ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜ.25 ಹಾಗೂ 26ಕ್ಕೆ ಬೆಳಗ್ಗೆ 10 ಕ್ಕೆ ಹರಿಹರದಲ್ಲಿರುವ ಬಿ.ಕೃಷ್ಣಪ್ಪನವರ ಸಮಾಧಿ ಸ್ಥಳ ಮೈತ್ರಿವನದ ಸ್ಮಾರಕಭವನದಲ್ಲಿ ರಾಜ್ಯ ಮಟ್ಟದ ತರಬೇತಿ ಕಾರ್ಯಗಾರ ಮತ್ತು ಸರ್ವಸದಸ್ಯರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕರಾದ ಡಿ.ಹನುಮಂತಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೋಷಿತರ ಧ್ವನಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಕರ್ನಾಟಕದ ದಲಿತ ಸೂರ್ಯ ಮಹಾತ್ಮ ಪ್ರೋ. ಬಿ. ಕೃಷ್ಣಪ್ಪರವರ ಆಶಯಗಳು ಮತ್ತು ಸ್ವಾಭಿಮಾನಿ ಹೋರಾಟದ ಹಾದಿಯಲ್ಲಿ ರಾಜ್ಯಾದ್ಯಂತ ಸಂಘಟನೆ ಮುನ್ನಡೆಸುತ್ತಿರುವ ಡಿ.ಆರ್ ಪಾಂಡುರಂಗಸ್ವಾಮಿ ಮತ್ತು ಪದಾಧಿಕಾರಿಗಳು ಕ.ದ.ಸಂ.ಸ ಪದಾಧಿಕಾರಿಗಳಿಗೆ ಕಾನೂನು ಅರಿವು ಮೂಡಿಸಲು ಕಾರ್ಯಾಗಾರದಲ್ಲಿ ಮಾತನಾಡಲಿದ್ದಾರೆ ಎಂದರು.
ಜ.25 ರಂದು ಡಾ. ಬಿ.ಆರ್. ಅಂಬೇಡ್ಕರ್ರವರು 1949 ರಲ್ಲಿ ಲಕ್ನೋದಲ್ಲಿ ಶೆಡ್ಯೂಲ್ಸ್ ಕಾಸ್ಟ್ ಫೆಡರೇಷನ್ ಸಭೆ ಮುಕ್ತಾಯದ ಸವಿ ನೆನಪಿಗಾಗಿ ಹಾಗೂ ಜ.26 ರಂದು ಸಂವಿಧಾನ ಜಾರಿಯಾದ ದಿನದ ಪ್ರಯುಕ್ತ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ರೈಲು ನಿಲ್ದಾಣಕ್ಕೆ ಮಹಾತ್ಮ ಪ್ರೋ. ಬಿ. ಕೃಷ್ಣಪ್ಪನವರ ಹೆಸರನ್ನು ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರ ಹಾಗೂ ಜಿಲ್ಲೆಯ ಸಂಸದರು ಹಾಗೂ ರಾಜ್ಯದ ಸಂಸದರಿಗೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗುವುದು ಮತ್ತು ಕ.ದ.ಸಂ.ಸ ನೂತನ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಆರ್ ಶ್ರೀನಿವಾಸ್, ಟಿ.ರುದ್ರಪ್ಪ,ತಿಪ್ಪೇಸ್ವಾಮಿ, ಕರಿಬಸಪ್ಪ,ಹರೀಶ್,ಜೆ.ಡಿ ಕೃಷ್ಣಮೂರ್ತಿ, ಡಿ.ಎನ್ ಗಣೇಶ್ ಇದ್ದರು.