ನಂದೀಶ್ ಭದ್ರಾವತಿ, ದಾವಣಗೆರೆ
ನೀವು ಅಡವಿಟ್ಟಿರುವ ಚಿನ್ನವನ್ನು ಬಿಡಿಸಿಕೊಳ್ಳಲು ಆಗುತ್ತಿಲ್ಲವೇ, ನಾವು ಮಾರುಕಟ್ಟೆ ದರಕ್ಕಿಂತ ಹೆಚ್ಚು ಹಣ ಕೊಟ್ಟು ಖರೀದಿಸುತ್ತೇವೆ ಎಂಬ ಜಾಹೀರಾತು ನೋಡಿ ನೀವೆನಾದ್ರೂ, ಈ ಜಾಹೀರಾತು ನೋಡಿ ಚಿನ್ನ ಮಾರೋದಕ್ಕೆ ಹೋದ್ರೆ ಹುಷಾರ್, ಇದರ ಹಿಂದೆ, ದೊಡ್ಡ ಮೋಸದ ಜಾಲವೇ ಇದೆ…ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ..
ಹೌದು..ನೀವೇನಾದ್ರೂ ಹಳೆ ಚಿನ್ನ ಅಥವಾ ಅಡ ಇಟ್ಟಿರುವ ಚಿನ್ನ ಕೊಡುವಾಗ ಅವರು ಹೇಳೊದನ್ನೆಲ್ಲ ಕೇಳಿದ್ರೆ ಮೋಸ ಹೋಗೋದು ಗ್ಯಾರಂಟಿ. ಅಲ್ಲದೇ ಅಂಗಡಿ ಮಾಲೀಕ ಏನು ಮಾಡದೇ ಲಕ್ಷಗಟ್ಟಲೇ ಹಣ ದುಡಿಯುತ್ತಿದ್ದಾರೆ.
ಗ್ರಾಹಕನೊಬ್ಬ 50 ಗ್ರಾಂ ಚಿನ್ನ ಮಾಡಿಸುವಾಗ ಗ್ರಾಂಗೆ ಏಳು ಸಾವಿರ ರೂ.ನಂತೆ ಸುಮಾರು ಮೂರುವರೆ ಲಕ್ಷ ಕೊಟ್ಟು ಬಂಗಾರ ಮಾಡಿಸುತ್ತಾನೆ. ಇದಕ್ಕೆ ಮಜೂರಿಯೆಂದು ಹತ್ತರಿಂದ ಇಪ್ಪತ್ತು ಸಾವಿರ ರೂಪಾಯಿ ಹಾಕುತ್ತಾರೆ. ನೀವು ತೆಗೆದುಕೊಳ್ಳುವ ಬಂಗಾರ ಡಿಸೈನ್ ಹೆಚ್ಚಿದ್ದರೇ, ಇನ್ನಷ್ಟು ದರವನ್ನು ಗ್ರಾಹಕನ ಮೇಲೆ ಹಾಕುತ್ತಾರೆ. ಅಲ್ಲಿಗೆ 50 ಗ್ರಾಂ ಚಿನ್ನವನ್ನು ಕೊಂಡರೇ ಕಡಿಮೆ ಅಂದ್ರೂ ಮೂರು ಲಕ್ಷದ ಇಪ್ಪತ್ತು ಸಾವಿರ ರೂ.