ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲಾ ಭೋವಿ ಸಮಾಜ ಬಾಂಧವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಬೆಂಬಲ ನೀಡುವಂತೆ ದಾವಣಗೆರೆ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಹೆಚ್. ಜಯಣ್ಣ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಕಾರಣವೆಂದರೆ ಬಿ.ಜೆ.ಪಿ. ಪಕ್ಷ ನಮ್ಮ ಸಮಾಜಕ್ಕೆ ಮಾಡಿರುವ ಅನ್ಯಾಯದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.
2008 ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಭೋವಿ ಸಮಾಜದ 4 ಜನ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದರು. 110 ಜನ ಬಿ.ಜೆ.ಪಿ. ಪಕ್ಷದ ಶಾಸಕರಿದ್ದರೂ ಬಹುಮತವಿರಲಿಲ್ಲ. ಈ ಸಂದರ್ಭದಲ್ಲಿ ಬಿಜೆಪಿ ಶಾಸಕಾಂಗ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಭೋವಿ ಸಮಾಜದ ಶಾಸಕರ బಲ ಪಡೆದು ಕರ್ನಾಟಕದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಸರ್ಕಾರ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದು ಇತಿಹಾಸ.
ತರುವಾಯ ವರ್ಷ ಕಳೆದ ನಂತಮುಖ್ಯಮಂತ್ರಿಯವರು ಅಪರೇಷನ್ ಕಮಲ ಮಾಡಿ ಅನ್ಯ ಪಕ್ಷದ ಹಲವಾರು ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡು ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಾರಣರಾದ ನಮ್ಮ ಸಮಾಜದ ಶಾಸಕರನ್ನು ಮಂತ್ರಿಮಂಡಲದಿಂದ ವಜಾಗೊಳಿಸಿ ಅನ್ಯಾಯ ಮಾಡಿದರು. ಇದನ್ನು ವಿರೋಧಿಸಿದ್ದಕ್ಕೆ ಅವರ ಶಾಸಕತ್ವವನ್ನು ಸಹ ರದ್ದುಗೊಳಿಸಿದರು. ನಮ್ಮ ಶಾಸಕರು ಅವರ ಶಾಸಕತ್ವವನ್ನು ಉಳಿಸಿಕೊಳ್ಳಲು ಸುಪ್ರೀಂಕೋರ್ಟ್ ತನಕ ಹೋಗಿ ಹೋರಾಟ ಮಾಡಿ ಅವರ ಶಾಸಕತ್ವವನ್ನು ಉಳಿಸಿಕೊಂಡರು. ಇದು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ ಎಂದರು.
2018 ರಲ್ಲಿ ರಚನೆಯಾದ ಸಮ್ಮಿಶ್ರ ಸರ್ಕಾರವನ್ನು ರಮೇಶ್ ಜಾರಕಿಹೊಳಿ 2019 ರಲ್ಲಿ ಪತನಗೊಳಿಸಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ ಸಂದರ್ಭದಲ್ಲಿ ನಮ್ಮ ಸಮಾಜದ ಅರವಿಂದ ಲಿಂಬಾವಳಿ ಮಂತ್ರಿಯಾಗಿದ್ದರು. 2020 ರ ಕೊನೆಯಲ್ಲಿ ವಯೋಮಿತಿ ಆಧಾರದಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿ ಬೇರೆಯವರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭದಲ್ಲಿ ಮೊದಲ ಹೆಸರೇ ಇದ್ದದ್ದು ಅರವಿಂದ ಲಿಂಬಾವಳಿಯವರದು. ನಮ್ಮ ಸಮಾಜದವರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ನಾವು ಖುಷಿಯಲ್ಲಿದ್ದೆವು. ಆದರೆ ಲಿಂಬಾವಳಿಯವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.
ಅರವಿಂದ ಲಿಂಬಾವಳಿಯವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ಮುಖಂಡರು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಿಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯನ್ನೂ ಮಾಡಲಿಲ್ಲ. ಇದು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯ ಎಂದರು.
2023 ರ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಲಿಂಬಾವಳಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಕೊಡಲಿಲ್ಲ. ಏಕೆಂದರೆ ಲಿಂಬಾವಳಿಯವರಿಗೆ ಟಿಕೇಟ್ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಕೇಳುತ್ತಾರೆ. ಎಂದು ಟಿಕೇಟ್ ತಪ್ಪಿಸಿದರು ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಸಾಮಾಜಿಕ ನ್ಯಾಯದಡಿಯಲ್ಲಿ ಮಂತ್ರಿಮಂಡಲದಲ್ಲಿ ಸ್ಥಾನ ನೀಡಿ ನಮ್ಮ ಸಮಾಜಕ್ಕೆ ನ್ಯಾಯ ನೀಡಿದೆ. 1999 ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದಾಗ ನಮ್ಮ ಸಮಾಜದವರೊಬ್ಬರು ಮಂತ್ರಿಯಾಗಿದ್ದು 2013 ರಲ್ಲಿ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸಮಾಜದ ಏಕೈಕ ಶಾಸಕರಾಗಿದ್ದ ಶಿವರಾಜ ತಂಗಡಗಿ ಇವರನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಮಂತ್ರಿಮಾಡಿ ನ್ಯಾಯ ನೀಡಿದರು. 2023 ರಲ್ಲಿ ಮತ್ತೆ ಪುನಃ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ನಮ್ಮ ಸಮಾಜದ ಶಿವರಾಜ ತಂಗಡಗಿ ಇವರನ್ನು ಮತ್ತೆ ಮಂತ್ರಿ ಮಾಡಿ ನಮ್ಮ ಸಮಾಜಕ್ಕೆ ನ್ಯಾಯ ನೀಡಿದರು.
ಆದ್ದರಿಂದ ನಮ್ಮ ಸಮಾಜಕ್ಕೆ ಎಲ್ಲಾ ರೀತಿಯಲ್ಲೂ ಅನ್ಯಾಯ ಮಾಡಿದ ಬಿಜೆಪಿಯನ್ನು ತಿರಸ್ಕರಿಸಿ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಕರೆ ಕೊಡುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ, ಸಮಾಜದ ಮುಖಂಡರಾದ ವಿ. ಗೋಪಾಲ್, ಜಿ.ಸಿ. ಮಂಜಪ್ಪ, ಅರ್ಜುನ್, ಶಿವಾನಂದ್, ಎಂ.ಬಿ. ನಾಗರಾಜ್, ಮಹಿಳಾ ಅಧ್ಯಕ್ಷೆ ಉಮಾ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.