ದಾವಣಗೆರೆ: ಭಾರತೀಯ ನ್ಯಾಯ ಸಂಹಿತೆ ಸೇರಿ 3 ಹೊಸ ಅಪರಾಧ ಕಾನೂನುಗಳ ಬಗ್ಗೆ ಕಳೆದೊಂದು ತಿಂಗಳಿನಿಂದಲೂ ನಗರ, ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಕಾರ್ಯಾಗಾರ, ಸಂವಾದದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಎಸ್ಪಿ ಉಮಾಪ್ರಶಾಂತ್ ಹೇಳಿದರು.
ಭಾರತೀಯ ನ್ಯಾಯ ಸಂಹಿತಾ ಅಥವಾ ಬಿಎನ್ಎಸ್, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಅಥವಾ ಬಿಎನ್ಎಸ್ಎಸ್ (BNSS), ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಅಥವಾ ಬಿಎಸ್ಎ(BSA) ಹೊಸದಾಗಿ ಜಾರಿಗೊಂಡ ಕ್ರಿಮಿನಲ್ ಕಾನೂನುಗಳ ಬಗ್ಗೆ ತಿಳಿಸಲಾಯಿತು.
ಅಲ್ಲದೇ, ಭಾರತೀಯ ದಂಡ ಸಂಹಿತೆ ಅಥವಾ ಐಪಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಸಿಆರ್ಪಿಸಿ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ಸ್ಥಾನ ತುಂಬಲಿವೆ. ಬಿಎನ್ಎಸ್ 163 ವರ್ಷ ಹಳೆಯ ಐಪಿಸಿಯ ಜಾಗ ತುಂಬಲಿದೆ. ಇದು ಅಪರಾಧ ಕಾನೂನಿನಲ್ಲಿ ಬಹಳಷ್ಟು ಬದಲಾವಣೆ ತರಲಿದೆ. ಬಿಎನ್ಎಸ್ ಸೆಕ್ಷನ್ 4 ರ ಪ್ರಕಾರ ಶಿಕ್ಷೆ ರೂಪವಾಗಿ ಸಮುದಾಯ ಸೇವೆಯನ್ನು ಪರಿಚಯಿಸಲಾಗುತ್ತಿದೆ.
ಲೈಂಗಿಕ ಅಪರಾಧ ಎಸಗಿದವರ ವಿರುದ್ಧ ಕಠಿಣ ಶಿಕ್ಷೆಯನ್ನು ಹೊಸ ಕಾನೂನು ವಿಧಿಸುವುದಕ್ಕೆ ಅವಕಾಶ ನೀಡಿದೆ. ಮದುವೆ ಉದ್ದೇಶವಿಲ್ಲದೇ ಲೈಂಗಿಕ ಆಸೆ ಪೂರೈಸಲು ಮೋಸ ಮಾಡಿ, ವಂಚಿಸಿ ಲೈಂಗಿಕ ದೌರ್ಜನ್ಯವೆಸಗಿದರೆ ಅಂತಹ ಅಪರಾಧಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಉದ್ಯೋಗ, ಬಡ್ತಿ ಅಥವಾ ಮದುವೆಗೆ ಸಂಬಂಧಿಸಿದ ಸುಳ್ಳು ಭರವಸೆಗಳನ್ನು ಒಬ್ಬರ ಗುರುತನ್ನು ಮರೆಮಾಚಿ ವಂಚಿಸಿದರೆ ಅದಕ್ಕೂ ಹೊಸ ಕಾನೂನು ಶಿಕ್ಷೆ ವಿಧಿಸುವುದನ್ನು ಉಲ್ಲೇಖಿಸಿದೆ.
