ಜಗಳೂರು: ಪಟ್ಟಣದ ಮರೇನಹಳ್ಳಿ ರಸ್ತೆಯ ರೈತ ಆಗ್ರೋ ಕೇಂದ್ರ ಮತ್ತು ದಾವಣಗೆರಗೆ ರಸ್ತೆಯ ಕಿಸಾನ್ ಆಗ್ರೋ ಕೇಂದ್ರದಲ್ಲಿ ಅಮಾಯಕರ ಹೆಸರಿನಲ್ಲಿ ಕೋಟಿ ಕೋಟಿ ರೂ ವಂಚನೆ ಬಹಿರಂಗವಾಗಿದೆ. ಮರೇನಹಳ್ಳಿ ರಸ್ತೆಯಲ್ಲಿರುವ ರೈತ ಆಗ್ರೋ ಎಂಬ ರಸಗೊಬ್ಬರ, ಬಿತ್ತನೆ ಬೀಜಗಳ ಮಾರಾಟ ಮಳಿಗೆ ಮಾಲೀಕನೆ ಬೇರೆ, ಆಗ್ರೋ ಕೇಂದ್ರ ನಡೆಸುತ್ತಿದ್ದ ವ್ಯಕ್ತಿಗಳೆ ಬೇರೆ. ಕಳೆದ ಒಂಭತ್ತು ತಿಂಗಳ ಹಿಂದೆ ಹೈಟೆಕ್ ಮಾದರಿಯಲ್ಲಿ ಆರಂಭವಾದ ರೈತ ಆಗ್ರೋ (ಪರವಾನಿಗೆ, ಜಿಎಸ್ಟಿಯಲ್ಲೂ ಫೋರ್ಜರಿ)ಬಿತ್ತನೆ ಬೀಜಗಳ ವಿತರಕರಿಗೆ ಪಂಗನಾಮ ಹಾಕಿದೆ.
ಘಟನೆ ವಿವರ: ಕುಮಾರ್ಗೌಡ ಅಲಿಯಾಸ್ ವೀರೇಶ್ಗೌಡ ಎಂಬ ಮೋಸಗಾರ ಅಮಾಯಕ ವ್ಯಕ್ತಿಗಳ ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಲೈಸೆನ್ಸ್ ಪಡೆದು ಮೋಸ ಮಾಡಿ ಪರಾರಿಯಾಗಿದ್ದಾರೆ. ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿರುವ ರೈತ ಆಗ್ರೋ ಕೇಂದ್ರವನ್ನು ಉದ್ದಗಟ್ಟ ಗ್ರಾಮದ ರುದ್ರೇಶ್ ಮತ್ತು ಕಲ್ಲೇಶ್ವರ ಲಾಡ್ಜ್ ಎದುರು ಇರುವ ಕಿಸಾನ್ ಆಗ್ರೋ ಮಳಿಗೆಯಲ್ಲಿ ಜಯ್ಯಪ್ಪ ಎಂಬ ವ್ಯಕ್ತಿಯ ಹೆಸರಿನಲ್ಲಿ ಪರವಾನಿಗೆ ಪಡೆದು, ಕಳೆದ ಎರಡು ವರ್ಷಗಳಿಂದ ಕುಮಾರ್ಗೌಡ, ಸಂತೋಷ್ಕುಮಾರ್ (ನಕಲಿ ಆಧಾರ್ ಕಾರ್ಡ್)ಎಂಬ ಹೆಸರುಗಳಿಂದ ಆ ವ್ಯಕ್ತಿ ವ್ಯವಹಾರ ನಡೆಸುತ್ತಿದ್ದ. ಆದರೆ ಜಯಪ್ಪ ಮತ್ತು ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ಇಬ್ಬರು ವ್ಯಕ್ತಿಯ ಹೆಸರಿನಲ್ಲಿ ದಾವಣಗೆರೆಯ ವಿವಿಧ ಬೀಜದ ಡೀಲರ್ಸ್ಗಳಿಂದ ಮೊದ ಮೊದಲು ವಿಶ್ವಾಸ ಗಳಿಸಿಕೊಂಡು ಮುಂಗಡ ಹಣ ಹಾಕಿ ಬಿತ್ತನೆ ಬೀಗಳನ್ನು ತರಿಸಿಕೊಳ್ಳುತ್ತಿದ್ದ. ಇವರ ವ್ಯವಹಾರಗಳನ್ನು ನಂಬಿದ ಬೀಜ ವಿತರಕರ ಜೊತೆ ಆರಂಭದಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಲ್ಲಿ ಬಾಂಧವ್ಯ ವೃದ್ಧಿಸಿಕೊಂಡರು.
