


ನಂದೀಶ್ ಭದ್ರಾವತಿ, ಶಿವಮೊಗ್ಗ
ಭದ್ರಾವತಿಯಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಹಾಸಭಾ ಎಲೆಕ್ಷನ್ ಜೋರಾಗಿದ್ದು, ಅಭ್ಯರ್ಥಿಗಳು ಮಠ, ಮಾನ್ಯ ಕದ ತಟ್ಟುತ್ತಿದ್ದಾರೆ.

ವೀರಶೈವ ಲಿಂಗಾಯಿತ ಮಹಾಸಭಾ ವಿಜಯ್ ಕುಮಾರ್ ನೇತೃತ್ವದ ತಂಡ ಕಾಲಿಗೆ ಗೆಜ್ಜೆ ಕಟ್ಟಿಕೊಡುಬರಂತೆ ಓಡಾಡುತ್ತಿದ್ದಾರೆ. ಅದರಲ್ಲೂ ವಿಜಯ್ ಕುಮಾರ್ ಪ್ರತಿ ಮನೆ,ಮನೆಗೂ ಭೇಟಿ ನೀಡಿ ಮತದಾರರ ಮನವೊಲಿಸುತ್ತಿದ್ದಾರೆ. ಇದರ ಜತೆಗೆ ನಾನಾ ಸ್ವಾಮೀಜಿಗಳ ಬೆಂಬಲ ಕೇಳುತ್ತಿದ್ದಾರೆ. ಅದರಂತೆ ಪವಾಡ ಪುರುಷ ಗೋಣಿ ಬೀಡು ಶ್ರೀಗಳನ್ನು ವಿಜಯ್ ಕುಮಾರ್ ಭೇಟಿ ನೀಡಿ ಆರ್ಶೀವಾದ ಪಡೆದಿದ್ದಾರೆ.

ನಂತರ ಮಾತನಾಡಿದ ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನಿಮ್ಮ ಮೇಲೆ ನಮ್ಮ ಆರ್ಶೀವಾದ ಯಾವಾಗಲೂ ಇರುತ್ತದೆ. ಸಮಾಜಕ್ಕೆ, ಜನರಿಗೆ ಒಳ್ಳೆಯದು ಮಾಡಿ ಸದ್ಗುಣ ಬೆಳೆಸಿಕೊಳ್ಳಿ ಎಂದಿದ್ದಾರೆ.
ಅಭ್ಯರ್ಥಿ ವಿಜಯ್ ಕುಮಾರ್ ಮಾತನಾಡಿ, ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಮೊದಲಬಾರಿಗೆ ಗೋಣಿ ಬೀಡು ಶ್ರೀಗಳ ಆರ್ಶೀವಾದ ಪಡೆದಿದ್ದೇನೆ. ಶ್ರೀಗಳ ಆರ್ಶೀವಾದ ಸಿಕ್ಕಿರುವ ಕಾರಣ ನನ್ನ ನೇತೃತ್ವದ ತಂಡ ಗೆಲ್ಲಲಿದೆ. ಶ್ರೀಗಳು ಪವಾಡ ಪುರುಷರು, ಅವರ ಆರ್ಶೀವಾದ ನನ್ನನ್ನು ಸೇರಿದಂತೆ ಎಲ್ಲರ ಮೇಲಿದೆ. ಪ್ರಯತ್ನದ ಜತೆ ಆರ್ಶೀವಾದವೂ ಬೇಕು ಎಂದರು.
