ದಾವಣಗೆರೆ : ಆ 1 ಮಾತು. ಹಿಂದೂಹುಲಿ ಖ್ಯಾತಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಿದ ಆ ಒಂದೇ ಒಂದು ಮಾತು, ಇದೀಗ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿ ಮಾಡಿದೆ.
ಆ 1 ಮಾತು ಬಿಎಸ್ವೈ ಮತ್ತು ಬಿವೈ ವಿಜಯೇಂದ್ರ ಅವರ ಅಸಲಿ ಆಟಕ್ಕೆ ಫುಲ್ಸ್ಟಾಪ್ ಇಡುತ್ತಾ ಅನ್ನೋ ಅನುಮಾನ ಹುಟ್ಟುಹಾಕಿದೆ. ಹಾಗಾದ್ರೆ ದಿಲ್ಲಿಯಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೈಕಮಾಂಡ್ಗೆ ಬಿಗ್ ಮೆಸೇಜ್ ಪಾಸ್ ಮಾಡಿದ್ರಾ.? ಲೋಕಸಭಾ ಎಲೆಕ್ಷನ್ ನಂತರ ರಾಜ್ಯ BJPಗೆ ಮೇಜರ್ ಸರ್ಜರಿ ನಡೆದು ಹೋಗುತ್ತಾ.?
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಎಸ್ವೈ ಕುಟುಂಬಕ್ಕೂ ಇರೋ ಮನಸ್ತಾಪ ನಿಮಗೆಲ್ಲಾ ಗೊತ್ತೇ ಇದೆ. ಪರಿಸ್ಥಿತಿ ಹೀಗಿರೋವಾಗ್ಲೇ ಇವತ್ತು ಮತ್ತೆ ಅಪ್ಪ ಮಕ್ಕಳ ಮೇಲೆ ಯತ್ನಾಳ್ ಕಿಡಿಕಾರಿದ್ದಾರೆ. ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಕೆ.ಎಸ್. ಈಶ್ವರಪ್ಪ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ಕರೆದಿದ್ದಾರೆ. ಈಶ್ವರಪ್ಪ ಅವರ ದೆಹಲಿ ಪ್ರವಾಸ ಯಶಸ್ವಿಯಾಗುತ್ತೆ ಅನ್ನೋ ವಿಶ್ವಾಸ ನನಗೆ ಇದೆ. ಈ ಪ್ರವಾಸ ಪಕ್ಷದ ಪರವಾಗಿ ಇರಲಿ ಮತ್ತು ವಂಶಪಾರಂಪರ್ಯ ರಾಜಕೀಯ ಅಂತ್ಯವಾಗಲಿ ಅಂತೇಳಿ ಯತ್ನಾಳ್ ಹೇಳಿದ್ದಾರೆ. ಆ ಮೂಲಕ ಪರೋಕ್ಷವಾಗಿ ಬಿಎಸ್ವೈ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಅಜೆಸ್ಟ್ಮೆಂಟ್ ರಾಜಕೀಯ ವನ್ನು ಒಪ್ಪಲ್ಲ ಎಂದು ಮೋದಿ ಹೇಳಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಯಾರನ್ನು ಇಳಿಸಬೇಕು, ಏರಿಸಬೇಕು ಮತ್ತು ಮೂಲೆಗೊತ್ತಬೇಕು ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರು ಬಯಸುವ ನಿರೀಕ್ಷೆ ಈಡೇರಿಕೆ ಆಗುತ್ತೆ ಅನ್ನೋ ವಿಶ್ವಾಸ ಇದೆ ಅಂತೇಳಿ ಯತ್ನಾಳ್ ಹೇಳಿದ್ದಾರೆ.
