ದಾವಣಗೆರೆ : ಅಪೆಕ್ಸ್ ಬ್ಯಾಂಕ್ ನಲ್ಲಿ ಸ್ವಾಮಿ ಎಂಬಾತ ಇದ್ದ. ಆತನನ್ನು ಮುಂದುವರಿಸಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ನಲ್ಲಿ ಗಂಡಸರು ಇಲ್ವಾ? ಅಪೆಕ್ಸ್ ಬ್ಯಾಂಕ್ ಹೋಗುವಂಥ ಗಂಡಸರು ಕಾಂಗ್ರೆಸ್ ನಲ್ಲಿ ಇಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ್ದ ಶಾಸಕ ಶಿವಗಂಗಾ ಬಸವರಾಜ್ ಮಾತಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಂಗುಡಿ ಬಕ್ಕಣ್ಣ ಸ್ಪಷ್ಟನೆ ನೀಡಿದ್ದಾರೆ
ಈ ಹಿಂದಿನ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಇದ್ದ ವೇಳೆ ಅಪೆಕ್ಸ್ ಬ್ಯಾಂಕ್ ಗೆ ಚನ್ನಗಿರಿಯ ಸ್ವಾಮಿ ಎಂಬುವರನ್ನು ಚುನಾವಣೆ ಮೂಲಕ ಅವಿರೋಧವಾಗಿ ದಾವಣಗೆರೆ ಜಿಲ್ಲೆಯಿಂದ ಕಳುಹಿಸಲಾಯಿತು. ಅಂತೆಯೇ ಹಾಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ವಾಮಿ ಅಧಿಕಾರ ಅವಧಿ 2026 ಡಿಸೆಂಬರ್ ಗೆ ಮುಗಿಯುತ್ತದೆ. ಹಾಗಾಗಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ವಾಮಿ ರಾಜೀನಾಮೆ ಕೊಡದೇ ಆಡಳಿತ ಮಂಡಳಿ ಅಪೆಕ್ಸ್ ಬ್ಯಾಂಕ್ ಗೆ ದಾವಣಗೆರೆ ಜಿಲ್ಲೆಯಿಂದ ಯಾರನ್ನು ನಾಮನಿರ್ದೇಶನ ಮಾಡಿಲ್ಲ. ಈ ಬಗ್ಗೆ ಶಾಸಕ ಶಿವಗಂಗಾ ಬಸವರಾಜ್ ಗೆ ಮಾಹಿತಿ ಇರದೇ ಇರಬಹುದು. ನಾನು ಕೂಡ ವೈಯಕ್ತಿಕವಾಗಿ ರಾಜೀನಾಮೆ ನೀಡಿ ಎಂದು ಹೇಳಿದ್ದೇನೆಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆಡಳಿತ ಮಂಡಳಿ ಹೇಳೋದೇನು?
ಅಪೆಕ್ಸ್ ಬ್ಯಾಂಕ್ ಗೆ ಒಂದು ಜಿಲ್ಲೆಯಿಂದ ಡಿಸಿಸಿ ಬ್ಯಾಂಕ್ ಗೆ ಆಯ್ಕೆಯಾದ ಒಬ್ಬ ನಿರ್ದೇಶಕನನ್ನು ಆಡಳಿತ ಮಂಡಳಿ ಒಮ್ಮತ ನಿರ್ಧಾರದಿಂದ ಒಬ್ಬರನ್ನು ಕಳಿಸಬಹುದು. ಅಂತೆಯೇ ಬಿಜೆಪಿ ಅಧಿಕಾರವಾಧಿಯಲ್ಲಿ ನಿರ್ದೇಶಕ ಸ್ವಾಮಿಯನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಆದರೀಗ ಕಾಂಗ್ರೆಸ್ ಬೆಂಬಲಿತ ಆಡಳಿತಮಂಡಳಿ ಇದ್ದು, ನಮ್ಮಲ್ಲಿಯೇ ಒಬ್ಬರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರನ್ನಾಗಿ ಮಾಡಲು ಒಮ್ಮತ ಆಧಾರದ ಮೇಲೆ ಕಳಿಸಬಹುದು ಎನ್ನುತ್ತದೆ.