ಬಿತ್ತನೆ ಬೀಜಗಳ ಲಾಟ್ಗಳನ್ನು ರುದ್ರೇಶ್ ಎಂಬ ಅಮಾಯಕ ವ್ಯಕ್ತಿಯ ಹೆಸರಿನಲ್ಲಿ ಆಮದು ಮಾಡಿಕೊಂಡು ಚಕ್ ಮೂಲಕ ವ್ಯವಹರಿಸಿದ ಕುಮಾರ್ಗೌಡ ಎಂಬ ಹೆಸರಿನ ವ್ಯಕ್ತಿ ಕಳೆದ ಒಂದು ವಾರದಿಂದ ಪರಾರಿಯಾಗಿದ್ದಾನೆ.
ಕುಮಾರ್ಗೌಡ ಎಂಬ ವ್ಯಕ್ತಿ ರಾಜ್ಯದ ಮಂಡ್ಯ, ಹಾವೇರಿ, ತುಮಕೂರು ಸೇರಿದಂತೆ ಹೊರ ರಾಜ್ಯಗಳಲ್ಲಿ ನಾಲ್ಕಾರು ನಕಲಿ ಆಧಾರ್ ಸೃಷ್ಟಿಸಿಕೊಂಡು ಬೇರೆ ಬೇರೆ ಹೆಸರುಗಳ ಮೂಲಕ ಆಮಾಯಕರನ್ನು ಬಳಸಿಕೊಂಡು ಇದೇ ರೀತಿ ಕೋಟಿ ಕೋಟಿ ಪಂಗನಾಮ ಹಾಕಿ ನಾಪತ್ತೆಯಾಗಿದ್ದಾನೆ.
ಅಮಾಯಕರಾದ ರುದ್ರೇಶ್ ಎಂಬ ವ್ಯಕ್ತಿಯನ್ನು ರೈತ ಆಗ್ರೋದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸಕ್ಕೆ ಇರಿಸಿಕೊಂಡು ಅದೇ ವ್ಯಕ್ತಿಯ ಆಧಾರ್ ಕಾರ್ಡ್ ಪಡೆದು ಜಿಎಸ್ಟಿ ನಂಬರ್ ಪಡೆದು, ಖಾಲಿ ಚಕ್ಗಳಿಗೆ ಸಹಿ ಮಾಡಿಸಿಕೊಂಡು ಮೆಕ್ಕೆಜೋಳ, ತೊಗರಿ, ಅವರೆ, ಕುಂಬಳ, ಈರುಳ್ಳಿ ಸೇರಿದಂತೆ ರೈತರು ಬಿತ್ತನೆ ಮಾಡುವ ಎಲ್ಲ ಬೀಜಗಳ ಡೀಲರ್ಸ್ಗಳಿಂದ ಒಮ್ಮೆಲೆ ಕೋಟಿ ಕೋಟಿ ವ್ಯವಹಾರವನ್ನು ರುದ್ರೇಶ್ ಹೆಸರಿನಲ್ಲಿ ಚಕ್ಮೂಲಕ ವ್ಯವಹರಿಸಿ ಕೋಟಿ ಕೋಟಿ ರೂಪಾಯಿಗಳನ್ನು ನುಂಗಿ ಪರಾರಿಯಾಗಿದ್ದಾನೆ.
