ದಾವಣಗೆರೆ : ಹರಿಹರ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಇಲ್ಲಿನ ನಗರಸಭೆಯಲ್ಲಿ
ಕಾಮಗಾರಿ ನಡೆಸದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವ ಹಿನ್ನಲೆಯಲ್ಲಿ ಮೂವರು ಎಂಜಿನಿಯರ್ ಸೇರಿದಂತೆ ಏಳು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಈ ಪ್ರಕರಣದಲ್ಲಿ 1 ಕೋಟಿ ಅವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರಸಭೆಯಲ್ಲಿ ಈ ಹಿಂದೆ ಸಹಾಯಕ ಎಂಜಿನಿಯರ್ ಆಗಿದ್ದ ಅಬ್ದುಲ್ ಹಮೀದ್, ಕಿರಿಯ ಎಂಜಿನಿಯರ್ ನೌಷಾದ್ ಎಚ್.ಟಿ. (ನಿವೃತ್ತ), ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿರಾದಾರ್ ಎಸ್.ಎಸ್. (ನಿವೃತ್ತ), ಗುತ್ತಿಗೆದಾರರಾದ ಮಹೇಶ್ ಜಿ.ಬಿ., ರಾಘವೇಂದ್ರ ಎಚ್., ಥರ್ಡ್ ಪಾರ್ಟಿ ಎಕ್ಸ್‌ಪರ್ಟ್ ಆದ ದಾವಣಗೆರೆಯ ವಿಶಾಲ್ ಟೆಕ್ನೊಕಾನ್ ಸಂಸ್ಥೆಯ ದೀಪಕ್ ಎಸ್. ಮತ್ತು ಕಲಬುರಗಿಯ ಬಾಲಾಜಿ ಟೆಕ್ನಿಕಲ್ ಕನ್ಸಲ್‌ಟೆಂಟ್ಸ್ ಸಂಸ್ಥೆಯ ವೇದಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ

2020ರ ಮೇ 20ರಿಂದ 2021ರ ನವೆಂಬರ್ 4ರ ಅವಧಿಯಲ್ಲಿ ನಗರಸಭೆಯಲ್ಲಿ ನಡೆಸಿದ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದ ಆರೋಪ ಇವರ ಮೇಲಿದೆ.

ಆರೋಪಿಗಳು ನಗರದ ಜೆ.ಸಿ.ಬಡಾವಣೆ 1ನೇ ಕ್ರಾಸ್‌ನ ಕನ್ಸರ್‌ವೆನ್ಸಿಯಲ್ಲಿ 58 ಮೀ. ಸಿ.ಸಿ ಚರಂಡಿ ನಿರ್ಮಿಸಿ 98 ಮೀ. ಕಾಮಗಾರಿ ನಡೆಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದರು. ವಾರ್ಡ್ ನಂ.1, 12, 13, 14, 19, 22, 23, 24, 25, 27, 28, 29, ಎಪಿಎಂಸಿ ಆವರಣದ ಹಮಾಲರ ಬಡಾವಣೆ, ಜೆ.ಸಿ.ಬಡಾವಣೆ 2ನೇ ಮೇನ್, ಭರಂಪುರ ಸೇರಿದಂತೆ 19 ಕಡೆ ಕಿರು ನೀರು ಸರಬರಾಜು ಟ್ಯಾಂಕ್‌ ನಿರ್ಮಾಣ ಹಾಗೂ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಎಲ್ಲಾ ಕಾಮಗಾರಿಗಳಿಂದಾಗಿ ಸರ್ಕಾರಕ್ಕೆ ₹ 96.51 ಲಕ್ಷ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಅವ್ಯವಹಾರ ಸಂಬಂಧ ಗುತ್ತಿಗೆದಾರ ಮೊಹ್ಮದ್ ಮಜಹರ್ ಅವರು ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ದೂರಿನ ಅನ್ವಯ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿತ್ತು. ಇದನ್ನು ಆಧರಿಸಿ ದೂರು ನೀಡಲು ಪೌರಾಯುಕ್ತರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು.

Share.
Leave A Reply

Exit mobile version