ಮಜೂರಿ ಜಾರ್ಚ್ ಹಾಕುತ್ತಾರೆ. ಆದರೆ ಇದರೊಳಗೆ ತಾಮ್ರವೇ ಹೆಚ್ಚು ಇರುತ್ತದೆ. ಒಂದೊಮ್ಮೆ ಬೇರೆ ಅಂಗಡಿಗೆ ಹೋಗಿ ಇದೇ ಚಿನ್ನ ಮಾರಾಟ ಮಾಡಲು ಹೋದರೆ ಐವತ್ತು ಗ್ರಾಂ ಚಿನ್ನದಲ್ಲಿ, ಈ ಚಿನ್ನ ಹಳೆಯದಾಗಿದೆ, ಸವೆದಿದೆ, ಹರಳು ಹೆಚ್ಚಿದೆ, ಎರಡು ಗ್ರಾಂ ವೇಸ್ಟೆಜ್ ಹೋಗುತ್ತದೆ, ಕೊಳೆ ಎರಡು ಗ್ರಾಂ ಹೋಗುತ್ತೇ, ತಾಮ್ರ ಇಷ್ಟು ಪ್ರಮಾಣದ್ದು ಇದೇ. 916 ಇಲ್ಲ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಾರೆ. ಅಲ್ಲಿಗೆ ನೀವು ಕೊಳ್ಳುವಾಗ 50 ಗ್ರಾಂ ಚಿನ್ನ ನೀವು ಮಾರಾಟ ಮಾಡುವ ವೇಳೆ ಸುಮಾರು ಎಂಟು ಗ್ರಾಂ ಕಡಿಮೆ ಮಾಡುತ್ತಾರೆ. ಕೊಡುವಾಗ ಮಜೂರಿ ಲೆಕ್ಕ ಹಾಕುವುದಿಲ್ಲ. ಅಲ್ಲಿಗೆ ಮೂರು ಲಕ್ಷ ಐವತ್ತು ಸಾವಿರ ರೂ. ನೀಡಿದ್ದ ಚಿನ್ನ ಎಂಟು ಗ್ರಾಂ ಕಡಿಮೆ ಯಾಗಿ 42 ಗ್ರಾಂ ಚಿನ್ನವಾಗುತ್ತದೆ. ಇನ್ನು ಚಿನ್ನ ನೀಡುವಾಗ ಅಂದಿನ ದರಕ್ಕಿಂತ ಐದನೂರು ಕಡಿಮೆ ಮಾಡುತ್ತಾರೆ. ಅಲ್ಲಿಗೆ ಗ್ರಾಂಗೆ ಏಳು ಸಾವಿರ ರೂ.ಗೆ ನೀಡಿದ್ದ ಚಿನ್ನ ಆರೂವರೆ ಸಾವಿರ ಆಗುತ್ತದೆ. ಅಲ್ಲಿಗೆ ಚಿನ್ನ ಮಾರುವ ವೇಳೆ ಮೂರು ಲಕ್ಷದ ಇಪ್ಪತ್ತು ಸಾವಿರ ರೂ.ಕೊಂಡಿದ್ದ ಚಿನ್ನದ ಬೆಲೆ ಎರಡು ಲಕ್ಷದ ಎಪ್ಪತ್ತು ಸಾವಿರ ರೂ. ಆಗುತ್ತದೆ. ಅಲ್ಲಿಗೆ ಚಿನ್ನದ ವ್ಯಾಪಾರಿಗೆ ನೀವು ಮಾರಿದ ಚಿನ್ನದಿಂದ ಸುಮಾರು 50 ಸಾವಿರ ರೂ.ಲಾಭವಾಗುತ್ತದೆ. ಇದು ಇಷ್ಟಕ್ಕೆ ಮುಗಿಯುವುದಿಲ್ಲ ಈ ಮೋಸ ಮತ್ತಷ್ಟು ಮುಂದುವರೆಯುತ್ತದೆ.
