ಚಿತ್ರದುರ್ಗ (ಮೊಳಕಾಲ್ಮೂರು): ತನ್ನ ಅಜ್ಜಿಯ ಮೃತದೇಹ ಸಾಗಿಸುತ್ತಿದ್ದ ಕಾರಿನ ಟೈರ್ ಬಸ್ಟ್ ಆದ ಕಾರಣ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ತಾಲೂಕಿನ 150 ಎ ರಾಷ್ಟ್ರೀಯ ಹೆದ್ದಾರಿಯ ರಾಂಪುರ ದ ಹೊಸದಡಗೂರು ಕ್ರಾಸ್ ಸಮೀಪದಲ್ಲಿ ನಡೆದಿದೆ.
ಈ ಕಾರು ಅಜ್ಜಿಯ ಶವವನ್ನು ಬೆಂಗಳೂರಿನಿಂದ ಬಳ್ಳಾರಿಯ ಸಿರುಗುಪ್ಪಗೆ ಹೋಗುತ್ತಿತ್ತು. ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.
ಘಟನೆಯಲ್ಲಿ 4 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಇವರನ್ನು ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಪಲ್ಟಿ : ರಾಷ್ಟ್ರೀಯ ಹೆದ್ದಾರಿ 150ಎ ರಲ್ಲಿ ಟೈರ್ ಸ್ಫೋಟಗೊಂಡ ಪರಿಣಾಮ ಕಾರು ಪಲ್ಟಿಯಾಗಿದೆ. ಅಪಘಾತ ಸಂಭವಿಸಿದೆ. ಮೃತರನ್ನು 40 ವರ್ಷದ ಸುರೇಶ್, 25 ವರ್ಷದ ಮಲ್ಲಿಕಾರ್ಜುನ ಮತ್ತು 9 ವರ್ಷದ ಭೂಮಿಕಾ ಎಂದು ಗುರುತಿಸಲಾಗಿದೆ. ಮೃತರು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ದೇಸನೂರು ನಿವಾಸಿಗಳು ಎಂದು ತಿಳಿದುಬಂದಿದೆ.
ಬೆಂಗಳೂರಿನ ಆಸ್ಪತ್ರೆಯಲ್ಲಿ 66 ವರ್ಷದ ಹುಲಿಗೆಮ್ಮ ಎಂಬುವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಹೀಗಾಗಿ ಕಾರಿನಲ್ಲಿ ಹುಲಿಗೆಮ್ಮನ ಮೃತದೇಹವನ್ನು ಬೆಂಗಳೂರಿನಿಂದ ದೇಸನೂರಿಗೆ ಸಾಗಿಸಲಾಗುತ್ತಿತ್ತು. ಅಪಘಾತದಲ್ಲಿ ನಾಗಮ್ಮ, ತಾಯಮ್ಮ, ಧನರಾಜ್ ಗಾಯಗೊಂಡಿದ್ದು ಕಾರು ಚಾಲಕ ಶಿವು ಸ್ಥಿತಿ ಗಂಭೀರವಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ರಾಂಪುರ ಪಿಎಸ್ಐ ಪರಶುರಾಮ್ ಲಮಾಣಿ ಭೇಟಿ, ಪರಿಶೀಲನೆ ನಡೆಸಿದರು.