ದಾವಣಗೆರೆ : ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದೇ 28ರಂದು ದಾವಣಗೆರೆಗೆ ಆಗಮಿಸಲಿದ್ದು, ದಾವಣಗೆರೆ, ಹಾವೇರಿ ಜಿಲ್ಲೆಗಳ ಮತದಾರರನ್ನು ಉದ್ದೇಶಿಸಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದ ಆವರಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಮಾವೇಶದ ಹಂದರ ಕಂಬದ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಏಪ್ರಿಲ್ 28ರಂದು ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಆರಂಭ ಆಗಲಿದ್ದು, 1ಗಂಟೆಗೆ ನರೇಂದ್ರ ಮೋದಿಯವರು ದಾವಣಗೆರೆಗೆ ಆಗಮಿಸಲಿದ್ದು, ನಂತರ ಕಾರವಾರಕ್ಕೆ ತೆರಳಲಿದ್ದಾರೆ. ಐದನೇ ಬಾರಿಗೆ ಮೋದಿ ದಾವಣಗೆರೆಗೆ ಆಗಮಿಸುತ್ತಿದ್ದು, ದಾವಣಗೆರೆ ಜನರ ಪುಣ್ಯ. ಈ ಬಾರಿಯ ಚುನಾವಣೆಯಲ್ಲಿ ಜನರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರು ಅತ್ಯಧಿಕ ಸಂಖ್ಯೆಯಲ್ಲಿ ಮತ ಗಳಿಸಿ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಮಧ್ಯಾಹ್ನ 1ಗಂಟೆಯಿಂದ ಮೋದಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂದು ಹೇಳಿದರು.
ಜಗತ್ತಿನಲ್ಲಿ ಇಂದು ಮೋದಿ ಅತ್ಯುತ್ತಮ ನಾಯಕ ಎಂದು ಕರೆಯಲ್ಪಡುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆದರೆ, ಅದು ವಿಪಕ್ಷಗಳ ಕಣ್ಣಿಗೆ ಕಾಣುತ್ತಿಲ್ಲ. ದಾವಣಗೆರೆಗೆ ಸಂಸದರು ಅಭಿವೃದ್ಧಿ ಮಾಡಿಲ್ಲ. ಖಾಲಿ ಚೊಂಚು ನೀಡಿದ್ದಾರೆಂದು ಹೇಳಿಕೆ ನೀಡಿದ್ದು, ನಾನೇನು ಸಾಧನೆ ಮಾಡಿದ್ದೇನೆ ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿದೆ ಎಂದು ತಿಳಿಸಿದರು.ಇಡೀ ಪ್ರಪಂಚದಲ್ಲಿ ಭಾರತ ದೇಶ ಪ್ರಬಲವಾಗಿ ಬೆಳೆಯುತ್ತಿದೆ. ಇಂತಹ ನಾಯಕ ಬೇಕು ಎಂದು ದೇಶದ ಇತರೆ ದೇಶದ ಜನರು ಹೇಳುತ್ತಿದ್ದಾರೆ.
ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, 2047ರ ವೇಳೆಗೆ ಭಾರತ ದೇಶವು ವಿಶ್ವದ ನಂಬರ್ ಒನ್ ಸ್ಥಾನದಲ್ಲಿ ಇರಲಿದೆ ಎಂದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಯಶವಂತ ರಾವ್ ಜಾಧವ್, ಶಿವನಳ್ಳಿ ರಮೇಶ್, ಕೃಷ್ಣ ಮೂರ್ತಿ ಪವಾರ್, ಧನಂಜಯ ಕಡ್ಲೇಬಾಳು, ಎಸ್.ಟಿ.ವೀರೇಶ್, ವೈ.ಮಲ್ಲೇಶ್, ಪ್ರಸನ್ನ ಕುಮಾರ್ ಇತರರು ಇದ್ದರು.