ಪ್ರಕ್ರಿಯೆ ಹೇಗಿರುತ್ತದೆ
ಅಪೆಕ್ಸ್ ಬ್ಯಾಂಕ್ ಗೆ ನಿರ್ದೇಶಕರಾಗಲು ಮೊದಲು ಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿರಬೇಕು. ನಂತರ ಡಿಸಿಸಿ ಬ್ಯಾಂಕ್ ಎಂಡಿ ಮೂಲಕ ಮಂಡಿಸಬೇಕಾದ ವಿಷಯವನ್ನು ಬೋರ್ಡ್ ಮೀಟಿಂಗ್ ನಲ್ಲಿ ಸಬ್ಜೆಕ್ಟ್ ತರಬೇಕು. ಅಲ್ಲಿ ಆಡಳಿತ ಮಂಡಳಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತದೆ. ಆಡಳಿತ ಮಂಡಳಿ ಸೂಚಿಸುವ ವ್ಯಕ್ತಿಯನ್ನು ಅಧ್ಯಕ್ಷರು ಅಪೆಕ್ಸ್ ಬ್ಯಾಂಕ್ ಗೆ ಕಳಿಸಬಹುದು. ಇಲ್ಲಿ ಅಧ್ಯಕ್ಷರ ತೀರ್ಮಾನ ಅಂತಿಮವಲ್ಲ. ಆಡಳಿತ ಮಂಡಳಿ ತೀರ್ಮಾನವೇ ಅಂತಿಮ.
ಅಪೆಕ್ಸ್ ಬ್ಯಾಂಕ್ ಗೆ ಚುನಾವಣೆ ಮೂಲಕ ಆಯ್ಕೆಯಾದರೂ, ಹೊಸ ಆಡಳಿತ ಮಂಡಳಿ ನಾಮ ನಿರ್ದೇಶನ ಮಾಡುವ ಹೆಸರೇ ಅಂತಿಮ
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಮೂಲಕ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರೂ, ಅಧಿಕಾರವಧಿ ಮುಗಿದರೂ ಅಥವಾ ಮುಗಿಯದೇ ಹೋದರೂ, ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಕೈಗೊಳ್ಳುವ ನಿರ್ಧಾರವೇ ಅಂತಿಮ. ಹಾಗಾಗಿ ಆಡಳಿತ ಮಂಡಳಿ ಒಮ್ಮತದ ನಿರ್ಧಾರ ತೆಗೆದುಕೊಂಡು ಬೋರ್ಡ್ ಮೀಟಿಂಗ್ ನಲ್ಲಿ ವಿಷಯ ಮಂಡನೆ ಮಾಡಿ ಬಹುಮತದ ಆಧಾರದ ಮೇಲೆ ಹೆಸರನ್ನು ನಾಮ ನಿರ್ದೇಶನ ಮಾಡಬಹುದು. ಈ ಹೆಸರನ್ನು ಅಫೆಕ್ಸ್ ಬ್ಯಾಂಕ್ ಗೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರು ರಾಜ್ಯಮಟ್ಟದ ಅಫೆಕ್ಸ್ ಬ್ಯಾಂಕ್ ಗೆ ಕಳಿಸಬಹುದು. ಅಲ್ಲಿ ನಾಮ ನಿರ್ದೇಶನ ಮಾಡಿದ ಕಳುಹಿಸಿದ ಹೆಸರು ನಿರ್ದೇಶಕನಾಗಿ ಆಯ್ಕೆಯಾಗುತ್ತಾರೆ.
ಶಾಸಕ ಶಿವಗಂಗಾ ಸ್ವ ಪಕ್ಷೀಯರ ವಿರುದ್ದ ತಿರುಗಿಬಿದ್ದಿದ್ದು ಯಾಕೆ?
ಬಿಜೆಪಿ ಬೆಂಬಲಿತ ಸ್ವಾಮಿ, ಶಾಸಕ ಶಿವಗಂಗಾ ಬಸವರಾಜ್ ಬೆಂಬಲಿತ ದೀಪಕ್ ನಡುವೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನೇರಹಣಾಹಣಿ ಇತ್ತು. ಸ್ವಾಮಿ ಪರ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ನಿಂತರೇ ದೀಪಕ್ ಪರ ಹಾಲಿ ಶಾಸಕ ಶಿವಗಂಗಾ ಬಸವರಾಜ್ ನಿಂತಿದ್ದರು..ಅಲ್ಲದೇ ಶಾಸಕ ಶಾಂತನಗೌಡ ಕೂಡ ಶಿವಗಂಗಾ ಬಸವರಾಜ್ ಬೆಂಬಲಕ್ಕೆ ನಿಂತಿದ್ದರು. ಈ ನಡುವೆ ಚನ್ನಗಿರಿ ವಿಧಾನಸಭಾ ಚುನಾವಣೆಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಹಾಗೂ ಶಿವಗಂಗಾ ಬಸವರಾಜ್ ನಡುವೆ ನೇರ ಹಣಾಹಣಿ ಇತ್ತು..ಅಂತಿಮವಾಗಿ ಶಿವಗಂಗಾ ಬಸವರಾಜ್ ಗೆದ್ದರು. ಅಲ್ಲಿಂದ ಬಿಜೆಪಿಯ ಮಾಡಾಳ್ ಮಲ್ಲಿಕಾರ್ಜುನ್, ಕಾಂಗ್ರೆಸ್ ನ ಶಿವಗಂಗಾ ಬಸವರಾಜ್ ನಡುವೆ ರಾಜಕೀಯ ದ್ವೇಷ ಉಂಟಾಯಿತು. ಅದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪೋಟಗೊಂಡಿತು.
ಮಾಡಾಳ್ ಮಲ್ಲಿಕಾರ್ಜುನ್ ಪಟ್ಟ ಶಿಷ್ಯ ಸ್ವಾಮಿಗೆ ಮುಂದುವರೆದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನ..ಯಾಕಾಗಿ?
ಬಿಜೆಪಿಯ ಮಾಡಾಳ್ ಮಲ್ಲಿಕಾರ್ಜುನ್ ಪಟ್ಟ ಶಿಷ್ಯ ಸ್ವಾಮಿಯಾಗಿದ್ದು, ಚನ್ನಗಿರಿಯಲ್ಲಿ ತಮ್ಮದೇ ವರ್ಚಸ್ಸು ಇದೆ. ಸದ್ಯ ಮಾಜಿ ಶಾಸಕ ರೇಣುಕಾಚಾರ್ಯ ಜತೆ ಗುರುತಿಸಿಕೊಂಡಿದ್ದಾರೆ. ರೇಣುಕಾಚಾರ್ಯ ಕೂಡ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜತೆ ಚೆನ್ನಾಗಿದ್ದಾರೆ. ಇದನ್ನು ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ವಾಮಿ ಎನ್ ಕ್ಯಾಚ್ ಮಾಡಿಕೊಂಡು ಮಾಡಾಳ್ ಮಲ್ಲಿಕಾರ್ಜುನ್ ಮೂಲಕ ಮಾಜಿ ಶಾಸಕ ರೇಣುಕಾಚಾರ್ಯರನ್ನು ಬಳಸಿಕೊಂಡು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮೇಲೆ ಒತ್ತಡ ತಂದು ಹಾಲಿ ನಿರ್ದೇಶಕ ಸ್ವಾಮಿಯನ್ನು ಅಪೆಕ್ಸ್ ಬ್ಯಾಂಕ್ ಗೆ ಮುಂದುವರಿಸಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಇದು ಶಾಸಕ ಶಿವಗಂಗಾ ಬಸವರಾಜ್ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ನಾನು ಈ ಕ್ಷೇತ್ರದ ಶಾಸಕನಾಗಿದ್ದರೂ, ಕಾಂಗ್ರೆಸ್ ಬೆಂಬಲಿತ ಆಡಳಿತವಿದ್ದರೂ, ನನ್ನ ವಿರೋಧಿ ಪಡೆ ಮಾಡಾಳ್ ಮಲ್ಲಿಕಾರ್ಜುನ್ ಶಿಷ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿದ್ದಾರೆ. ಮುಂದೆ ಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಿಗೆ ತೊಂದರೆಯಾಗಲಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬೆಂಬಲ ನೀಡಿದ್ದು, ಡಿಸಿಸಿ ಬ್ಯಾಂಕ್ ನಿಂದ ಮಾಡಾಳ್ ಬೆಂಬಲಿತ ನಿರ್ದೇಶಕ ಸ್ವಾಮಿಯನ್ನೇ ಮುಂದುವರಿಸಲಾಗಿದೆ. ಆದ್ದರಿಂದ ಆಡಳಿತ ಮಂಡಳಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಅಪೆಕ್ಸ್ ಬ್ಯಾಂಕ್ ಗೆ ಕಳುಹಿಸಿ ಎಂಬುದು ಶಾಸಕ ಶಿವಗಂಗಾ ಬಸವರಾಜ್ ಮಂಡಿಸುತ್ತಿರುವ ವಾದ.
ಒಳ ಒಪ್ಪಂದದ ಆರೋಪ
ಚನ್ನಗಿರಿಯಲ್ಲಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲಲು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಕಾರಣ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಚುನಾವಣೆ ಎಂದ ಮೇಲೆ ಸೋಲು ಗೆಲುವು ಸಹಜ. ಸೋಲು ನಾವು ಒಪ್ಪಿಕೊಳ್ಳುತ್ತೇವೆ. ನಮ್ಮವರಿಂದಲೇ ಸೋತರೆ ನಮಗೆ ಹೇಗಾಗಬೇಡ ಎಂದು ಶಾಸಕ ಶಿವಗಂಗಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವಿರುದ್ದ ಕಿಡಿಕಾರಿದ್ದರು.
ಬಕೆಟ್ ಹಿಡಿಯುವ ರಾಜಕಾರಣ ಮಾಡೋಲ್ಲ ; ಶಾಸಕ ಶಿವಗಂಗಾ
ನಾನು ದಾವಣಗೆರೆ ಜಿಲ್ಲೆಯಲ್ಲಿ ಸಚಿವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ಕುರಿತಂತೆ ಸಿಎಂ, ಡಿಸಿಎಂ ಗಮನಕ್ಕೆ ತಂದಿದ್ದೇನೆ. ಸಿಎಂ ಸಿದ್ದರಾಮಯ್ಯರು ಪತ್ರಕ್ಕೆ ಬೆಲೆ ನೀಡುತ್ತಾರೆ ಎಂಬ ವಿಶ್ವಾಸ ಇದೆ. ನಮ್ಮದು ಬಿಸಿರಕ್ತ. ಏನು ನಡೆಯುತ್ತೋ ಅದನ್ನೇ ಹೇಳುತ್ತೇವೆ. ಬಕೆಟ್ ಹಿಡಿಯುವ ರಾಜಕಾರಣ ಮಾಡಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನಡೆ ಬಗ್ಗೆ ಪತ್ರ ಬರೆಯಲೇಬೇಕಿತ್ತು. ಬರೆದಿದ್ದೇನೆ ಎಂದು ಶಾಸಕ ಶಿವಗಂಗಾ ತಿಳಿಸಿದ್ದರು.
ಯಾರು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳು
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸದ್ಯ ಹಿರಿಯ ಮುತ್ಸದ್ದಿ ಜೆ.ಆರ್.ಷಣ್ಮುಖಪ್ಪ, ಎಚ್.ಕೆ.ಬಸಪ್ಪ, ವೇಣುಗೋಪಾಲ ರೆಡ್ಡಿ, ಮುದೇಗೌಡ್ರು ಗಿರೀಶ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಕಾಂಕ್ಷಿಗಳಿದ್ದು, ಇವರಲ್ಲೊಬ್ಬರನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ನಾಮ ನಿರ್ದೇಶನ ಮಾಡಬಹುದಾಗಿದ್ದು, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಗ್ಗೆ ಗಮನಹರಿಸುತ್ತಾರಾ ಎಂದು ಕಾದು ನೋಡಬೇಕಿದೆ.
ಹೊನ್ನಾಳಿ ಶಾಸಕ ಪುತ್ರ ಸುರೇಂದ್ರ ಪರವಹಿಸಿದ ಶಾಸಕ ಶಿವಗಂಗಾ ಬಸವರಾಜ್ ಸ್ವ ಕ್ಷೇತ್ರದ ಇಬ್ಬರನ್ನು ಯಾಕೆ ಪರಿಗಣಿಸಲಿಲ್ಲ?
ಕಾಂಗ್ರೆಸ್ ಶಾಸಕ ಶಾಂತನಗೌಡ ಪುತ್ರ, ಹಾಲಿ ನಿರ್ದೇಶಕ ಸುರೇಂದ್ರರನ್ನು ಶಾಸಕ ಶಿವಗಂಗಾ ಬಸವರಾಜ್ ಶಿಫಾರಸ್ಸು ಮಾಡಿದ್ದು, ಸ್ವ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಎಚ್ .ಕೆ.ಬಸಪ್ಪ, ಸಂತೋಷ ಇದ್ದು, ಅವರನ್ನು ಬಿಟ್ಟು ಹೊನ್ನಾಳಿ ಶಾಸಕ ಶಾಂತನಗೌಡ ಪುತ್ರ ಸುರೇಂದ್ರರನ್ನು ಶಿಫಾರಸ್ಸು ಮಾಡಿರುವುದು ಕೂಡ ನಾನಾ ಅನುಮಾನಗಳಿಗೆ ಕಾರಣವಾಗಿದೆ. ಒಟ್ಟಾರೆ ಡಿಸಿಸಿ ಬ್ಯಾಂಕ್ ಪಡಸಾಲೆಯಲ್ಲಿ ನಾನಾ ಚರ್ಚೆಗಳು ಆಗುತ್ತಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಕಾದು ನೋಡಬೇಕಿದೆ.