ಶಿವಮೊಗ್ಗ : ನಗರದ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ‘ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನ’ ವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಾಣಿಜ್ಯ ಹಾಗೂ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕ ಸುರೇಶ್ ಮಾತನಾಡಿ, ಸಣ್ಣ ಕೈಗಾರಿಕೆ ಹಾಗೂ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರವು 2008 ರಲ್ಲಿ ಜಾರಿಗೊಳಿಸಿದ ಯೋಜನೆಯಾದ PMEGP (Prime Minister’s Employment Generation Programme) ಕುರಿತಾದ ವಿಸ್ತೃತ ಮಾಹಿತಿ ನೀಡಿದರು.
ಈ ಯೋಜನೆಯ ಫಲಾನುಭವಿಗಳಾಗಲು ಅನುಸರಿಸಬೇಕಾದ ನಿಯಮಗಳು, ಕಾರ್ಯ ಯೋಜನೆ, ಬ್ಯಾಂಕ್ ಗಳ ಪಾತ್ರ, ಇಲಾಖೆಯ ಜವಾಬ್ದಾರಿಗಳ ಕುರಿತಾಗಿ ಸವಿವರವಾದ ಮಾಹಿತಿಯನ್ನು ಸುರೇಶ್ ಹಂಚಿಕೊಂಡರು. ಈ ಯೋಜನೆಯು ಸಾಲಾಧಾರಿತ ಸಬ್ಸಿಡಿ ಯೋಜನೆಯಾಗಿದ್ದು ಸಮಾಜದ ಎಲ್ಲಾ ವರ್ಗದ ಜನರು ಇದರ ಸದುಪಯೋಗ ಪಡೆಯಬಹುದೆಂದು ತಿಳಿಸಿದರು.
ಈ ಯೋಜನೆ ಕುರಿತಾದ ಯಾವುದೇ ಮಾಹಿತಿ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರುವವರು ನಗರದ ಎ ಎ ವೃತ್ತ ಸಮೀಪದ ಸ್ಮಾರ್ಟ್ ಸಿಟಿ ಕಚೇರಿಯ ಮೇಲ್ಭಾಗದಲ್ಲಿ ಇರುವ ಇಲಾಖೆಯ ಕಚೇರಿಗೆ ಆಗಮಿಸಿಬಹುದೆಂದು ಸಹ ಹೇಳಿದರು.
ಉಪನಿರ್ದೇಶಕರಾದ ಶ್ರೀ ಸುರೇಶ್ ರವರನ್ನು ಸನ್ಮಾನಿಸಿ ಮಾತನಾಡಿದ ಕ್ಲಬ್ ಅಧ್ಯಕ್ಷ ರೊ.ಮುಸ್ತಾಕ್ , ತಾವೂ ಸಹ ಕೈಗಾರಿಕೋದ್ಯಮಿಯಾಗಿದ್ದು ಸರ್ಕಾರದ ಹಲವಾರು ಯೋಜನೆಗಳು ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳ ಪ್ರೋತ್ಸಾಹಕ್ಕೆಂದೇ ಜಾರಿಯಲ್ಲಿದ್ದು, ಆನ್ ಲೈನ್ ನಲ್ಲಿ ಈ ಯೋಜನೆಗಳ ಬಹುತೇಕ ಪ್ರಕ್ರಿಯೆಗಳು ನಡೆಯುವುದರಿಂದ ಸೇವೆಗಳು ಪಾರದರ್ಶಕವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಜನರಿಗೆ ಲಭಿಸುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ರೊ.ಶ್ರೀಕಾಂತ್ ಎ.ವಿ., ಜೋನಲ್ ಲೆಫ್ಟಿನೆಂಟ್ ರೊ.ಮಂಜುಳಾ ರಾಜು, ಕ್ಲಬ್ ಕಲಿಕಾ ಮಾರ್ಗದರ್ಶಿ ರೊ.ಹೆಚ್.ಎಲ್.ರವಿ, ಮಾಜಿ ಅಧ್ಯಕ್ಷ ರೊ. ರಾಜು.ಸಿ ಹಾಗೂ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.
ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರವನ್ನು ಶ್ಲಾಘಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 30 ರಂದು ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. Empowering India’s MSMEs (Micro, Small, Medium Enterprises) ಎಂಬುದು ಈ ವರ್ಷದ ಧ್ಯೇಯವಾಗಿದೆ ಎಂದರು.