ಶಿವಮೊಗ್ಗ : ಗಾಂಧೀಜಿಯವರ ತತ್ವ ಆದರ್ಶ ಗುಣಗಳು ಎಂದೆಂದಿಗೂ ಅಜರಾಮರ. ಈ ದೇಶ ಕಂಡ ಅಹಿಂಸಾವಾದಿ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯದ ಹೋರಾಟ ದಿನಗಳು ಹಾಗೂ ಅವರು ಗಳಿಸಿಕೊಟ್ಟ ಸ್ವತಂತ್ರವನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲವೆಂದು ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.
ರಾಜ್ಯಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರ ರಾಷ್ಟ್ರೀಯ ಶಿಕ್ಷಣ ಸಮಿತಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಒಂದು ವಾರದ ಎನ್ ಎಸ್ ಎಸ್ ಶಿಬಿರದಲ್ಲಿ ಎರಡನೇ ದಿನದಂದು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಹುತಾತ್ಮರ ಸ್ಮರಣೆಯನ್ನು ನಾವು ಪ್ರತಿನಿತ್ಯ ಮಾಡಲೇಬೇಕು. ನಮ್ಮ ಮಕ್ಕಳಿಗೆ ದೇಶಪ್ರೇಮ ಹಾಗೂ ಅವರ ಹೋರಾಟದ ದಿನಗಳನ್ನು ನೆನಪಿಸಬೇಕು. ಮಕ್ಕಳಲ್ಲಿ ರಾಷ್ಟ್ರಭಕ್ತಿ ತುಂಬುವ ಕೆಲಸವಾಗಬೇಕು. ದೇಶವನ್ನು ಮತ್ತು ತಂದೆ ತಾಯಿಯನ್ನು, ಗುರುಹಿರಿಯರನ್ನು ಗೌರವಿಸಿದಲ್ಲಿ ನಮ್ಮ ಮಕ್ಕಳು ಸುಸಂಸ್ಕೃತರಾಗುತ್ತಾರೆ ಎಂದರು.
ಎನ್ಎಸ್ಎಸ್ ನ ಮೂಲ ಉದ್ದೇಶವಾದ ಗ್ರಾಮಗಳ ಉದ್ದಾರದ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳುವುದೇ ಮೂಲ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ತೆರೆಯುವ ಮುಖಾಂತರ ಹೊಸ ಹೊಸ ಚಿಂತನೆ ಆಲೋಚನೆಗಳು ಮೂಡುತ್ತವೆ ಎಂದ ಅವರು, ಆಚಾರ್ಯ ತುಳಸಿ ರಾಷ್ಟ್ರೀಯ ಕಾಲೇಜು ತುಂಬಾ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎ.ಟಿ.ಎನ್.ಸಿ ಕಾಲೇಜಿನ ಪ್ರಾಂಶುಪಾಲರಾದ ಮಮತಾ ಪಿ ರಾವ್ ಮಾತನಾಡಿ, ಇಂದು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಜೀವನ ಮೌಲ್ಯಗಳು ಅಗತ್ಯವಾಗಿಬೇಕಾಗಿದೆ. ಗಾಂಧೀಜಿಯವರ ಒಂದೊಂದು ಚಿಂತನೆಗಳು ಸಹ ನಮ್ಮ ಬದುಕಿಗೆ ದಾರಿ ದೀಪವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪ್ರೊಫೆಸರ್ ಕೆ.ಎಂ.ನಾಗರಾಜ್ ಡಾ. ಶುಭ ಮರವಂತೆ, ಎಂ.ಎನ್.ವೆಂಕಟೇಶ್, ಕಾರ್ಯದರ್ಶಿ ಈಶ್ವರ್, ಬೆಂಗಳೂರು ಗಾಂಧಿ ಭವನ ಶಿವರಾಜ, ಈಶ್ವರ ಬಸವರಾಜ, ರವಿ ಕೊಟೊಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
==========