ದಾವಣಗೆರೆ : ಲೋಕಸಭಾ ಕ್ಷೇತ್ರದ ಮತ ಎಣಿಕೆಯು ತೋಳಹುಣಸೆ ದಾವಣಗೆರೆ ವಿಶ್ಯವಿದ್ಯಾನಿಲಯದಲ್ಲಿನ ಶಿವಗಂಗೋತ್ರಿಯಲ್ಲಿ ಜೂನ್ 4 ರ ಬೆಳಗ್ಗೆ 8 ಗಂಟೆಯಿಂದ ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಮಂಗಳವಾರ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಎಣಿಕೆ ಕೊಠಡಿಗಳಲ್ಲಿ ಕೈಗೊಂಡ ಸಿದ್ದತೆಗಳನ್ನು ಪರಿಶೀಲಿಸಿ ಮಾತನಾಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು ಒಂದು ಸುತ್ತಿಗೆ 112 ಮತಗಟ್ಟೆಗಳ ಎಣಿಕೆ ನಡೆಯಲಿದೆ ಎಂದರು.
ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು ಕನಿಷ್ಠ 16 ಹಾಗೂ ಗರಿಷ್ಠ 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಎಣಿಕೆ ಟೇಬಲ್‍ನಲ್ಲಿ ಎಣಿಕೆ ವೀಕ್ಷಕರು, ಎಣಿಕೆ ಸಹಾಯಕರು, ಮೈಕ್ರೋ ಅಬ್ರರ್‍ವರ್‍ಗಳು ಕಾರ್ಯನಿರ್ವಹಿಸುವರು. ಮತ್ತು ಅಂಚೆ ಮತ ಎಣಿಕೆಗೆ 12 ಟೇಬಲ್‍ಗಳನ್ನು ಹಾಕಲಾಗಿದ್ದು ಸೇವಾ ಮತದಾರರ ಮತ ಎಣಿಕೆಗೆ 1 ಟೇಬಲ್‍ನಲ್ಲಿ ಎಣಿಕೆ ನಡೆಯಲಿದೆ.
ಎಣಿಕೆ ಪ್ರಕ್ರಿಯೆಯು ಜೂನ್ 4 ರ ಬೆಳಗ್ಗೆ 6.30 ರಿಂದ ಪ್ರಾರಂಭವಾಗಲಿದ್ದು ಮೊದಲು ಅಂಚೆ ಮತ ಎಣಿಕೆ ಆರಂಭವಾಗಲಿದ್ದು 8 ಗಂಟೆಗೆ ಜೊತೆಯಲ್ಲಿಯೇ ವಿದ್ಯುನ್ಮಾನ ಮತ ಯಂತ್ರದ ಎಣಿಕೆ ಕಾರ್ಯ ಆರಂಭವಾಗಲಿದೆ. ಪ್ರತಿ ಸುತ್ತಿನ ಎಣಿಕೆ ಮುಕ್ತಾಯವಾದ ನಂತರ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಫಲಿತಾಂಶ ಪ್ರಚಾರಪಡಿಸಲಾಗುತ್ತದೆ ಎಂದರು.