
ಬೆಂಗಳೂರು; ಡ್ರಗ್ಸ್ ಕೇಸ್‌ನಲ್ಲಿ ಸಿಲುಕಿಕೊಂಡಿದ್ದ ನಟಿ ರಾಗಿಣಿಗೆ ಈಗ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ರಾಗಿಣಿ ನಿರಪರಾಧಿ ಎಂದು ತೀರ್ಪು ನೀಡಿದೆ. ಇದರಿಂದ ರಾಗಿಣಿಗೆ ಒಂದಿಷ್ಟು ರಿಲ್ಯಾಕ್ಸ್ ಆಗಿದೆ. ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ರದ್ದಾಗಿದ್ದು, ನಾಲ್ಕು ವರ್ಷಗಳ ಕಾನೂನು ಹೋರಾಟದ ಬಳಿಕ ಈ ತೀರ್ಪು ರಾಗಿಣಿಗೆ ದೊಡ್ಡ ನೆಮ್ಮದಿ ನೀಡಿದೆ. ಅವರ ವೃತ್ತಿ ಜೀವನದ ಮೇಲೆ ಈ ಪ್ರಕರಣ ಸಾಕಷ್ಟು ಪರಿಣಾಮ ಬೀರಿದ್ದು, ಕೇಸ್‌ನಲ್ಲಿ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಇನ್ನು ರಾಗಿಣಿ ‘ತುಪ್ಪ ಬೇಕಾ ತುಪ್ಪ..’ ಹಾಡಿಗೆ ಡ್ಯಾನ್ಸ್ ಮಾಡಿ ತುಪ್ಪದ ಹುಡುಗಿ ಎಂದೇ ಫೇಮಸ್ ಆಗಿದ್ದರು.
2020ರ ಸೆಪ್ಟೆಂಬರ್‌ನಲ್ಲಿ ಬಂಧನ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್‌ನಲ್ಲಿ ರಾಗಿಣಿ ಅವರನ್ನು ಬಂಧಿಸಲಾಗಿತ್ತು. ಅವರು ಹಲವು ದಿನ ಜೈಲಿನಲ್ಲೂ ಇದ್ದರು. ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ರಾಗಿಣಿ ಮೇಲೆ ಇತ್ತು. ಪಾರ್ಟಿ ಆಯೋಜಿಸಿ ಡ್ರಗ್ಸ್ ಬಳಕೆಗೂ ಅವರು ಅವಕಾಶ ಮಾಡಿಕೊಟ್ಟಿದ್ದರು ಎನ್ನಲಾಗಿತ್ತು.
ಈ ಕಾರಣಕ್ಕೆ ಎನ್‌ಡಿಪಿಎಸ್ ಕ್ಟ್ ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆಗ ಕೇವಲ ಸಹ ಆರೋಪಿಗಳ ಹೇಳಿಕೆ ಆಧರಿಸಿ ರಾಗಿಣಿ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ, ಯಾವುದೇ ಸಾಕ್ಷ್ಯಗಳನ್ನು ಒದಗಿಸಿಲ್ಲ ಎಂದು ರಾಗಿಣಿ ಪರ ವಕೀಲ ಎ. ಮೊಹಮ್ಮದ್ ತಾಹಿರ್ ವಾದ ಮಾಡಿದ್ದರು. ಈ ವಾದವನ್ನು ಪರಿಣಿಸಿದ ನ್ಯಾಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ. ಎ4 ಪ್ರಶಾಂತ್ ರಂಕಾ ವಿರುದ್ಧದ ಪ್ರಕರಣ ಕೂಡ ರದ್ದಾಗಿದೆ.



