


ದಾವಣಗೆರೆ: ವರ್ತಮಾನದ ಹೊಸ ಕಾನೂನುಗಳನ್ನು ಸವಾಲಾಗಿ ಸ್ವೀಕರಿಸಿ ನ್ಯಾಯದಾನ ಪ್ರಕ್ರಿಯೆಯಲ್ಲಿ ಯುವ ವಕೀಲರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್ ಸಲಹೆ ನೀಡಿದರು.
ನಗರದ ವಕೀಲರ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ನ್ಯಾಯದಾನದ ಪ್ರಕ್ರಿಯೆಯಲ್ಲಿ ವಕೀಲರ ವೃತ್ತಿ ಕೌಶಲ್ಯಗಳ ಕುರಿತ ಉಪನ್ಯಾಸ ಮಾಲಿಕೆ-5ನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.

ಯುವ ವಕೀಲರು ಕಕ್ಷಿದಾರನಿಂದ ಪ್ರಕರಣದ ಪೂರ್ಣ ವಿವರಗಳನ್ನು ಪಡೆದುಕೊಂಡು, ಅವನ ಸೂಚನೆಗಳನ್ನು ಗುರುತಿಸಿಕೊಂಡು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಆರಂಭದಿಂದಲೇ ಸಂಗ್ರಹಿಸಿಕೊಂಡು ಪ್ರಕರಣವನ್ನು 360 ಕೋನದಲ್ಲಿ ವೀಕ್ಷಿಸಿ ಪಡೆದುಕೊಳ್ಳ ಬಹುದಾದ ಪರಿಹಾರಗಳ ಬಗ್ಗೆ ಅಧ್ಯಯನ ಮಾಡಿ, ಸೂಕ್ತ ನ್ಯಾಯಾಲಯ ಅಥವಾ ವೇದಿಕೆಯತ್ತ ಸಾಗಬೇಕೆಂದು ಹೇಳಿದರು.