ಇದು ಕಾನೂನುಬಾಹಿರ ಚಟುವಟಿಕೆಗಳ ವಿಶಾಲ ವ್ಯಾಪ್ತಿ ಒಳಗೊಂಡಿದೆ. ಕಾನೂನುಬಾಹಿರ ವಿಧಾನಗಳ ಮೂಲಕ ಕಾರ್ಯಗತಗೊಳಿಸಲಾದ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡುವುದಕ್ಕೆ ಅವಕಾಶ ಇದೆ. ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಕೃತ್ಯಗಳಿಗೆ, ಜನರಲ್ಲಿ ಭಯೋತ್ಪಾದನೆ ಹೊಡೆದೋಡಿಸುವ ಉದ್ದೇಶದಿಂದ ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆ ಹಾಕುವ ಯಾವುದೇ ಚಟುವಟಿಕೆ ಎಂದು ಭಯೋತ್ಪಾದಕ ಕೃತ್ಯವನ್ನು ಬಿಎನ್ಎಸ್ ವ್ಯಾಖ್ಯಾನಿಸುತ್ತದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಈವರೆಗೆ ಚಾಲ್ತಿಯಲ್ಲಿದ್ದ ಹಳೆಯ 1973ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ಪಿಸಿ) ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಜಾರಿಗೆ ಬರುತ್ತಿದೆ. ಇದರಲ್ಲಿ, ವಿಚಾರಣಾಧೀನ ಕೈದಿಗಳಿಗೆ ಅಂದರೆ, ಜೀವಾವಧಿ ಶಿಕ್ಷೆ ಅಥವಾ ಬಹು ಆರೋಪ ಹೊಂದಿರುವ ಪ್ರಕರಣ ಹೊರತುಪಡಿಸಿ, ಮೊದಲ ಬಾರಿಗೆ ಸೆರೆವಾಸ ಅನುಭವಿಸುತ್ತಿರುವ ಅಪರಾಧಿಗಳು ತಮ್ಮ ಗರಿಷ್ಠ ಶಿಕ್ಷೆಯ 3ನೇ ಒಂದು ಭಾಗದಷ್ಟು ಶಿಕ್ಷೆ ಪೂರೈಸಿದ ನಂತರ ಜಾಮೀನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಆ ಮೂಲಕ ಕಡ್ಡಾಯ ಜಾಮೀನು ಪಡೆಯಲು ಮಾನದಂಡ ನಿಗದಿ ಮಾಡಿದೆ.
ಈಗ ಕನಿಷ್ಟ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಿಗೆ ಫೋರೆನ್ಸಿಕ್ ತನಿಖೆ ಕಡ್ಡಾಯವಾಗಿದೆ. ಫೋರೆನ್ಸಿಕ್ ತಜ್ಞರು ಅಪರಾಧದ ಸ್ಥಳಗಳಿಂದ ಸಾಕ್ಷ್ಯ ಸಂಗ್ರಹಿಸುತ್ತಾರೆ, ದಾಖಲಿಸುತ್ತಾರೆ. ಈ ಸಾಕ್ಷ್ಯ ಸಂಗ್ರಹ ಖಚಿತಪಡಿಸಿಕೊಳ್ಳಲಾಗುತ್ತದೆ. ಯಾವುದೇ ಒಂದು ರಾಜ್ಯವು ವಿಧಿವಿಜ್ಞಾನ ಸೌಲಭ್ಯ ಹೊಂದಿಲ್ಲದಿದ್ದರೆ, ಅದು ಇನ್ನೊಂದು ರಾಜ್ಯದಲ್ಲಿ ಸೌಲಭ್ಯ ಬಳಸುತ್ತದೆ.
ಭಾರತೀಯ ಸಾಕ್ಷ್ಯ ಅಧಿನಿಯಮವು ಈವರೆಗ ಚಾಲ್ತಿಯಲ್ಲಿದ್ದ ಭಾರತೀಯ ಸಾಕ್ಷ್ಯ ಕಾಯ್ದೆ ಜಾಗವನ್ನು ಹೊಸ ಅಪರಾಧ ಕಾನೂನು ಆಗಿರುವ ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ) ಭರ್ತಿಮಾಡಲಿದೆ.
ಇದು ಎಲೆಕ್ಟ್ರಾನಿಕ್ಸ್ ಪುರಾವೆಗಳಿಗೆ ಸಂಬಂಧಿಸಿ ನಿರ್ಣಾಯಕ ಅಪ್ಡೇಟ್ಸ್ ಹೊಂದಿದೆ. ಹೊಸ ಕಾನೂನು ಎಲೆಕ್ಟ್ರಾನಿಕ್ ಪುರಾವೆಗಳ ಮೇಲಿನ ನಿಯಮಗಳನ್ನು ಸುವ್ಯವಸ್ಥಿತಗೊಳಿಸುತ್ತದೆ.
