೆ ಯಾರು ಜವಬ್ದಾರಿಯಿಂದ ನೋಡಿಕೊಳ್ಳುತ್ತಾರೆ. ಮೊನ್ನೆ ಕರೆ ಮಾಡಿ ನಮ್ಮ ಜೊತೆ ಮಾತನಾಡಿದ್ದೇ ಕೊನೆ. ಆದರೆ ಇದೀಗ ಶವವಾಗಿ ಬಂದಿದ್ದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಕಣ್ಣಿರು ಹಾಕಿದರು.
ರೇಣುಕಾಸ್ವಾಮಿ ಅಂತ್ಯಸಂಸ್ಕಾರ ಬಳಿಕ ಮಾತನಾಡಿದ ಪೋಷಕರಾದ ತಂದೆ ಶಿವನಗೌಡ, ತಾಯಿ ರತ್ನಪ್ರಭಾ, ನನ್ನ ಮಗನನ್ನು ಸಾಯಿಸಿದಂತೆ ನಟ ದರ್ಶನನ್ನೂ ಸಾಯಿಸಬೇಕು.ಮಗ ರೇಣುಕಾಸ್ವಾಮಿ ತಲೆಗೆ ಹೊಡೆದಿದ್ದಾರೆ, ಮರ್ಮಾಂಗಕ್ಕೆ, ಮನಬಂದಂತೆ ಹೊಡೆದಿದ್ದಾರೆ. ಸಿಗರೇಟ್ ನಿಂದ ಸುಟ್ಟಿದ್ದಾರೆ. ನಟ ದರ್ಶನ್ ಮತ್ತು ಪವಿತ್ರಾಗೆ ನನ್ನ ಮಗನ ಸ್ಥಿತಿ ಬರಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಪತಿ ಬರುತ್ತಾನೆಂದು ರೇಣುಕಾಸ್ವಾಮಿ ಪತ್ನಿ ಕಾದಿದ್ದಳು. ನನ್ನ ಸೊಸೆಯ ಜೀವನವನ್ನೂ ಹಾಳು ಮಾಡಿದರು. ಆ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು, ಸೂಕ್ತ ತನಿಖೆ ಆಗಬೇಕು ಎಂದು ಕಿಡಿಕಾರಿದ ಪೋಷಕರು, ಕೊಲೆಗಡುಕರಿಗೆ ಈ ದೇಶದಲ್ಲಿ ಎಂಥ ಮರ್ಯಾದೆ ಇದೆ ? ಮನುಷ್ಯತ್ವ ಇಲ್ಲದವರು ದೊಡ್ಡ ಮನುಷ್ಯರು, ಸ್ಟಾರ್ ಗಳು ಎಂದು ಆಕ್ರೋಶ ಹೊರಹಾಕಿದರು.