ಪವಾಡ ಪುರುಷ ಮಠ ಗೋಣಿಬೀಡು ; ಜಗದೀಶ್
ನಿರ್ದೇಶಕ ಸ್ಥಾನಕ್ಕೆ ನಿಂತಿರುವ ಜನ್ನಾಪುರದ ಜಗದೀಶ್ ಮಾತನಾಡಿ, ಗೋಣಿಬೀಡು ರಾಜ್ಯ ಕಂಡ ಶಕ್ತಿಮಠವಾಗಿದೆ ಈ ಬಾರಿ ನಮ್ಮ ಅಧ್ಯಕ್ಷ ವಿಜಯ್ ಕುಮಾರ್ ನೇತೃತ್ವ ತಂಡ ಶ್ರೀ ಗಳ ಆರ್ಶೀವಾದ ಪಡೆದಿದ್ದಾರೆ. ನಮ್ಮ ಶಕ್ತಿ, ಯುಕ್ತಿ ಬಳಸಿ ಚುನಾವಣೆ ಮಾಡುತ್ತಿದ್ದೇವೆ. ಪ್ರಯತ್ನವೂ ನಡೆಯುತ್ತಿದೆ ಎಂದರು. ಮಾತು ಮುಂದುವರಿಸಿದ ಜಗದೀಶ್ ಮಠದ ಬಗ್ಗೆ ಮಾತನಾಡಿದರು. ಭದ್ರಾವತಿ ತಾಲೂಕು ಗೋಣಿಬೀಡು ಶೀಲಸಂಪಾದನಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸರ್ವ ಸಂಘ ಪರಿತ್ಯಾಗಿಯಾಗಿಯಾಗಿದ್ದಾರೆ. ಒಪ್ಪೊತ್ತಿನ ಫಲಾಹಾರದೊಂದಿಗೆ ಸುದೀರ್ಘ 3 ವರ್ಷ ಮೌನಾಚರಣೆಯಲ್ಲಿದ್ದವರು.

ಒಬ್ಬ ಮನುಷ್ಯ ಕೇವಲ ಒಂದು ದಿನ ಯಾರೊಂದಿಗೂ ಮಾತನಾಡದೆ, ಹೊರಗೆಲ್ಲೂ ಹೋಗದೆ ಕೊಠಡಿಯೊಳಗೆ ಕೂರುವುದೆಂದರೆ ಅದೊಂದು ದೊಡ್ಡ ಶಿಕ್ಷೆ. ಊಟ ಬಿಟ್ಟು ಕೇವಲ ಹಾಲು ಹಣ್ಣು ಸೇವಿಸಿ ಒಂದು ಹೊತ್ತು ಅಥವಾ ಒಂದು ದಿನ ಸಾಗಹಾಕಬಹುದು. ಆದರೆ ಸುದೀರ್ಘ 3 ವರ್ಷದ ವರೆಗೆ ಯಾರೊಂದಿಗೂ ಮಾತನಾಡದೆ, ಕೊಠಡಿಯಿಂದ ಹೊರಗೆ ಬರದೆ ಕೇವಲ ಒಪ್ಪೊತ್ತಿಗೆ ಹಣ್ಣು ಅಥವಾ ಹಾಲು ಸೇವಿಸಿ ಹಠ ಯೋಗದ ಮೂಲಕ ತಪಸ್ಸಿನಲ್ಲಿ ತೊಡಗುವುದು ಅತ್ಯಂತ ಕಠಿಣ.
ಧ್ಯಾನ, ಮೌನ, ಉಪವಾಸ ಮತ್ತು ಏಕಾಂತದ ಕಠಿಣ ತಪಸ್ಸು ಕೈಗೊಂಡಿರುವ ಶ್ರೀ ಸಿದ್ದಲಿಂಗ ಸ್ವಾಮೀಜಿ ಭಕ್ತ ಸಮೂಹ ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ್ದವರು. ಈ ಅವಧಿಯಲ್ಲಿ ಅವರು ಒಂದೇ ಒಂದು ದಿನ ಅನಾರೋಗ್ಯಕ್ಕೆ ಒಳಗಾಗಿಲ್ಲ. ಒಂದು ಸಾರಿಯೂ ಮದ್ದು ತೆಗೆದುಕೊಂಡಿಲ್ಲ.
ಅಂತಃಸತ್ವ ಸಾಧನೆ ಅಚಲ ಅನುಷ್ಠಾನದಿಂದ ಮಾತ್ರ ಸಾಧ್ಯ, ಎಂಬುದನ್ನು ಅರಿತ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು 2010ನೇ ಶಿವರಾತ್ರಿ ದಿನ ಮಠದ ಕೊಠಡಿಯೊಂದರಲ್ಲಿ ಮೌನಾಚರಣೆಗೆ ಕುಳಿತರು. ತಮ್ಮ ಬೇಕು ಬೇಡಗಳಿಗೆ ಸ್ವಾಮೀಜಿ ಬಾಳಯ್ಯ ಎಂಬ ಶಿಷ್ಯನನ್ನು ನೇಮಿಸಿಕೊಂಡಿದ್ದರು.
ಶಿಷ್ಯನೊಂದಿಗೂ ಮಾತನಾಡದೆ ಚೀಟಿಗಳಲ್ಲಿ ಬರೆದು ಸಂಭಾಷಿಸುತ್ತಿದ್ದವರು. ಬಾಳಯ್ಯನ ಹೊರತಾಗಿ ಸ್ವಾಮೀಜಿಯನ್ನು ನೋಡಲು ಮತ್ಯಾರಿಗೂ ಅವಕಾಶವಿಲ್ಲ. 3 ವರ್ಷದ ಅವಧಿಯಲ್ಲಿ ಸರ್ವಧರ್ಮಗಳ ನೂರಾರು ಕೃತಿಗಳನ್ನು ಸ್ವಾಮೀಜಿಗಳು ಅಧ್ಯ ಯನ ಮಾಡಿದ್ದಾರೆ. ಈ ನಡುವೆ ಸ್ವಾಮೀಜಿಗಳ ಮೌನಾಚರಣೆ, ಏಕಾಂತ ತಪಸ್ಸು ಮಾಹಿತಿ ಪಡೆದು ಆನಂದಪುರಂ ಮುರುಘರಾಜೇಂದ್ರ ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಕಪ್ಪನಹಳ್ಳಿ ಶಿವಯೋಗ ಮಂದಿರದ ಶ್ರೀ ರೇವಣಸಿದ್ದ ಸ್ವಾಮೀಜಿ, ಎಡೆಯೂರು ತಾವರೆಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಮಠಕ್ಕೆ ಭೇಟಿ ನೀಡಿದ್ದರು ಎಂದರು.
75 ಕೆ.ಜಿ. ಇದ್ದ ಸ್ವಾಮೀಜಿಗಳು ಕಠಿಣ ತಪಸ್ಸಿನಿಂದಾಗಿ 3 ವರ್ಷದ ಅವಧಿಯಲ್ಲಿ 40 ಕೆ.ಜಿ.ಗಿಂತಲೂ ಕಡಿಮೆಯಾಗಿದ್ದರು. ದೇಹ ತೂಕ ಮತ್ತಷ್ಟು ಕುಸಿದಲ್ಲಿ ಅವರ ಜೀವಕ್ಕೆ ಅಪಾಯ ಎದುರಾಗಬಹುದೆಂದು ಅರಿತ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಠಿಣ ತಪಸ್ಸಿನಿಂದ ಹೊರಬರುವಂತೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಇತಿಹಾಸ ಹೇಳಿದರು.