ಹಿಂದೂ ಸಮಾಜದ ಜಾತಿಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ. ಸಿದ್ಧರಾಮಯ್ಯ ಹಿಂದುತ್ವ ಮತ್ತು ಹಿಂದೂ ವಿಚಾರಧಾರೆಗೆ ವಿರೋಧ ಇದ್ದವರು. ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯನವರ ಪತನ ಖಚಿತ. ಸಿಎಂ ಹತಾಶರಾಗಿ ಚಾಮ ರಾಜನಗರ ಮೈಸೂರಿನಲ್ಲಿ ಮಾತನಾಡುತ್ತಿದ್ದಾರೆ. ಎರಡು ಲೋಕಸಭಾ ಕ್ಷೇತ್ರ ಸೋತರೆ, ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಇಳಿಸುತ್ತಾರೆ ಎಂಬ ಭಯವಿದೆ. ಅನುಕಂಪದ ಆಧಾರದಲ್ಲಿ ಮತ ತೆಗೆದುಕೊಳ್ಳುವ ಪ್ರಯತ್ನ ಸಿದ್ಧ ರಾಮಯ್ಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸಾಮಾನ್ಯ ಕಾರ್ಯಕರ್ತ ಎಲ್ಲಾದರೂ ರಾಜ್ಯದಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದಿದ್ದಾನೆಯೇ? ಕೇವಲ ಮಂತ್ರಿ ಮಕ್ಕಳೇ ಸ್ಪರ್ಧೆ ಮಾಡಿದ್ದಾರೆ. ಹಣ ಇದ್ದರೆ ಜನ ಮತ ಹಾಕುತ್ತಾರೆ ಎಂಬ ಮೂರ್ಖ ದ್ವಂದ್ವ ವಿಚಾರದಲ್ಲಿ ಕಾಂಗ್ರೆಸ್ ಇದೆ. ಒಬ್ಬ ಮಂತ್ರಿಯೂ ಕಾಂಗ್ರೆಸ್ಗಾಗಿ ತ್ಯಾಗವನ್ನು ಮಾಡಿಲ್ಲ ಎಂದು ಅವರು ಆರೋಪಿಸಿದರು. ಬೆಂಗಳೂರು ಗ್ರಾಮಾಂತರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಅದು ದೇಶದ ದುರ್ದೈವ. ಡಾ.ಮಂಜುನಾಥ್ ಶ್ರೇಷ್ಠ ಮತ್ತು ಮನುಷ್ಯತ್ವ ಇರುವ ವೈದ್ಯ. ಅವರು ಸೋತರೆ ಅದು ಕರ್ನಾಟಕದ ದುರಂತ. ಭ್ರಷ್ಟರು ಗೂಂಡಾಗಳು ಇದೇ ಚುನಾವಣೆಯಲ್ಲಿ ಕೊನೆಯಾಗಬೇಕು ಅಂತೇಳಿ ಡಿಕೆ ಸಹೋದರರ ಬಗ್ಗೆ ಯತ್ನಾಳ್ ಕಿಡಿಕಾರಿದ್ದಾರೆ.
ಅದೇನೇ ಇರ್ಲಿ, ಯತ್ನಾಳ್ ಅವರಿಗೆ ರಾಜ್ಯ ಬಿಜೆಪಿಯಲ್ಲಿರೋ ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಈಗ ಕಾಣ್ತಾಯಿಲ್ವಾ.? ತಮ್ಮ ಬಿಜೆಪಿಗರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿರೋವಾಗ ಕಾಂಗ್ರೆಸ್ ನಾಯಕರ ತಟ್ಟೆಯಲ್ಲಿರೋ ನೋಣದ ಬಗ್ಗೆ ವಾಗ್ದಾಳಿ ನಡೆಸಿದಂತಿದೆ. ಅದೇನೇ ಇದ್ರೂ ಯತ್ನಾಳ್ ಅವರು ಸ್ವಪಕ್ಷ ವಿಪಕ್ಷ ಎಲ್ರನ್ನೂ ತರಾಟೆಗೆ ತಗೊಂಡ್ರೂ ಇವರ ಮಾತುಗಳಿಗೆ ಬಿಜೆಪಿಯಲ್ಲಿ ಬೆಲೆ ಸಿಕ್ತಾಯಿಲ್ಲ ಅನ್ನೋದು ವಿಪರ್ಯಾಸ.