ಶಿವಮೊಗ್ಗ,ಜೂ.13: ಬೆಂಗಳೂರಿನ ಪಯಣ ಸಂಸ್ಥೆ, ಫೀಪಲ್ಸ್ ಲಾಯರ್ಸ್ ಗೀಲ್ಡ್, ಶಿವಮೊಗ್ಗದ ರಕ್ಷ ಸಮುದಾಯ, ರಂಗಾಯಣ ನೇಟಿವ್ ಥೇಟರ್ ಇವರ ಸಂಯುಕ್ತಾಶ್ರಯದಲ್ಲಿ ಲೈಂಗಿಕ ಸಮುದಾಯದ ಜೀವನ ಚಿತ್ರಣವಿರುವ ತಲ್ಕಿ ಎಂಬ ನಾಟಕವನ್ನು ಜೂ.15ರಂದು ಸಂಜೆ 6.30ಕ್ಕೆ ಕನ್ನಡ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪಯಣ ಸಂಸ್ಥೆಯ ಚಾಂದಿನಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೊಟ್ಟಮೊದಲ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರೇ ಸೇರಿಕೊಂಡು ಅವರ ಸಮಸ್ಯೆಗಳನ್ನು ಅವರ ಬದುಕನ್ನು ಅವರ ಸುಖದುಃಖಗಳನ್ನು ಬಿಂಬಿಸುವ ನಾಟಕ ತಲ್ಕಿಯಾಗಿದೆ. ಇದೊಂದು ಹೊಸ ಪ್ರಯತ್ನವಾಗಿದೆ ಎಂದರು.ಇದುವರೆಗೂ ಲೈಂಗಿಕ ಅಲ್ಪಸಂಖ್ಯಾತರ ಕುರಿತು ಇತರೆಯವರೇ ನಾಟಕಗಳನ್ನು ಮಾಡುತ್ತಿದ್ದರು. ಆದರೆ, ನಾವು ಈಗ ಲೈಂಗಿಕ ಅಲ್ಪಸಂಖ್ಯಾತರೇ ಸೇರಿಕೊಂಡು ಈ ನಾಟಕ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಅಭಿನಯಿಸಬೇಕು ಎಂಬ ಇಚ್ಛೆ ನಮ್ಮದಾಗಿದೆ. 14ರಂದು ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ 2.30ಕ್ಕೆ ಅಭಿನಯಿಸುತ್ತೇವೆ. ಹಾಗೆಯೇ 15ರಂದು ರಂಗಾಯಣದಲ್ಲಿ ಸಂಜೆ 6.30ಕ್ಕೆ ಅಭಿನಯಿಸುತ್ತೇವೆ ಎಂದರು.
ಈ ನಾಟಕವನ್ನು ಶ್ರೀಜಿತ್ ಸುಂದರA ನಿರ್ದೇಶನ ಮಾಡಿದ್ದಾರೆ. ರೇವತಿ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಸಂಗೀತ ಸಂಯೋಜನೆ ಸಂದೀಪ್ ಕುಮಾರ್ ಮಾಡಿದ್ದಾರೆ. ಶಾಂತಮ್ಮ, ಲಕ್ಷ್ಮೀಯಮ್ಮ, ರೇವತಿ, ಭಾನಮ್ಮ, ಶೋಭನಾಕುಮಾರಿ, ಸರವನ, ಚಾಂದಿನಿ ಈ ನಾಟಕದಲ್ಲೇ ಅಭಿನಯಿಸಿದ್ದಾರೆ ಎಂದರು.
ಈ ಎಲ್ಲಾ ನಟಿಯರ ಜೀವನ ಚಿತ್ರದ ತುಣುಕುಗಳು ಇಲ್ಲಿವೆ. ಇವು ನೈಜ ಘಟನೆಯಾಗಿವೆ. ನಮ್ಮನೋವುಗಳನ್ನು ನಾವೇ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ ಎಂದರು. ತಲ್ಕಿ ಎಂದರೆ ಮಾಂಸದಿAದ ತಯಾರುಮಾಡಿರುವ ಆಹಾರದ ಊಟದ ಪದ್ಧತಿಯಾಗಿದೆ. ಇದನ್ನು ಮುಖ್ಯವಾಗಿಟ್ಟುಕೊಂಡು ಇದರ ಸುತ್ತ ಲೈಂಗಿಕ ಅಲ್ಪಸಂಖ್ಯಾತರು ಅನುಭವಿಸಿದ ಕಷ್ಟಗಳು ಹೆಣ್ಣು ಗಂಡಾದ, ಗುಂಡು ಹೆಣ್ಣಾದ ಬಗೆ ಸಮುದಾಯದ ಸಾಂಸ್ಕೃತಿಕ ಚಿತ್ರಣವನ್ನು ಈ ನಾಟಕದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಸವಿತ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರ ನೋವು, ನಲಿವು, ಪ್ರೀತಿ, ಮದ, ಮೋಹ, ಮತ್ಸರ ಸಮುದಾಯದಿಂದ ದೂಡಲ್ಪಟ್ಟ ವ್ಯಥೆ ನಮ್ಮ ಕಥೆ ಇವೆಲ್ಲವೂ ನಾಟಕದ ಮೂಲಕ ಹೇಳುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಸಮುದಾಯದ ದೂಡಲ್ಪಟ್ಟ ನಮಗೆ ಮಾರ್ಗದರ್ಶಕರೇ ಇಲ್ಲವಾಗಿದೆ. ನಮಗೆ ನಾವೇ ಮಾರ್ಗದರ್ಶಕರಾಗಬೇಕಾಗಿದೆ. ಗಂಡು ಮತ್ತು ಹೆಣ್ಣಿನ ಬಗ್ಗೆ ಶಿಕ್ಷಣದಲ್ಲಿ ಕಲಿಯಲು ಬೇಕಾದಷ್ಟು ಅವಕಾಶವಿದೆ. ಆದರೆ ನಮ್ಮ ಸಮುದಾಯದ ಬಗ್ಗೆ ಎಲ್ಲಿಯೂ ಪಠ್ಯಗಳಿಲ್ಲ. ನಾವು ಯಾರಿಗೂ ಬೇಡವಾಗಿದ್ದೇವೆ. ನಮ್ಮನ್ನು ನಾವೇ ಸಂತೈಸಿಕೊಳ್ಳುವ ಸಬಲೀಕರಣಗೊಳ್ಳುವ ಅನಿವಾರ್ಯತೆ ಈಗ ನಮ್ಮ ಮುಂದಿದೆ ಎಂದರು.
ಶಿವಮೊಗ್ಗದ ರಕ್ಷಾ ಸಮುದಾಯದ ಮುಖ್ಯಸ್ಥ ಮೊಹಮದ್ ಸೈಫುಲ್ಲಾ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಕ್ಷಾ ಸಮುದಾಯ ಕೆಲಸ ಮಾಡುತ್ತ ಬಂದಿದೆ. ನಾಟಕದ ಮೂಲಕವು ಈ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹಿನ್ನಲೆಯಲ್ಲಿ ಈ ನಾಟಕವನ್ನು ಪ್ರದರ್ಶಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಶ್ರೀಜಿತ್ ಸುಂದರA, ನಟಿಯರಾದ ರೇವತಿ ಎ., ಭಾನಮ್ಮ ಇದ್ದರು.