ಮಾರಿದ ಚಿನ್ನಕ್ಕೆ ಮತ್ತಷ್ಟು ಮೋಸ
ಚಿನ್ನದಲ್ಲಿ ಎರಡು ವಿಧಗಳಿವೆ ಒಂದು 91.6 ಅಂತ ಇದರಲ್ಲಿ ಶೇ.91 ರಷ್ಟು ಹರಳು ಡಿಸೈನ್ ಇರುತ್ತದೆ. ಇನ್ನುಳಿದ ಶೇ.9 ರಷ್ಟು ತಾಮ್ರವಿರುತ್ತದೆ. ಇನ್ನು ಎರಡನೇಯದಾಗಿ ಅಪರಂಜಿ ಚಿನ್ನ ಇರುತ್ತದೆ. ಇದು ಶುದ್ಧ ಚಿನ್ನ. ಯಾವುದೇ ತಾಮ್ರದ ಬಳಕೆ ಇರುವುದಿಲ್ಲ. ಅಪರಂಜಿ ಚಿನ್ನದ ದರ ಹೆಚ್ಚು ಇರುತ್ತದೆ. ಹಾಗಾಗಿ ನೀವು ಮಾರುವ ಹಳೆ ಚಿನ್ನಕ್ಕೆ ಅಪರಂಜಿ ದರ ಕೊಡಬೇಕು. ಯಾಕೆಂದ್ರೆ ಎಲ್ಲವನ್ನು ಕಳೆದಿರುತ್ತಾರೆ. ಆದರೆ ಚಿನ್ನದ ವ್ಯಾಪಾರಿಗಳು 91.6 ಬಂಗಾರದ ದರವನ್ನು ಹಳೆ ಚಿನ್ನಕ್ಕೆ ನೀಡುತ್ತಾರೆ. 91.6 ಬಂಗಾರದ ದರ ಏಳು ಸಾವಿರ ಇದ್ದರೇ, ಅಪರಂಜಿ ಚಿನ್ನದ ದರ ಎಂಟು ಸಾವಿರ ರೂ.ಇರುತ್ತದೆ.ಸುಮಾರು ಒಂದು ಸಾವಿರ ರೂ. ದರ ಅಪರಂಜಿ ಚಿನ್ನಕ್ಕೆ ಹೆಚ್ಚು ಇರುತ್ತದೆ. ಈ ದರವನ್ನು ಗ್ರಾಹಕರಿಗೆ ನೀಡಬೇಕು, ಆದರೆ ಚಿನ್ನದ ವ್ಯಾಪಾರಿಗಳು 91.6 ದರ ನೀಡಿ, ಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ನೀಡಿದ್ದೇವೆ, ಬೆಳ್ಳಿ ಉಚಿತವಾಗಿ ನೀಡುತ್ತೇವೆ ಎಂದು ಜನರನ್ನು ಯಾಮಾರಿಸುತ್ತಾರೆ . ಅಲ್ಲಿಗೆ 43 ಗ್ರಾಂ ಕೊಟ್ಟರೇ ಇದರಲ್ಲಿ 43 ರೂ.ಸಾವಿರ ಹಣ ಚಿನ್ನದ ವ್ಯಾಪಾರಿಗೆ ಲಾಭವಾಗುತ್ತದೆ. ಅಲ್ಲಿಗೆ ಐವತ್ತು ಗ್ರಾಂ ಚಿನ್ನ ಮಾರಿದರೆ ಬಂಗಾರದ ವ್ಯಾಪಾರಿಗೆ ಸುಮಾರು ಎಂಭತ್ತು ಸಾವಿರ ರೂ.ಲಾಭವಾಗುತ್ತದೆ. ಇದು ಕೇವಲ ಒಬ್ಬ ಗ್ರಾಹಕನಿಂದ. ಇಬ್ಬರು ಗ್ರಾಹಕರು ತಲಾ ಐವತ್ತು ಗ್ರಾಂ ಚಿನ್ನವನ್ನು ಒಂದು ದಿನಕ್ಕೆ ನೀಡಿದರೆ ಸುಮಾರು ಒಂದು ಲಕ್ಷದ ಎಂಭತ್ತು ಸಾವಿರ ರೂ.ಒಬ್ಬ ವ್ಯಾಪಾರಿಗೆ ಲಾಭವಾಗುತ್ತದೆ. ಅಲ್ಲಿಗೆ ಒಬ್ಬ ವ್ಯಾಪಾರಿ ದಿವಸಕ್ಕೆ ನೂರು ಗ್ರಾಂ ಹಳೆ ಚಿನ್ನ ಕೊಟ್ಟರೇ ಮೂರು ಸಾವಿರ ಗ್ರಾಂ ನೀಡಿದಂತಾಗುತ್ತದೆ. ಅಲ್ಲಿಗೆ ಒಂದು ದಿನಕ್ಕೆ ಒಂದು ಲಕ್ಷದ ಆರವತ್ತು ಸಾವಿರ ರೂ. ಲಾಭ ಬಂದರೆ ತಿಂಗಳಿಗೆ ಒಂದು ಕೋಟಿ ಆರವತ್ತು ಲಕ್ಷ ರೂ. ಒಬ್ಬ ವ್ಯಾಪಾರಿ ದುಡಿಯದೇ ಹಣ ಗಳಿಸುತ್ತಾನೆ. ಇಂತಹ ಹತ್ತು ವ್ಯಾಪಾರಿಗಳ ಲಾಭ ಲೆಕ್ಕ ಹಾಕಿದರೆ ಮಿಲಿಯನ್ ತನಕ ಆಗುತ್ತದೆ.
