
ದಾವಣಗೆರೆ : ದಾವಣಗೆರೆ ವಿಭಾಗ ಪ್ರಾರಂಭವಾಗಿ ಎರಡನೇ ಆರ್ಥಿಕ ವರ್ಷ ಮುಕ್ತಾಯದ ಶುಭ ಸಂದರ್ಭದಲ್ಲಿ ಎಲ್ಲಾ ವಿಭಾಗಗಳಲ್ಲಿ ಅಪ್ರತಿಮ ಸಾಧನೆ ಮಾಡಿದ ನೌಕರರನ್ನು ಸನ್ಮಾನಿಸಿ ಬೆನ್ನು ತಟ್ಟುವುದರಿಂದ ಪ್ರೋತ್ಸಾಹ ಸಿಕ್ಕದಂತಾಗುತ್ತದೆ ಎಂದು ದಾವಣಗೆರೆ ಅಂಚೆ ಅಧೀಕ್ಷಕ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ರಂಗ್ ಮಲ್ ಮಂದಿರದಲ್ಲಿ ಭಾರತೀಯ ಅಂಚೆ ಇಲಾಖೆ 2023-2024 ನೇ ಸಾಲಿನ ವಿವಿಧ ಅಂಚೆ ಸೇವೆಗಳಲ್ಲಿ ಸಾಧನೆ ಮಾಡಿರುವ ಸಹೋದ್ಯೋಗಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 2023-2024 ನೇ ಸಾಲಿನಲ್ಲಿ ಇಲಾಖೆಯ ವಿವಿಧ ಉತ್ಪನ್ನಗಳಾದ ಸಣ್ಣ ಉಳಿತಾಯ ಖಾತೆಗಳು, ಅಂಚೆ ಜೀವ ವಿಮೆ, ಗ್ರಾಮೀಣ ಅಂಚೆ ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವ್ಯವಹಾರಗಳು, ಸಾಮಾನ್ಯ ನಾಗರೀಕ ಸೇವೆಗಳು, ಆಧಾರ್ ಸೇವೆಗಳು, ಸಾವರಿನ್ ಗೋಲ್ಡ್ ಬಾಂಡ್ ಹಾಗೂ ಇತರ ವಿಭಾಗಗಳಲ್ಲಿ ಹಲವರು ಅಸಾಧಾರಣ ಪ್ರಗತಿ ಸಾಧಿಸಿದ್ದಾರೆ. ಆದ್ದರಿಂದ ಇಂತಹ ಸಾಧನೆ ಇತರರಿಗೂ ಪ್ರೇರೇಪಣೆಯಾಗುವ0ತೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಎಸ್ಪಿ ಗುರುಪ್ರಸಾದ್ ಮಾತನಾಡಿ, ಗ್ರಾಹಕರ ಸ್ನೇಹಿ ಪರಿಸರ ನಿರ್ಮಾಣ ಮಾಡಿ ಹೆಚ್ಚು ಹೆಚ್ಜು ಗ್ರಾಹಕರನ್ನು ಅಂಚೆ ಕಚೇರಿ ಕಡೆಗೆ ಸೆಳೆಯಲು ನಮ್ಮ ಸಿಬ್ಬಂದಿ ಉತ್ತಮ ಗುಣಮಟ್ಟದ ಸೇವೆ ಕೊಡಬೇಕಿದೆ. ಇಲಾಖೆಯ ಮೂಲ ಉದ್ದೇಶ ಇಲಾಖೆಯ ಉತ್ಪನ್ನಗಳು ಗ್ರಾಹಕರ ಮೊದಲ ಆಧ್ಯತೆ ಆಗುವಂತೆ ಮಾಡಲು ಗ್ರಾಹಕರನ್ನು ಅಂಚೆ ಕಚೇರಿಗಳ ಕಡೆಗೆ ಸೆಳೆಯಲು ಈ ಬಹುಮಾನಗಳು ಸಹಕಾರಿಯಾಗಬಲ್ಲವು ಎಂದರು.


ಅಸಾಧಾರಣ ಪ್ರಗತಿ ಸಾಧಿಸಿದ ದಾವಣಗೆರೆ ವಿಭಾಗದ ಎಲ್ಲಾ ಅಂಚೆ ನೌಕರರಿಗೆ ಹಾಗೂ ಗ್ರಾಮೀಣ ಅಂಚೆ ಸೇವಕರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು ಹಾಗೂ ನ್ಯಾಮತಿ ತಾಲೂಕುಗಳ ಅಂಚೆ ಕಚೇರಿಯ ಸಿಬ್ಬಂದಿ ಪ್ರಶಸ್ತಿಗಳನ್ನು ಪಡೆದುಕೊಂಡರು. ಅಂಚೆ ಅಧೀಕ್ಷಕ ಶ್ರೀ ಚಂದ್ರಶೇಖರ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉಧ್ಘಾಟಿಸಿದರು, ಸಹಾಯಕ ಅಂಚೆ ಅಧೀಕ್ಷಕರು (ಸ್ಥಾನಿಕ) ಗುರುಪ್ರಸಾದ್ ಜೆ ಎಸ್ ಪ್ರಾರ್ಥಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಕೆ ಎಂ ನರೇಂದ್ರ ನಾಯಕ್, ನಿರೀಕ್ಷಕರುಗಳಾದ ಜೆ ಡಿ ಸ್ವಾಮಿ ಹಾಗೂ ಅಶ್ವಥ್, ಅಂಚೆ ಪಾಲಕರುಗಳಾದ ಓ0ಕಾರಮೂರ್ತಿ, ಶ್ರೀನಿವಾಸ್ರಾವ್ ಹಾಗೂ ಶಿವರಾಮ್ ಶರ್ಮ ಹಾಗೂ ಜಿಲ್ಲೆಯ ಎಲ್ಲಾ ಅಂಚೆ ಸಿಬ್ಬಂದಿ ಉಪಸ್ಥಿತರಿದ್ದರು. ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದ ಜಾನಮ್ಮ ಎನ್ನುವವರ ಪತಿ ಅಪಘಾತದಲ್ಲಿ ಮೃತರಾಗಿದ್ದು ಅವರ ಅಪಘಾತ ವಿಮೆ ಪಾಲಿಸಿಯ ಕ್ಲೇಮ್ ಮೊತ್ತ ಹತ್ತು ಲಕ್ಷ ರೂ. ಗಳನ್ನು ಚೆಕ್ ಮೂಲಕ ಪಾವತಿಸಲಾಯಿತು.
—-