ಭದ್ರಾವತಿ: ಸರ್ಕಾರಗಳು ಅಂಬೇಡ್ಕರ್ ಸ್ಮಾರಕವನ್ನು ಮತ್ತಷ್ಟು ಉನ್ನತಿಕರಿಸುವ ಅಗತ್ಯವಿದೆ ಎಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ.ಮೂರ್ತಿ ಹೇಳಿದರು.
ಭಾನುವಾರ ನಗರದ ಬಸವೇಶ್ವರ ವೃತ್ತದ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಸೇನೆಯ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ನಟರ ಸ್ಮಾರಕಗಳಿಗೆ ದೊರೆಯುತ್ತಿರುವ ಆದ್ಯತೆ ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕಕ್ಕೆ ದೊರೆಯದಿರುವುದು ವಿಪರ್ಯಾಸ ಎಂದರು.
ಅನೇಕ ದಲಿತ ಸಂಘಟನೆಗಳಿದ್ದರೂ ಅವುಗಳೆಲ್ಲವೂಗಳ ಆಶಯ ಒಂದೇ. ದಲಿತರಿಗೆ ಅನ್ಯಾಯವನ್ನು ತಡೆಯುವುದು. ಈ ನಿಟ್ಟಿನಲ್ಲಿ ಅಂಬೇಡ್ಕರ್ ಸೇನೆ ಕಾರ್ಯನಿರ್ವಹಿಸಲಿದೆ. ಅಂಬೇಡ್ಕರ್ ಸೇನೆ 30 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನೆಗೆ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಸ್ಯೆಗಳ ಕುರಿತು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಮಾಜಿ ಅಧ್ಯಕ್ಷೆ ಎಂ. ಎಸ್. ಸುಧಾಮಣಿ, ಸದಸ್ಯ ಚನ್ನಪ್ಪ, ಜಾರ್ಜ್, ಸೇನೆಯ ಜಿಲ್ಲಾಧ್ಯಕ್ಷ ಟಿ.ಎಂ.ಮಂಜುನಾಥ್, ಪದಾಧಿಕಾರಿಗಳಾದ ಸೆಲ್ವರಾಜ್, ಅಬ್ದುಲ್ ಖದಿರ್, ಅಂತೋಣಿ ವಿಲ್ಸನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.