ಶಿವಮೊಗ್ಗ,ಜೂ.19: ನಗರದ ವಿವಿಧ ಯೋಗ ಸಂಸ್ಥೆಗಳ ಆಶ್ರಯದಲ್ಲಿ ಜೂ.21ರಂದು ಶುಭಮಂಗಳ ಸಮುದಾಯ ಭವನದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಣಾದ ಯೋಗ ಮತ್ತು ರಿಸರ್ಚ್ ಪೌಂಡೇಷನ್‍ನ ಅನಿಲ್‍ಕುಮಾರ್ ಎಚ್.ಶೆಟ್ಟರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ಜೂ.21ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, “ ದಿ ಆರ್ಟ್ ಆಫ್ ಲೀವಿಂಗ್, ಸುಮೇರು ಯೋಗ ಕೇಂದ್ರ, ಅಮೃತ ಯೋಗ ಕೇಂದ್ರ, ಎಸ್.ಪಿ.ವೈ.ಎಸ್.ಎಸ್.(ರಿ.) ನಿಹಾರಿಕಾ ಯೋಗ ಕೇಂದ್ರ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಈ ವರ್ಷದ ಧ್ಯೇಯ ವಾಕ್ಯ “ ಮಹಿಳಾ ಸಬಲೀಕರಣಕ್ಕಾಗಿ ಯೋಗ ಕುರಿತು 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರ ಬೆಳಿಗ್ಗೆ 5.30ರಿಂದ 8.30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಯೋಗ ದಿನಾಚರಣೆಯಲ್ಲಿ ಸಾಮೂಹಿಕ ಯೋಗಾಭ್ಯಾಸ, ಸೂರ್ಯ ನಮಸ್ಕಾರ, ಆಸನ, ಪ್ರಾಣಾಯಾಮ, ಧ್ಯಾನ ಮತ್ತು ಉಪನ್ಯಾಸ ಗುರುವಂದನಾ ಕಾರ್ಯಕ್ರಮ ಜರುಗಲಿದೆ ಎಂದರು.
ದಿ ಆರ್ಟ್ ಆಫ್ ಲಿವಿಂಗ್‍ನ ಶಬರೀಶ್ ಕಣ್ಣನ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನಗರದ ಖ್ಯಾತ ವೈದ್ಯ ಡಾ. ಬಿ.ಪ್ರೀತಮ್ ಆಗಮಿಸಿ ಡಯಾಬಿಟಿಸ್ ರಿವರ್ಸಲ್ ಮಾಡುವ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಎಲ್ಲಾ ಯೋಗ ಕೇಂದ್ರಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ದಿನಾಚರಣೆಯನ್ನು ಆಚರಿಸಲಾಗುವುದು ಎಂದರು.
ಇಂದು ಬೆಳಿಗ್ಗೆ ಯೋಗದ ಬಗ್ಗೆ ಜಾಗೃತಿ ಮೂಡಿಸಲು ಯೋಗ ನಡುಗೆಯನ್ನು ಹಮ್ಮಿಕೊಂಡಿದ್ದು,
ಸುಮಾರು 600ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಕರಪತ್ರ ನೀಡುವ ಮೂಲಕ ದಿನಾಚರಣೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಯಿತು ಎಂದ ಅವರು, ಅಂದು ಯೋಗಾಸಕ್ತರು ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಬಿಳಿ ಉಡುಪಿ ಧರಿಸಿ, ನೀರಿನ ಬಾಟಲ್, ಯೋಗ ಮ್ಯಾಟ್ ತರಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ತರಾದ ಸುಧಾ ಮಂಜುನಾಥ್, ಮಮತ ಚಂದ್ರಶೇಖರ್, ಶೈಲಜಾ, ಬೆಲಗೂರು ಮಂಜುನಾಥ್, ಶಿವಶಂಕರ್ ಉಪಸ್ಥಿತರಿದ್ದರು.