ನ್ಯಾಮತಿ: ತಾಲೂಕಿನ ಸವಳಂಗ ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ ಗ್ರಾಮದ ಸಮೀಪ ಬುಲೇರೋ ವಾಹನವೊಂದು ಪಲ್ಟಿಯಾಗಿ ವಾಹನದ ಹಿಂಬದಿಯ ಕ್ಯಾಬಿನ್ನಲ್ಲಿ ಕುಳಿತಿದ್ದ ಅಡಿಕೆ ಕೊಯ್ಲು ಕಾರ್ಮಿಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಮೃತರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಚಂದನಕೆರೆ ಗ್ರಾಮದವರಾಗಿದ್ದು ಶಿಕಾರಿಪುರ ತಾಲೂಕಿನ ಹರಿಷಿಣಗೆರೆ ಗ್ರಾಮದ ಅಡಕೆ ತೋಟವೊಂದರಿಂದ ಅಡಿಕೆ ಕೊಯ್ಲು ಮುಗಿಸಿಕೊಂಡು ಸಂಜೆ ಗ್ರಾಮಕ್ಕೆ ವಾಪಸ್ ಬರುವ ಮಾರ್ಗ ಮದ್ಯೆ ಚಿನ್ನಿಕಟ್ಟೆ ಗ್ರಾಮದ ಸಮೀಪ ಅಪಘಾತ ಸಂಭವಿಸಿದೆ.
ಅಪಘಾತಗೊಂಡವರನ್ನು ಆ್ಯಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ದಾಖಲಿಸಿದ್ದು ಮಂಜುನಾಥ ಎಂಬುವವರು ಮಾರ್ಗ ಮದ್ಯೆ ಮೃತಪಟ್ಟಿದ್ದಾರೆ. ನಾಗರಾಜ, ಗೌತಮ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇನ್ನೂ ಐವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅಪಘಾತಕ್ಕೆ ಕಾರಣ
ಅಡಕೆ ಕೊಯ್ಲು ಮುಗಿಸಿಕೊಂಡು ಬುಲೇರೋ ವಾಹನದಲ್ಲಿ ಅಡಕೆ, ಹುಲ್ಲಿನ ಪೆಂಡಿಗಳನ್ನು ವಾಹನದ ಹಿಂಭಾಗದ ಕ್ಯಾಬಿನ್ನಲ್ಲಿ ತುಂಬಿಕೊಂಡು ಬರುವಾಗ ಹಸುವೊಂದು ಏಕಾಏಕಿ ಅಡ್ಡಬಂದಿದೆ. ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ವಾಹನ ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವೆಂದು ವಾಹನದಲ್ಲಿದ್ದ ಕಾರ್ಮಿಕನೊಬ್ಬ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.