ಶ್ರೀ ಸಿದ್ದಲಿಂಗ ಸ್ವಾಮೀಜಿ ಈಗಲ್ಲದೆ 1995ರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಕೆಂಕೆರೆಯ ಗವಿಯಲ್ಲೂ 21 ದಿನ ಕಠಿಣ ತಪಸ್ಸು ಮಾಡಿದ್ದರು. ಎಡೆಯೂರು ಶ್ರಿ ಸಿದ್ದಲಿಂಗೇಶ್ವರ, ಗೋಸಲ ಶ್ರೀ ಚನ್ನಬಸವೇಶ್ವರ, ಕೊಟ್ಟೂರು ಶ್ರೀ ಬಸವೇಶ್ವರ ಮತ್ತು ಕುಪ್ಪೂರಿನ ಶ್ರೀ ಮರುಳಸಿದ್ದೇಶ್ವರರ ಬಳಿಕ ಕತ್ತಲ ಗವಿಯೊಳಗೆ ಮತ್ಯಾರು ಪ್ರವೇಶ ಮಾಡುವ ಧೈರ್ಯ ತೋರಿರಲಿಲ್ಲ. ವಿಷಜಂತುಗಳಿಂದ ತುಂಬಿರುವ ಗವಿಯನ್ನು ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರವೇಶ ಮಾಡಿದ್ದಲ್ಲದೆ 21 ದಿನ ಕಠಿಣ ತಪಸ್ಸು ಮಾಡಿದ್ದರು.
ಮಠದ ಹಿನ್ನೆಲೆ
ಶೀಲ ಸಂಪಾದನಾ ಮಠ ರಾಜ್ಯದ ಅತ್ಯಂತ ಹಳೆಯ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದು. ಗೋಣಿಬೀಡು ಗ್ರಾಮದ ಭದ್ರಾ ನದಿ ಎಡದಂಡೆಯ ಸುಂದರ ಪ್ರಾಕತಿಕ ಮಡಿಲಲ್ಲಿ ಸ್ಥಾಪನೆಗೊಂಡಿರುವ ಶೀಲ ಸಂಪಾದನಾ ಮಠ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಧಾರ್ಮಿಕ ಕ್ರಾಂತಿಯಿಂದ ಶಿವಶರಣ- ಶರಣೆಯರ ದೊಡ್ಡ ಗುಂಪು ಅಕ್ಕನಾಗಮ್ಮ, ಚನ್ನಬಸವಣ್ಣ ಹಾಗೂ ನುಲಿಯಚಂದಯ್ಯ ಅವರ ನೇತತ್ವದಲ್ಲಿ ದಕ್ಷಿಣಾಭಿಮುಖವಾಗಿ ಹೊರಟು ವಚನ ಸಾಹಿತ್ಯವನ್ನು ಸಂರಕ್ಷಿಸಿಕೊಂಡು ಬೆಳಗಾವಿ ಜಿಲ್ಲೆಯ ಮೂಲಕ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಉಳವಿಗೆ ಬಂದರು.
ಉಳವಿಯಲ್ಲಿ ಚನ್ನ ಬಸವಣ್ಣ ಅವರನ್ನು ನೆಲೆಗೊಳಿಸಿ ಅಕ್ಕನಾಗಮ್ಮ ಮತ್ತು ನುಲಿಯಚಂದಯ್ಯ ಅವರು ಗೋಣಿಬೀಡಿಗೆ ಬಂದರು. ಇದೇ ಸಮಯದಲ್ಲಿ ಶ್ರೀ ಸಿದ್ದವೀರ ಸ್ವಾಮೀಜಿ ಅವರು ಶೀಲ ಸಂಪಾದನಾ ಮಠ ಸ್ಥಾಪಿಸಿ ಶರಣ ಶರಣೆಯರಿಗೆ ನೆಲೆ ಒದಗಿಸಿದರು. ಮಠದಲ್ಲಿ ಇಲ್ಲಿವರೆಗೆ 19 ಸ್ವಾಮೀಜಿಗಳು ಪಟ್ಟಾಧಿಕಾರ ಪಡೆದಿದ್ದಾರೆ. 19ನೇ ಪೀಠಾಧಿಕಾರಿಯಾಗಿ ಶ್ರೀ ಸಿದ್ದಲಿಂಗಸ್ವಾಮೀಜಿ ಅವರು 1995ನೇ ಫೆಬ್ರವರಿ 17ರಂದು ಅಧಿಕಾರ ಪಡೆದಿದ್ದರು ಎಂಬ ಮಾಹಿತಿ ಪಡೆದರು.