ಬುಧವಾರ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲು ಸಾಲಕೊಟ್ಟಿದ್ದ ದಾವಣಗೆರೆಯ 12ಕ್ಕೂ ಹೆಚ್ಚು ಬೀಜ ಮತ್ತು ಗೊಬ್ಬರ ವಿತರಕರು ಮತ್ತು ಅಧಿಕೃತ ಡೀಲರ್ಸ್ಗಳು ರುದ್ರೇಶ್ ಎಂಬ ವ್ಯಕ್ತಿಯ ವಿರುದ್ಧ ಜಗಳೂರು ಪಟ್ಟಣದಲ್ಲಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಎಸ್.ಡಿ.ಸಾಗರ್ ನೇತೃತ್ವದಲ್ಲಿ ಪೊಲೀಸರು ರೈತ ಆಗ್ರೋ ಮುಟ್ಟುಗೋಲು ಹಾಕಿಕೊಂಡು ಸಾಲ ಕೊಟ್ಟ ಡೀಲರ್ಸ್ಗಳಿಗೆ ಇದ್ದ ಬದ್ದ ಬಿತ್ತನೆ ಬೀಜಗಳನ್ನು ಅರ್ಧದಷ್ಟು ವಾಪಾಸ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರು.
ಇನ್ಸ್ಪೆಕ್ಟರ್ ಡಿ.ಶ್ರೀನಿವಾಸ್ರಾವ್ ಮಾರ್ಗದರ್ಶನದಂತೆ ವಿಡಿಯೋ ಶೂಟ್ ಮಾಡಿಸಿ ಸಂಬಂಧ ಪಟ್ಟ ಡೀಲರ್ಸ್ಗಳಿಗೆ ಇನ್ವಾಯ್ಸ್ನಂತೆ ಲೀಸ್ಟ್ ಮತ್ತು ದಾಖಲೆಗಳ ಅನುಸಾರ ಪಿಎಸ್ಐ ಡಿ.ಎಸ್.ಸಾಗರ್ ಮತ್ತು ಪೊಲೀಸರು ಬುಧವಾರ ತಡರಾತ್ರಿಯವರೆಗೂ ಬಿತ್ತನೆ ಬೀಜದ ಮಾಲನ್ನು ಅಧಿಕೃತ ವಿತರಕರಿಗೆ ಹಿಂದುರಿಗಿಸಿದರು.
ಮೋಸ ಹೋದ ವಿತರಕರು: ದಾವಣಗೆರೆ ವೆಂಕಟೇಶ್ವರ ಆಗ್ರೋ ಏಜೆನ್ಸಿ-1.20 ಕೋಟಿ
ನಂದಿ ಆಗ್ರೋ ಸೀಡ್ಸ್ ಕಾರ್ಪೊರೇಷನ್-33 ಲಕ್ಷ
ಯುಎಸ್ ಆಗ್ರೋ ಡಿಸ್ಟ್ರೀಬ್ಯೂಟರ್ಸ್-11.24 ಲಕ್ಷ
ಕಲ್ಲೇಶ್ವರ ಆಗ್ರೋ-3.30 ಲಕ್ಷ
ಬೆಂಗಳೂರಿನ ಯುನೆಸೆಮ್ ಆಗ್ರೋ-20.64 ಲಕ್ಷ
ಇಂಡಿಯಾ ಪೆಸ್ಟಿಸೈಡ್ಸ್ ಬೆಂಗಳೂರು-12.50 ಲಕ್ಷ
ಹುಬ್ಬಳ್ಳಿಯ ಸಿಂಜೆಂಟಾ ಆಗ್ರೋ ಏಜೆನ್ಸಿ 9.81 ಲಕ್ಷ
ನಂದಿ ಆಗ್ರೋ ಕೆಮಿಕಲ್ಸ್-3.75 ಲಕ್ಷ
ರಾಘವೇಂದ್ರ ಸೈಂಟಿಫಿಕ್ ಆಗ್ರ್ಯಾನಿಕ್ಸ್-4.85 ಲಕ್ಷ
ನೇತ್ರಾ ಕ್ರಾಪ್ ಸೈನ್ಸ್-7 ಲಕ್ಷ
ಶ್ರೀ ಗುರುಬಸವನ ಏಜೆನ್ಸಿ-11.08 ಲಕ್ಷ
ಬಸವೇಶ್ವರ ಆಗ್ರೋ-5 ಲಕ್ಷ
ಅಕ್ಷಯ ಆಗ್ರೋ ಏಜೆನ್ಸಿ-51 ಲಕ್ಷ