ಭದ್ರಾವತಿ: ಮಸಲ್ಮಾನರಿಗೆ ರಕ್ಷಣೆ ಕೊಡಿ ಪರವಾಗಿಲ್ಲ ಆದರೆ ಹಿಂದೂಗಳ ಮೇಲೆ ತಾತ್ಸಾರ ಏಕೆ? ಮುಖ್ಯಮಂತ್ರಿ, ಗೃಹ ಮಂತ್ರಿ ಮಕ್ಕಳಿಗೆ ಈ ಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು ಎಂದು ಶಿವಮೊಗ್ಗ ಲೋಕಸಭಾ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ಮಹಿಳೆಯರಿಗೆ ಭಾರತದಲ್ಲಿ ತಾಯಿ ಸ್ಥಾನ ನೀಡಲಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದೆ. ನೀವು ನೇಹಾ ಹತ್ಯೆ ಬಗ್ಗೆ ಮುಖ್ಯಮಂತ್ರಿಗಳು ಲವ್ ಜಿಹಾದ್ ಅಲ್ಲ ಎನ್ನುತ್ತಾರೆ. ಖಾಸಗಿ ವಿಚಾರವಾಗಿದ್ದರೆ ಕಾಲೇಜಿಗೆ ನುಗ್ಗಿ ಕೊಲೆ ಮಾಡಬಹುದಾ. ಸಿಒಡಿ ತನಿಖೆಗೆ ಕೊಟ್ಟಿದ್ದನ್ನು ಯಾರು ಒಪ್ಪಲ್ಲ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದರು.
ಹಿಂದೂ ಸಮಾವೇಶದ ಮೂಲಕ ರಾಜ್ಯದ ಹಿಂದೂಗಳನ್ನು ಜಾಗೃತಿ ಮಾಡುವ ಕೆಲಸ ಮಾಡಿದ್ದೀರ. ನಾವು ಹೀಗೆ ಮಾಡಿಲ್ಲ ಎಂದರೆ ನಮ್ಮ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದರು. ಹರ್ಷ ಏನು ತಪ್ಪು ಮಾಡಿದ್ದ? ಕದ್ದು ರಾತ್ರಿ ಹೊತ್ತು ಬಂದು ಕೊಲೆ ಮಾಡಿದ ಹೇಡಿ ಮುಸಲ್ಮಾನ ಗೂಂಡಾಗಳ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಿಎಂ ಮಾತನಾಡಲ್ಲ. ಕೇವಲ ಮುಸಲ್ಮಾನರ ರಕ್ಷಣೆ ಮಾಡಲು ನಿಮಗೆ ಮತ ಕೊಟ್ಟಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತೀರಿ ಎಲ್ಲಾ ಧರ್ಮದ ಜನರಿಗೆ ನೀವು ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ಪದೇ ಪದೇ ಹಿಂದೂ ಯುವತಿಯರ ಕೊಲೆಯಾದರೆ ರಾಜ್ಯದಲ್ಲಿ ರಕ್ತ ಕ್ರಾಂತಿ ಆಗಲಿದೆ. ಹಿಂದೂ ಸಮಾಜದ ತಾಳ್ಮೆ ದೌರ್ಬಲ್ಯವಲ್ಲ ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡರೆ ರಾಜ್ಯದಲ್ಲಿ ಧಂಗೆ, ರಕ್ತಕ್ರಾಂತಿ ಆಗಲಿದೆ ಎಂದರು.
ಕೊಟ್ಟಿಗೆಯಲ್ಲಿದ್ದ ಸಣ್ಣ ಸಣ್ಣ ಕರುವನ್ನು ಕದಿಯುತ್ತಾರೆ. ಹಿಡಿದುಕೊಟ್ಟರೆ ಅವರ ಮೇಲೆ ಕ್ರಮವಾಗುತ್ತದೆ. ಈ ವ್ಯವಸ್ಥೆ ತಡೆಯಬೇಕು ಇದು ಸಮಾವೇಶದ ಒತ್ತಾಯ ಎಂದರು. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥನ ಮಂದಿರ ಪಕ್ಕದಲ್ಲಿ ಜ್ಞಾನವ್ಯಾಪಿ ಮಸೀದಿ ಯಲ್ಲಿ ಪೂಜೆ ಮಾಡಲು ಕೋರ್ಟ್ ಅವಕಾಶ ಕೊಟ್ಟಿದೆ. ಮಥುರಾದಲ್ಲಿ ಸಹ ಕೃಷ್ಣ ಜನ್ಮ ಸ್ಥಾನದಲ್ಲಿದ್ದ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೃಷ್ಣ ಜನ್ಮ ಸ್ಥಾನದ ಮಸೀದಿಯ ಜಾಗದಲ್ಲಿ ಕೃಷ್ಣ ದೇವಸ್ಥಾನ ನಿರ್ಮಾಣ ವಾಗಲಿದೆ. ನಮ್ಮ ಪೂರ್ವಜರು ಕಟ್ಟಿದ್ದ ದೇವಸ್ಥಾನಗಳ ಜಾಗದಲ್ಲಿರುವ ಮಸೀದಿಗಳನ್ನು ಯಾವುದು ಬಿಡುವುದಿಲ್ಲ ಎಲ್ಲಾ ಕಡೆ ಮಂದಿರ ನಿರ್ಮಾಣ ಮಾಡುತ್ತೇವೆ ಎಂದರು.
ನಗರಕ್ಕೆ ಆಗಮಿಸಿದ ಈಶ್ವರಪ್ಪ ಅವರನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಗಾಂಧಿ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಈಶ್ವರಪ್ಪ ಅವರಿಗೇ ಜನರು ಪುಷ್ಪವೃಷ್ಠಿ ಮಾಡಿದರು.