
ದಾವಣಗೆರೆ: ಬಿಜೆಪಿಯಲ್ಲಿ ಬಣರಾಜಕೀಯ ಮುಂದುವರಿದಿದ್ದು, ರಾಜ್ಯದಲ್ಲಿ ಯತ್ನಾಳ್-ವಿಜಯೇಂದ್ರ ಬಣದಲ್ಲಿ ತಿಕ್ಕಾಟ ನಡೆಯುತ್ತಿದೆ. ಈ ನಡುವೆ ದಾವಣಗೆರೆಯಲ್ಲಿ ಮಂಡಲ ಅಧ್ಯಕ್ಷರ ಜಗಳ ಶುರುವಾಗಿದ್ದು, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ್ ಹಾಗೂ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ರೇಣುಕಾಚಾರ್ಯ ನಡುವೆ ಆಕ್ರೋಶದ ಜ್ವಾಲೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಕೆಂಡಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಹೊನ್ನಾಳಿ ಹಾಗೂ ಚನ್ನಗಿರಿ ಮಂಡಲಗಳಿಗೆ ಸಭೆ ನಡೆಸಲಾಗಿದೆ. ಆದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಲ್ಲದೇ ಈ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪಕ್ಷದ ಚುನಾವಣಾಧಿಕಾರಿಗಳಾದ ಭೈರಪ್ಪ ಅವರ ಬಳಿ ಮಾತನಾಡಲಾಗಿತ್ತು. ಆದರೆ ಪಕ್ಷದ ಕಾರ್ಯಚಟುವಟಿಕೆಗಳು ಯಾರೊಬ್ಬರ ಮನೆಯಲ್ಲಿ ನಡೆಸುವುದು ಸರಿಯಲ್ಲ. ಆದರೂ ಮಂಡಲದ ಅಧ್ಯಕ್ಷರ ಮನೆಯಲ್ಲಿ ಸಭೆ ನಡೆಸಲಾಗಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜಿಲ್ಲಾ ಕೋರ್ ಕಮಿಟಿ ಸಭೆ ಕರೆದಿಲ್ಲ. ಹೀಗೀದ್ದರೂ ಸಭೆ ಕರೆಯಲಾಗಿದೆ ಎಂದು ಭೈರಪ್ಪ ಅವರ ಗಮನಕ್ಕೆತರಲಾಗಿದೆ. ಆದರೂ ಕೂಡ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆದ್ದರಿಂದ ಎಲ್ಲಾಹಿರಿಯ ಮುಖಂಡರು ಹಾಗೂ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ ಐದು ಮಂಡಲ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದರು.
ಎಲ್ಲವೂ ಏಕಪಕ್ಷೀಯ
ದಾವಣಗೆರೆಯಲ್ಲಿ ಎಲ್ಲವೂ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಕೋರ್ ಕಮಿಟಿ ಸಭೆ ನಡೆಸಬೇಕು. ಕಾರ್ಯಕರ್ತರೊಂದಿಗೆ ಚರ್ಚೆ ಮಾಡಬೇಕು ಎಂದು ಇತ್ತೀಚೆಗೆ ದಾವಣಗೆರೆಗೆ ಆಗಮಿಸಿದ ಆರಗ ಜ್ಞಾನೇಂದ್ರ ಅವರಿಗೆ ಗಮನಕ್ಕೆ ತರಲಾಗಿತ್ತು. ಅವರೂ ಕೂಡ ಬಗೆಹರಿಸುವುದಾಗಿ ಹೇಳಿದ್ದರು. ಹೀಗಿದ್ದರೂ ಕೂಡ ಮಂಡಲ ಅಧ್ಯಕ್ಷರ ನೇಮಕಮಾಡಲಾಗಿದೆ. ಆದ್ದರಿಂದ ದಾವಣಗೆರೆ ಜಿಲ್ಲೆಯ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ಮಾಡಿ ಜಿಲ್ಲಾ ಸಹ ಚುನಾವಣಾಧಿಕಾರಿಯಾಗಿ ಐದು ಅಧ್ಯಕ್ಷರನ್ನು ನೇಮಕ ಮಾಡಿದ್ದೇನೆ ಎಂದರು.


ಯಾರು ಮಂಡಲದ ಅಧ್ಯಕ್ಷರು?
ಭಾರತೀಯ ಜನತಾ ಪಾರ್ಟಿಗೆ ನೂತನವಾಗಿ ಮಂಡಲ ಅಧ್ಯಕ್ಷರನ್ನು ನೇಮಕಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಜಗಳೂರು, ಮಾಯಕೊಂಡ ಮತ್ತು ದಾವಣಗೆರೆ ಉತ್ತರ ಮಂಡಲಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಪ್ರತಿ ಮೂರುವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ಮಾಡಲಾಗುತ್ತದೆ ಎಂದು ಹೇಳಿದ ಯಶವಂತರಾವ್ ಯಾವ ತಾಲೂಕಿಗೆ ಯಾರು ಮಂಡಲ ಅಧ್ಯಕ್ಷರು ಎಂದು ಘೋಷಿಸಿದರು. ಹೊನ್ನಾಳಿಗೆ ಎಂ.ಆರ್. ಮಹೇಶ್, ಚನ್ನಗಿರಿಗೆ ಎಸ್. ನವೀನ್ ಕುಮಾರ್, ಜಗಳೂರಿಗೆ ಶ್ರೀನಿವಾಸ್. ಜೆ., ಸೊಕ್ಕೆ, ಮಾಯಕೊಂಡಕ್ಕೆ ಕೆ.ಆರ್. ಅನೀಲ್ ಕುಮಾರ್ ಕತ್ತಲೆಗೆರೆ ಹಾಗೂ ದಾವಣಗೆರೆ ಉತ್ತರಕ್ಕೆ ಡಿ.ಆರ್. ವೀರೇಶ್ ದೊಡ್ಡಬಾತಿ ಅವರನ್ನು ನೇಮಕಮಾಡಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಟಿಂಕರ್ ಮಂಜಣ್ಣ,ಕಿಶೋರ್,ಎರ್ರಿಸ್ವಾಮಿ,ರಾಮಚAದ್ರಪ್ಪ,ಅಣಜಿ ಗುಡ್ಡೇಶ್ ಉಪಸ್ಥಿತರಿದ್ದರು.