ನೈಜ ಘಟನೆ, ಹೇಗೆ ಮೋಸ ಮಾಡುತ್ತಾರೆ ಗೊತ್ತಾ?:
ಕನಕಪುರ ತಾಲ್ಲೂಕಿನ ವೀರೇಗೌಡನದೊಡ್ಡಿಯ ರಾಜೇಂದ್ರ ಪ್ರಸಾದ್, ಕನಕಪುರದ ಎಂ.ಜಿ. ರಸ್ತೆಯಲ್ಲಿರುವ ಧನಲಕ್ಷ್ಮಿ ಜ್ಯುವೆಲ್ಲರ್ಸ್ನಲ್ಲಿ 2023ರ ಆಗಸ್ಟ್ 8ರಂದು ರೂ. 4,06,495 ಮೌಲ್ಯದ 22 ಕ್ಯಾರೆಟ್ನ 66.820 ಗ್ರಾಂ ಚಿನ್ನಾಭರಣ ಖರೀದಿಸಿದ್ದರು. ಅದಕ್ಕಾಗಿ, ರಾಜೇಂದ್ರ ಅವರು ತಮ್ಮಲ್ಲಿದ್ದ ಹಳೆಯ 34 ಗ್ರಾಂ ಚಿನ್ನವನ್ನು ಅದೇ ಮಳಿಗೆಗೆ ಮಾರಾಟ ಮಾಡಿದ್ದರು.ಮಳಿಗೆಯವರು ಖರೀದಿಸಿದ್ದ ಚಿನ್ನದಲ್ಲಿ ಶೇ 20ರಷ್ಟು ಕಾಪರ್ ಮತ್ತು ಕೊಳೆಯನ್ನು ಕಳೆದುಕೊಂಡು 26.715 ಗ್ರಾಂ ಚಿನ್ನಕ್ಕೆ ರೂ 1,43,647 (ಪ್ರತಿ ಗ್ರಾಂಗೆ ₹5,377ರಂತೆ) ದರ ನಿಗದಿ ಮಾಡಿದ್ದರು. ಇದರಿಂದಾಗಿ ಪಿರ್ಯಾದಿಯ ಹಳೆಯ ಚಿನ್ನಕ್ಕೆ ಪಾವತಿಸಬೇಕಾಗಿದ್ದ ರೂ. 14,318 ಮೊತ್ತ ವ್ಯತ್ಯಾಸವಾಗಿತ್ತು. ಈ ಕುರಿತು ಮಳಿಗೆಯವರನ್ನು ಪ್ರಶ್ನಿಸಿದಾಗ, ಅವಾಚ್ಯವಾಗಿ ನಿಂದಿಸಿ ಅಪಮಾನ ಮಾಡಿದ್ದರು ಎಂದು ಪಿರ್ಯಾದಿ ಗ್ರಾಹಕರ ಆಯೋಗಕ್ಕೆ ದೂರು ಕೊಟ್ಟಿದ್ದರು.