ಮೂರೂ ಹೊಸ ಕಾನೂನುಗಳ ಜಾರಿಗಾಗಿ ಕಳೆದ ಒಂದು ತಿಂಗಳಿಂದ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಮಟ್ಟದಲ್ಲಿ, ಉಪ ವಿಭಾಗ, ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಹಾಗೂ ಪೊಲೀಸ್ ಠಾಣಾ ಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿಗೆ ಹೊಸ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು, ಕಾನೂನು ಅಧಿಕಾರಿಗಳ ಸಹಯೋಗದಲ್ಲಿ ಹೊಸ ಕಾನೂನು ಜಾರಿಯ ಬಗ್ಗೆ ಹಲವು ಕಾರ್ಯಾಗಾರ, ತರಬೇತಿ, ಆನ್ ಲೈನ್ ತರಬೇತಿ ಹಮ್ಮಿಕೊಳ್ಳಲಾಗಿತ್ತು ಅಲ್ಲದೇ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹೊಸ ಕಾನೂನುಗಳ ಬಗ್ಗೆ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹಳೆಯ ಭಾರತೀಯ ದಂಡ ಸಂಹಿತೆ ಅಥವಾ ಐಪಿಸಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ಸಿಆರ್ಪಿಸಿ ಮತ್ತು 1872ರ ಭಾರತೀಯ ಸಾಕ್ಷ್ಯ ಕಾಯ್ದೆಯ ನಿಯಮಗಳ ಬದಲಿಗೆ ನೂತನ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಹಾಗೂ ದೈನಂದಿನ ಪ್ರಕರಣಗಳ ದಾಖಲು, ತನಿಖೆ ಹಾಗೂ ಇತರೆ ಕಾರ್ಯಗಳಲ್ಲಿ ಜಾರಿಗೆ, ಅಳವಡಿಕೆಗೆ ಪೂರ್ಣ ಸಿದ್ದತೆ ಮಾಡಿಕೊಂಡಿತ್ತು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಉನ್ನತಿಕರಿಸುವ ಹಿನ್ನೆಲೆಯಲ್ಲಿ ಹಲವು ಸುಧಾರಣೆ ತಂದಿದ್ದು, ಅದರಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಉನ್ನತ ತಾಂತ್ರಿಕತೆ ಬಳಕೆ, ವಿಧಿವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಪೊಲೀಸ್ ಆಡಳಿತ ವ್ಯವಸ್ಥೆಯ ಪೊಲೀಸ್ ಐಟಿ ಉನ್ನತಿಸಕರಿಸಿದ್ದು, ಹೊಸ ಕಾನೂನು ಜಾರಿಗೆ ಅನೂಕೂಲಕ್ಕಾಗಿ ಪೊಲೀಸ್ ಐಟಿ 2.0 ಜಾರಿ ಮಾಡಿದ್ದು, ಸಾರ್ವಜನಿಕರಿಗೆ ನ್ಯಾಯಸಮ್ಮತ, ತುರ್ತು ನ್ಯಾಯ ನೀಡಲು ಅನೂಕೂಲವಾಗುವಂತೆ ಹಲವು ಮಾರ್ಪಾಡು ಮಾಡಿದೆ.
ಸೀನ್ ಆಫ್ ಕ್ರೈಂ(SOCO) ಅಪೀಸರ್ಸ್ಗಳನ್ನು ನೇಮಕ ಮಾಡಿದ್ದು, ಜಿಲ್ಲೆಯಲ್ಲಿ ನುರಿತ ತಜ್ಞ ಸೀನ್ ಆಫ್ ಕ್ರೈಂ ಅಧಿಕಾರಿಗಳು ಪ್ರತಿ ಕ್ರೈಂ ಘಟನಾ ಸ್ಥಳಕ್ಕೆ ತೆರಳಿ ಸುಧಾರಿತ ಉಪಕರಣಗಳ ಮೂಲಕ ಪ್ರತಿ ಪ್ರಕರಣಗಳಲ್ಲೂ ಬಹು ಎಚ್ಚರಿಕೆ ವಹಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ. ಜಿಲ್ಲೆಯಲ್ಲಿ ಸೈಬರ್ ಅಪರಾಧಗಳ ತನಿಖೆಗಾಗಿ ಸಿಇಎನ್ ಪೊಲೀಸ್ ಠಾಣೆ ತೆರೆದಿದ್ದು, ಡಿವೈಎಸ್ಪಿ ದರ್ಜೆ ಅಧಿಕಾರಿಯನ್ನು ಸಿಇಎನ್ ಪೊಲೀಸ್ ಠಾಣೆ ಅಧಿಕಾರಿಯಾಗಿ ನೇಮಿಸಲಾಗಿದೆ. ಸಾರ್ವಜನಿಕ ಸೇವೆಗೆ, ಹೊಸ ಕಾನೂನುಗಳ ಅಳವಡಿಕೆ, ಜಾರಿಯಲ್ಲಿ ಜಿಲ್ಲಾ ಪೊಲೀಸ್ ಸನ್ನದ್ಧವಾಗಿ, ಹೊಸ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯೋನ್ಮುಖವಾಗಿದೆ.