ಚಿತ್ರದುರ್ಗ: ಫಾರ್ಚೂನರ್ ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟು ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಸಮೀಪದ ಚಿಕ್ಕಬೇನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮೃತಪಟ್ಟವರನ್ನು ಬೆಂಗಳೂರು ಮೂಲದ ಪ್ರಜ್ವಲ್ ರೆಡ್ಡಿ(30), ಹರ್ಷಿತ(28) ಹಾಗೂ ನೋಹನ್(2) ಗುರುತಿಸಲಾಗಿದೆ. ಶಿಲ್ಪ ಮಹೇಂದ್ರ(32), ಸ್ವರ್ಣಜಾರ್ಜ್ ಪ್ರಜ್ವಲ್ ರೆಡ್ಡಿ, ಮಧುಮಿತ, ವಿಜಯರೆಡ್ಡಿ, ಶಿಚಿಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದು, ಇವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏನಿದು ಘಟನೆ :
ಕಳೆದ ರಾತ್ರಿ 8 ಪ್ರಯಾಣಿಕರು ಬೆಂಗಳೂರಿನಿಂದ ಗೋವಾಕ್ಕೆ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹೀಗಿರುವಾಗ ಚಿಕ್ಕಬೇನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಚಲಿಸುತ್ತಿದ್ದ ಕಂಟೇನರ್ ಟೈಯರ್ ಸ್ಫೋಟಗೊಂಡು ಹಠಾತ್ ವೇಗ ನಿಧಾನವಾಗಿದೆ. ಆದರೆ ಫಾರ್ಚುನರ್ ಕಾರು ಅತಿ ವೇಗದಲ್ಲಿ ಚಲಿಸುತ್ತಿದ್ದು, ಕಂಟೈನರ್ ನಿಧಾನವಾಗುವುದನ್ನು ಊಹಿಸಲು ಫಾರ್ಚೂನರ್ ಚಾಲಕನಿಗೆ ಗೊತ್ತಾಗಿಲ್ಲ. ಪರಿಣಾಮ ಫಾರ್ಚೂನರ್ ಚಾಲಕ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಕಂಟೇನರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ 8 ಪ್ರಯಾಣಿಕರಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. 5 ಜನರು ಗಾಯಗೊಂಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.