ತಮ್ಮ ಹಳೆ ಚಿನ್ನಕ್ಕೆ ಸಿಗಬೇಕಾದ ರೂ.14,318 ಮೊತ್ತದ ಜೊತೆಗೆ, ಸೇವಾ ನ್ಯೂನತೆ ಮತ್ತು ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ 2 ಲಕ್ಷ ಹಾಗೂ ಪ್ರಕರಣದ ಖರ್ಚು ರೂ.50 ಸಾವಿರವನ್ನು ಮಳಿಗೆಯವರಿಂದ ಭರಿಸಿ ಕೊಡಬೇಕು ಎಂದು ಪಿರ್ಯಾದಿ ಆಯೋಗವನ್ನು ಕೋರಿದ್ದರು.
ಪಿರ್ಯಾದಿಯ ಆರೋಪವನ್ನು ಅಲ್ಲಗಳೆದಿದ್ದ ಮಳಿಗೆಯವರು, ಪಿರ್ಯಾದಿಯ ಹಳೆ ಆಭರಣವನ್ನು ಖರೀದಿಸಿದ್ದನ್ನು ಮತ್ತು ಹೊಸ ಆಭರಣ ಮಾರಾಟ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ತಮ್ಮ ವಿರುದ್ಧ ಸುಳ್ಳು ಹಾಗೂ ಕ್ಷುಲ್ಲಕ ಪ್ರಕರಣ ದಾಖಲಿಸಲಾಗಿದ್ದು, ಮಳಿಗೆಯ ಖ್ಯಾತಿಗೆ ಚ್ಯುತಿ ತಂದಿದ್ದಾರೆ. ಹಾಗಾಗಿ, ಪ್ರಕರಣವನ್ನು ವಜಾ ಮಾಡಬೇಕು ಎಂದು ಕೋರಿದ್ದರು.ಎರಡೂ ಕಡೆಯವರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಎಚ್. ಚನ್ನೇಗೌಡ ಮತ್ತು ಸದಸ್ಯ ವೈ.ಎಸ್. ತಮ್ಮಣ್ಣ ಅವರಿದ್ದ ಪೀಠ, ಪಿರ್ಯಾದುದಾರರು ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ಅವರ ಆರೋಪವನ್ನು ಪುರಸ್ಕರಿಸಿತ್ತು.
ಹಳೆ ಚಿನ್ನಕ್ಕೆ ಬಿಲ್ ಕೊಡೋದಿಲ್ಲ
ಸಾಮಾನ್ಯವಾಗಿ ಹಳೆ ಚಿನ್ನ ಕೊಳ್ಳುವ ವ್ಯಾಪಾರಿಗಳು ಜಿಎಸ್ಟಿ ಬಿಲ್ ಕೊಡೋದಿಲ್ಲ. ಬದಲಾಗಿ ಬಿಳಿ ಹಾಳೆ ಮೇಲೆ ಬರೆದುಕೊಡುತ್ತಾರೆ. ಗ್ರಾಹಕನು ಕೂಡ ಲಕ್ಷಕ್ಕೆ ಮೂರು ಸಾವಿರ ಜಿಎಸ್ಟಿ ಯಾಕೆ ಕೊಡಬೇಕೆಂದು ಸುಮ್ಮನಾಗುತ್ತಾನೆ. ಇದು ಚಿನ್ನದ ವ್ಯಾಪಾರಿಗಳಿಗೆ ಹೆಚ್ಚುಲಾಭವಾಗುತ್ತದೆ. ವ್ಯಾಪಾರಿ ಬಿಲ್ ಕೊಟ್ಟರೇ ದಿನಾಂಕ, ಜಿಎಸ್ಟಿ ನಂಬರ್, ಮಜೂರಿ, ವೇಸ್ಟೆಜ್, ತಾಮ್ರ ಎಷ್ಟಿದೆ, ಹರಳು ಎಷ್ಟಿದೆ, ಹಾಲ್ ಮಾರ್ಕ್ ಬಂಗಾರನಾ, ಅಪರಂಜಿ ಬಂಗಾರನಾ ಎಂದು ಬರೆಯಬೇಕು. ಇದು ದಾಖಲೆಯಾಗುತ್ತದೆ. ಗ್ರಾಹಕನು ಈ ದಾಖಲೆ ಇಟ್ಟುಕೊಂಡು ಯಾವ ಬಂಗಾರದ ಅಂಗಡಿಗೆ ಹೋಗಿ ಲೆಕ್ಕ ಕೇಳಬಹುದು. ಒಂದು ವೇಳೆ ಲೆಕ್ಕ ಕೇಳಿದರೆ ಬಂಗಾರದ ವ್ಯಾಪಾರಿ ಮಾಡುವ ಮೋಸ ಗೊತ್ತಾಗುತ್ತದೆ ಎಂದು ಬಿಳಿ ಹಾಳೆ ಮೇಲೆ ಬರೆದು ಕೊಡುತ್ತಾರೆ. ಈ ಬಂಗಾರದ ಬಿಲ್ ನೀಡಿದ ಬಿಳಿ ಹಾಳೆ ಯಾವ ಮಾನ್ಯತೆಯೂ ಇರೋದಿಲ್ಲ. ದಾಖಲೆಯೂ ಸಿಗೋದಿಲ್ಲ.ಬಂಗಾರದ ವ್ಯಾಪಾರಿ ಯಾವಾಗ ಬೇಕಾದರೂ ಸುಳ್ಳು ಹೇಳಬಹುದು.
ಹಳೆ ಬಂಗಾರ ಏನು ಮಾಡುತ್ತಾರೆ
ಖರೀದಿಸಿದ ಹಳೆ ಬಂಗಾರವನ್ನು ಮೊದಲು ಕಾಯಿಸಿ ಗ್ರಾಂ ಲೆಕ್ಕದಲ್ಲಿ ಗಟ್ಟಿ ಮಾಡಿಕೊಳ್ಳುತ್ತಾರೆ. ಈ ಗಟ್ಟಿ ಬಂಗಾರ ತೆಗೆದುಕೊಂಡು ಹೊಸ ಬಂಗಾರ ಮಾಡಿ ಮತ್ತೆ ಮಜೂರಿ ಸೇರಿದಂತೆ ಇತರೆ ಖರ್ಚುನ್ನು ಗ್ರಾಹಕನ ಮೇಲೆ ಹಾಕಿ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ
150 ರೂ.ಹರಳಿಗೆ ಎರಡು ಸಾವಿರ ರೂಪಾಯಿ.
ನೀವು ಉಂಗುರ ತೆಗೆದುಕೊಂಡರೆ ಹರಳಿಗೆ ಸೇರಿ ಬಿಲ್ ಹಾಕುತ್ತಾರೆ. ಒಂದು ಹರಳಿಗೆ ಕೇವಲ ನೂರರಿಂದ ಇನ್ನೂರು ರೂಪಾಯಿ ಇದೆ. ಆದರೆ ಬಂಗಾರದ ವ್ಯಾಪಾರಿಗಳು ಎರಡು ಸಾವಿರ ರೂ.ದರ ಹಾಕುತ್ತಾರೆ. ಅದೇ ನೀವು ಉಂಗುರು ಕೊಡುವಾಗ ಆ ಹರಳಿಗೆ ನೂರು ರೂಪಾಯಿ ಕೂಡ ಕೊಡುವುದಿಲ್ಲ. ಆದರೆ ಗ್ರಾಹಕನಿಗೆ ನೀಡುವಾಗ ಎರಡು ಸಾವಿರ ರೂ.ದರ ಫಿಕ್ಸ್ ಮಾಡುತ್ತಾರೆ. ಇದಿಷ್ಟು ಬಂಗಾರದ ವ್ಯಾಪಾರಿಗಳು ಮಾಡುವ ಮೋಸವಷ್ಟೇ. ಹಾಗಾಗಿ ಬಂಗಾರದ ವ್ಯಾಪಾರಿಗಳು ಸಾಕಷ್ಟು ಶ್ರೀಂಮತರಾಗಿರುತ್ತಾರೆ.