ಪರಿಹಾರ ದೊರಕಿಸಿದ ಸಂದರ್ಭದಲ್ಲಿ ಸಿಗುವ ಆನಂದ ಅವರ್ಣನೀಯ
ಉದಾತ್ತ ವಕೀಲ ವೃತ್ತಿಗೆ ಸರಿಸಟಿಯಾದ ಇನ್ನೊಂದು ವೃತ್ತಿಯಿಲ್ಲ. ನೊಂದ ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಪರಿಹಾರಗಳನ್ನು ದೊರಕಿಸಿದ ಸಂದರ್ಭಗಳಲ್ಲಿ ವಕೀಲರಿಗೆ ಸಿಗುವ ಆನಂದ ಅವರ್ಣನೀಯ.
ಪ್ರಕರಣದ ಸಂಗತಿಗಳ ಬಗ್ಗೆ ಪೂರ್ಣ ಅರಿವಿದ್ದಾಗ ಮಾತ್ರವೇ ಅವುಗಳನ್ನು ಸೂಕ್ತ ರೀತಿಯಲ್ಲಿ ನ್ಯಾಯಾಲಯಕ್ಕೆ ಮನಗಾಣುವಂತೆ ನಿವೇದಿಸಲು ಸಾಧ್ಯ ಆಗುತ್ತದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್ ಪ್ರತಿಪಾದಿಸಿದರು.
ಜ್ಞಾನ ಸುಲಭವಾಗಿ ಲಭಿಸದು
ಶಾಸಕಾಂಗ ರೂಪಿಸಿದ ಕಾನೂನುಗಳು ನ್ಯಾಯಾಲಯದ ತೀರ್ಪುಗಳು ಹಾಗೂ ಕಾನೂನಿನ ಇತ್ತಿಚೀನ ಅರ್ಥ ವಿವರಣೆಗಳೊಂದಿಗೆ ಸಿದ್ದರಾಗಿ ಆತ್ಮವಿಶ್ವಾಸದಿಂದ ನ್ಯಾಯಾಲಯಕ್ಕೆ ಹೋಗಬೇಕು. ಜ್ಞಾನ ಸುಲಭವಾಗಿ ಲಭಿಸದು. ಕಾನೂನು ಪುಸ್ತಕಗಳ ಜೊತೆಜೊತೆಗೆ ಕಾನೂನೇತರ ಗ್ರಂಥಗಳನ್ನು ಸಹ ಅಧ್ಯಯನ ಮಾಡಬೇಕು. ವೃತ್ತಿಯಲ್ಲಿ ಯಶಸ್ಸು ಸಾಧಿಸಿದ ನ್ಯಾಯವಾದಿಗಳ, ನ್ಯಾಯಾಧೀಶರ ಗ್ರಂಥಗಳನ್ನು ಓದಿ ಸ್ಫೂರ್ತಿ ಪಡೆಯಬೇಕೆಂದರು.
ಸಂಗತಿಗಳನ್ನು ಮುಚ್ಚಿಡಬೇಡಿ
ವಕೀಲರು ಯಾವುದೇ ಸಂದರ್ಭದಲ್ಲೂ ವೃತ್ತಿ ಸಂಹಿತೆಯಿಂದ ದೂರ ಸರಿಯದೇ ಕ್ಷಣಿಕ ಲಾಭಕ್ಕಾಗಿ ಸಂಗತಿಗಳನ್ನು ನ್ಯಾಯಾಲಯದಿಂದ ಮುಚ್ಚಿಡಲು ಪ್ರಯತ್ನಿಸದೇ ಇದ್ದಾಗ ಮಾತ್ರ ವಕೀಲರು ನ್ಯಾಯಾಲಯದ ಗೌರವಕ್ಕೆ ಪಾತ್ರರಾಗಲು ಸಾಧ್ಯ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್ ಹೇಳಿದರು.
ಕೇಸಿನ ಸಂಗತಿಗಳನ್ನು ಸರಿಯಾಗಿ ನಿರೂಪಿಸಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರಯ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ, ಕೇಸಿನ ಸಂಗತಿಗಳನ್ನು ಸರಿಯಾಗಿ ನಿರೂಪಿಸಿ, ಕೋರ್ಟಿನ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೇ ಯುಕ್ತ ಪರಿಹಾರವನ್ನು ನ್ಯಾಯಾಲಯದಿಂದ ಪಡೆಯಲು ವಕೀಲರು ಪ್ರಯತ್ನಿಸಬೇಕೆಂದು ತಿಳಿಸಿದರು.
ಯುವ ವಕೀಲರ ಸಾಮಾರ್ಥ್ಯ ಹೆಚ್ಚಿಸಲು ಪ್ರಯತ್ನ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಉಪನ್ಯಾಸ ಮಾಲಿಕೆಯು ಮುಂದುವರೆಯಲಿದ್ದು, ಮತ್ತಷ್ಟು ಉತ್ತಮ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ರೂಪಿಸುವ ಮೂಲಕ ಯುವ ವಕೀಲರ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.
1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜೆ.ವಿ.ವಿಜಯಾನಂದ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಮಾತನಾಡಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯದರ್ಶಿ ಎಸ್.ಬಸವರಾಜು, ಸಹ ಕಾರ್ಯದರ್ಶಿ ಎ.ಎಸ್.ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟ್ಟಿಗೆಹಳ್ಳಿಮಠ, ಎಲ್.ನಾಗರಾಜ್, ಚೌಡಪ್ಪ, ಭಾಗ್ಯಲಕ್ಷ್ಮೀ, ಸಂತೋಷ್‌ಕುಮಾರ್, ಮಧುಸೂಧನ್, ರಾಘವೇಂದ್ರ, ಬಿ.ಅಜ್ಜಯ್ಯ ಇತರರು ಇದ್ದರು.