ದಾವಣಗೆರೆ.ಮೇ.20: ರಾಜ್ಯ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ತೀವ್ರ ಬರದಲ್ಲಿ ನರಳುತ್ತಿದ್ದು, ಸರ್ಕಾರ ಯುದ್ಧೋಪಾದಿಯಲ್ಲಿ ಬರ ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ನಂತರ ಮೆರವಣಿಗೆ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.ಈ ವೇಳೆ ಸಂಘಟನೆಯ ಮಧು ತೊಗಲೇರಿ ಮಾತನಾಡಿ ರಾಜ್ಯದ 223 ತಾಲೂಕುಗಳಲ್ಲಿ ಬರವಿದ್ದು ಜನ-ಜಾನುವಾರುಗಳಿಗೆ ನೀರು, ಮೇವುಗಾಗಿ ಹಾಹಾಕಾರ ಶುರುವಾಗಿದೆ. ಪತ್ರಿಕೆಗಳ ವರದಿಯ ಪ್ರಕಾರ 29 ಜಿಲ್ಲೆಗಳ 149 ತಾಲೂಕುಗಳ 1,920 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರಿಲ್ಲ. ಜಿಲ್ಲಾಡಳಿತದಿಂದ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.ಮೇವಿನ ಲಭ್ಯತೆಯ ಕೊರತೆಯ ಜೊತೆಗೆ ವಿಪರೀತ ಬೆಲೆಯಾಗುತ್ತಿದೆ. ಇದರಿಂದ ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿದೆ. ಉದ್ಯೋಗವಿಲ್ಲದೆ ಊರೂರು ಅಲೆಯುವ, ಗುಳೆ ಹೋಗುವ ಪ್ರಮೇಯ ಬಂದಿದೆ. ನರೇಗಾ ಯೋಜನೆಯಡಿ ಉದ್ಯೋಗ ಒದಗಿಸುವುದರಲ್ಲಿ ಮತ್ತು ಹಣ ಬಿಡುಗಡೆ ಮಾಡುವುದರಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ.ಒಂದು ಕಡೆ, ನೀರು, ಮೇವಿನ ಸಮಸ್ಯೆಯಾದರೆ, ಇನ್ನೊಂದು ಕಡೆ ಕೊಳವೆ ಬಾವಿಗಳು ಬತ್ತಿಹೋಗಿರುವುದರಿಂದ ರೈತರು ತಮ್ಮ ತೋಟದ ಬೆಳೆಗಳನ್ನು ಕಾಪಾಡಿಕೊಳ್ಳುವುದರಲ್ಲಿ ಹೈರಾಣಾಗಿದ್ದಾರೆ.
ಬರಗಾಲದಲ್ಲಿರುವಾಗ ಮೈಕ್ರೊ ಫೈನಾನ್ಸ್ನವರು ಸಾಲ ವಸೂಲಾತಿಗೆ ನಿಂತಿರುವುದು ಅತ್ಯಂತ ಖಂಡನೀಯ.ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಹಣದ ಬಿಡುಗಡೆ ವಿಷಯದಲ್ಲಿ ಪರಸ್ಪರ ದೋಷಾರೋಪ ಮಾಡಿಕೊಂಡು ಚುನಾವಣಾ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇವರ ಮಧ್ಯೆ ರೈತರು ಸತ್ತು ಸುಣ್ಣವಾಗುತ್ತಿದ್ದಾರೆ. ಇದಂತೂ ಅಕ್ಷಮ್ಯ ಮತ್ತು ಅಮಾನವೀಯ. ಬರದಿಂದ ಮುಖ್ಯವಾಗಿ ರೈತ ಸಮುದಾಯವನ್ನು ಕಾಪಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಪ್ರಮುಖವಾಗಿ ರೈತರ ಎಲ್ಲಾ ಬೆಳೆಗಳ ನಷ್ಟಕ್ಕೆ ಸಮರ್ಪಕವಾದ ಪರಿಹಾರವನ್ನು ನೀಡಬೇಕು.ಎಲ್ಲಾ ಬ್ಯಾಂಕುಗಳಲ್ಲಿರುವ ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಸಮರೋಪಾದಿಯಲ್ಲಿ ಎಲ್ಲಾ ರೀತಿಯ ಬರ ಪರಿಹಾರದ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು.ನರೆಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಮತ್ತು ಕೃಷಿ ಕಾರ್ಮಿಕರಿಗೆ ಉದ್ಯೋಗವನ್ನು ಖಚಿತಪಡಿಸಬೇಕು.ಕೊಳವೆ ಬಾವಿಯ ವೆಚ್ಚವನ್ನು ವಿಪರೀತವಾಗಿ ಏರಿಸಿರುವುದನ್ನು ತಡೆಯಬೇಕು. ಅಪಮಾನವಾಗುವ ರೀತಿಯಲ್ಲಿ ಸಾಲ ವಸೂಲಿ ಮಾಡುವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೂ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ಖರೀದಿ ಮಾಡಿದ ಬೆಳೆಯ ಹಣವನ್ನು ಕೂಡಲೇ ಪಾವತಿಸಬೇಕೆಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.ಈ ವೇಳೆ ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು.