
ದಾವಣಗೆರೆ: ಸ್ನೇಹಿತರ ಪಾಲಿಗೆ ಸ್ನೇಹಜೀವಿ. ಹೋರಾಟದಿಂದಲೇ ಬೆಳೆದು ಬಂದ ಆನಂದರಾಜು ಅವರು ಯುವಪೀಳಿಗೆಯ ಆಶಾಕಿರಣ, ರೈತರ ಮಿತ್ರರೂ ಹೌದು. ಯಾರಿಗೂ ಕೆಟ್ಟದ್ದು ಬಯಸಿದವರಲ್ಲ. ಆದಷ್ಟು ಸಹಾಯ ಮಾಡಿದವರೇ. ಇಂಥ ಸಮಾಜ ಸೇವೆಯ ಸೇವಕನಿಗೆ ಈಗ ರಾಷ್ಟ್ರೀಯ ಪ್ರಜಾ ಸೇವೆ ರತ್ನ ಪ್ರಶಸ್ತಿ ಒಲಿದು ಬಂದಿದೆ. ಬಾಡದ ಆನಂದರಾಜು ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆ ಆಗಿದೆ.
ದಾವಣಗೆರೆ ತಾಲೂಕಿನ ಬಾಡಾ ಗ್ರಾಮದ ರಾಮಣ್ಣ ಮತ್ತು ಸಾಕಮ್ಮ ದಂಪತಿಯ ಮೂರನೇ ಪುತ್ರ ಆನಂದರಾಜು. 1972ರ ನವೆಂಬರ್ 26ರಂದು ದಾವಣಗೆರೆಯಲ್ಲಿ ಜನಿಸಿದರು. ಬಾಡಾ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಪೂರೈಸಿದರು. ಪದವಿ ಶಿಕ್ಷಣ ಪಡೆದದ್ದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ. 1992 ರಲ್ಲಿ ಖ್ಯಾತ ನಟ ಶಂಕರ್ ನಾಗ್ ರವರು ಅಪಘಾತವಾದಾಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಆನಂದರಾಜು ಅವರಿಗೆ ಸಲ್ಲುತ್ತದೆ.
2001ರಲ್ಲಿ ವಾಜಪೇಯಿ ಅವರು ಪ್ರಧಾನಿಯಾದಾಗ ಕೇಂದ್ರ ಸರ್ಕಾರದಿಂದ ಯುವ ಪ್ರಶಸ್ತಿ ಪಡೆದಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹೆಗ್ಗಳಿಕೂಗ ಪಾತ್ರರಾಗಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಶೋಷಿತ ವರ್ಗಗಳ ಒಕ್ಕೂಟ ಸ್ಥಾಪಿಸಿ ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. 2006 ರಲ್ಲಿ ಶೋಭ ಜೊತೆ ವಿವಾಹವಾಗಿ ಎರಡು ಗಂಡು ಮಕ್ಕಳೊಂದಿಗೆ ಸುಖಜೀವನ ಸಾಗಿಸುತ್ತಿದ್ದಾರೆ.


ಮಮತೆಯ ಮಮಕಾರದ ಸಹೃದಯಿ, ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ, ಜನಪ್ರಿಯತೆಗೆ ಪಾತ್ರವಾಗಿರುವ ಬಾಡದ ಆನಂದರಾಜು ಶೋಷಿತರ ಪಾಲಿನ ಗಟ್ಟಿ ಧ್ವನಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಹೃದಯವಂತ. ಕೊರೊನಾ ಸಂಕಷ್ಟದ ವೇಳೆಯಲ್ಲಿ ನೊಂದವರಿಗೆ ನೆರವಾಗುವ ಮೂಲಕ ಎಲ್ಲರ ಮನ ಗೆದ್ದವರು.
ಬಾಡದ ಆನಂದರಾಜು ಈಗ ರಾಷ್ಟ್ರೀಯ ಪ್ರಜಾಸೇವ ರತ್ನ:
ಕಳೆದ ಮೂರು ದಶಕಗಳಿಂದ ಶೋಷಿತರ ಪರ ಹೋರಾಟ ಮಾಡುವುದರ ಜೊತೆಗೆ ರಾಜಕೀಯ, ಸಾಮಾಜಿಕವಾಗಿ ಸಲ್ಲಿಸಿದ ತಮ್ಮ ಅನುಪಮ ಸೇವೆಯನ್ನು ಗುರುತಿಸಿ ತಮ್ಮನ್ನು ರಾಷ್ಟ್ರಮಟ್ಟದ ರಾಷ್ಟ್ರೀಯ ಪ್ರಜಾಸೇವ ರತ್ನ
ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗೋವಾದ ಕ್ವಾಲಂಗುಟೆ ಕನ್ನಡ ಸಂಘ, ಬೆಂಗಳೂರಿನ ಸಾಂತ್ವನ ಮ್ಯೂಸಿಕ್ ಅಂಡ್ ಚಾರಿಟೇಬಲ್ ಫೌಂಡೇಶನ್ ತಿಳಿಸಿದೆ.
ಜನವರಿ 26ರಂದು ಮಧ್ಯಾಹ್ನ 2ಗಂಟೆಗೆ ಗೋವಾದ ಪಣಜಿಯ ಇನ್ಸಿಟ್ಯೂಟ್ ಮೆನೇಜಸ್ ಬ್ರಗಾಂಜಾದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಮತ್ತು ಸಂಕ್ರಾಂತಿ ಸಂಗೀತ ಸಂಭ್ರಮ ಕಾರ್ಯಕ್ರಮದಡಿ ಗಣ್ಯರ ಸಮ್ಮುಖದಲ್ಲಿ ತಮಗೆ ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೆಕಳ ಹಾಜಬ್ಬ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ಸಾಧನೆ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬೆಳೆಯುವ ಹಾದಿ ಹೂವಿನದ್ದಾಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿ ಕ್ರಮಿಸಿ ಬೆಳೆದವರು. ತಂದೆ ರಾಮಣ್ಣ ಅವರು ಕೆಇಬಿಯಲ್ಲಿ ನೌಕರರಾಗಿದ್ದವರು. ಮನೆಯಲ್ಲಿ ತುಂಬು ಕುಟುಂಬ. ಈ ಕುಟುಂಬವನ್ನು ಸುಂದರವಾಗಿ ಕಟ್ಟಿ ಪೋಷಿಸಿದವರು. ಇದರಲ್ಲಿ ತಾಯಿ ಸಾಕಮ್ಮರ ಪಾತ್ರವೂ ಬಹಳ ದೊಡ್ಡದಿದೆ. ತಂದೆ – ತಾಯಿಯ ಮಾತಿನಂತೆ ನಡೆದುಕೊಂಡವರು.
ಆನಂದರಾಜು ಅವರು ಚಿಕ್ಕವರಾಗಿದ್ದಾಗಿನಿಂದಲೂ ಹೋರಾಟದಲ್ಲಿ ಪಾಲ್ಗೊಂಡವರು. ವಿದ್ಯಾರ್ಥಿ ಜೀವನದಲ್ಲಿ ಅನ್ಯಾಯ, ಮೋಸ, ವಂಚನೆ ವಿರುದ್ಧ ಧ್ವನಿ ಎತ್ತಿದವರು. ಇದರ ಪ್ರತಿಫಲವೇ 1993ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯ ಸ್ಥಾನ ಹುಡುಕಿಕೊಂಡು ಬಂದಿತ್ತು. ತನಗೆ ಕೊಟ್ಟ ಜವಾಬ್ದಾರಿ ನಿಭಾಯಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದವರು.
ಜೊತೆಗೆ ಎಬಿವಿಪಿಯಲ್ಲಿ ಆನಂದರಾಜು ಅವರ ಜೊತೆಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಶಾಸಕ ಅರವಿಂದ ಲಿಂಬಾವಳಿ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳಾ, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್, ಹಾಲಿ ಸದಸ್ಯ ಎಸ್. ಟಿ. ವೀರೇಶ್, ಸಿ. ವಿ. ನರೇಂದ್ರಕುಮಾರ್ ಅವರೆಲ್ಲಾ ಉನ್ನತ ಮಟ್ಟಕ್ಕೇರಿದ್ದಾರೆ. ಹಾಗಂತ ಎಲ್ಲಿಯೂ ಅವರ ಹೆಸರು ಬಳಸಿಕೊಂಡವರಲ್ಲ. ಎಲ್ಲರೊಟ್ಟಿಗೂ ಆತ್ಮೀಯತೆಯ ಜೊತೆಗೆ ಸ್ನೇಹ ಸಂಬಂಧ ಹಾಗೆ ಉಳಿಸಿಕೊಂಡು ಬಂದಿರುವ ನಿಸ್ವಾರ್ಥಿ ಅವರು.
ಎಲ್ಲಾ ಪಕ್ಷಗಳ ರಾಜಕಾರಣಿಗಳು, ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಬಹುತೇಕ ಎಲ್ಲಾ ಸಮುದಾಯದವರಿಗೆ ಬಾಡದ ಆನಂದರಾಜು ಅಂದ್ರೆ ಪ್ರೀತಿ ಜೊತೆಗೆ ಗೌರವ ನೀಡುತ್ತಾರೆ. ಮಠಾಧೀಶರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಆನಂದರಾಜು ಅಂದರೆ ಅವರಿಗೂ ತುಂಬಾನೇ ಪ್ರೀತಿ.
ದಾವಣಗೆರೆ ನಗರದ ತರಳುಬಾಳು ಬಡಾವಣೆಯಲ್ಲಿ ವಾಸವಿರುವ ಆನಂದರಾಜು ಅವರ ಸಹಾಯ ಗುಣ, ಸೇವೆ, ಬಡವರ ಕಷ್ಟಕ್ಕೆ ಸ್ಪಂದಿಸುವಂಥ ಸಾಮಾಜಿಕ ಕಾರ್ಯಗಳಿಗೆ ಅವರ ಪತ್ನಿ ಶೋಭಾ ಆನಂದರಾಜು ಅವರ
ಸಂಪೂರ್ಣ ಬೆಂಬಲ ಇದೆ. ಮಕ್ಕಳಾದ ಕವಿರಾಜ್ ಪ್ರಸಾದ್ ಯಾದವ್ ಹಾಗೂ ಧನುಷ್ ಪ್ರಸಾದ್ ಯಾದವ್ ಜೊತೆ ಸುಂದರ ಬದುಕು ಸಾಗಿಸುತ್ತಿದ್ದಾರೆ. ಜೀವನದಲ್ಲಿ ದುಡ್ಡು ತುಂಬಾ ಜನರು ಮಾಡಿರಬಹುದು.
ಆದ್ರೆ, ಜನರ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಇಂಥದ್ದನ್ನು ಸಾಧಿಸಿರುವ ಆನಂದರಾಜು ಅವರಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಒಲಿದು ಬಂದಿದೆ.
ಸ್ನೇಹಿತರ ಪಾಲಿಗೆ ಸ್ನೇಹಜೀವಿ. ಹೋರಾಟದಿಂದಲೇ ಬೆಳೆದು ಬಂದ ಆನಂದರಾಜು ಅವರು ಯುವಪೀಳಿಗೆಯ ಆಶಾಕಿರಣ, ರೈತರ ಮಿತ್ರರೂ ಹೌದು. ಯಾರಿಗೂ ಕೆಟ್ಟದ್ದು ಬಯಸಿದವರಲ್ಲ. ಆದಷ್ಟು ಸಹಾಯ ಮಾಡಿದವರೇ.
ತುಂಬು ಕುಟುಂಬ ಆದ ಕಾರಣ ಬಾಲ್ಯದಿಂದಲೇ ತಂದೆ ಕಷ್ಟ ನೋಡಿ ಬೆಳೆದವರು. ರೈತರೆಂದರೆ ಇಂದಿಗೂ ಅಪಾರ ಪ್ರೀತಿ, ಕಾಳಜಿ ಹೊಂದಿರುವ ಆನಂದರಾಜು ಅವರು, ರೈತರಿಗೆ ಅನ್ಯಾಯವಾದಾಗ ಸಿಡಿದೆದ್ದವರು. ಹಲವು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲಕ್ಕೆ ನಿಂತವರು.
ಇನ್ನು ಯಾರೇ ಕಷ್ಟದಲ್ಲಿರಲಿ. ಹಿಂದೂ ಮುಂದು ನೋಡುವುದಿಲ್ಲ. ತನ್ನ ಜೇಬಿನಲ್ಲಿದ್ದ ಹಣ ತೆಗೆದುಕೊಡುತ್ತಾರೆ. ಕಷ್ಟಕ್ಕೆ ಸ್ಪಂದನೆ ಜೊತೆಗೆ ನೆರವು ನೀಡುತ್ತಾರೆ. ತಮ್ಮ ಕೈಯಲ್ಲಿ ಆಗುವುದಿದ್ದರೆ ಓಡಾಡಿ ಕೆಲಸ ಪೂರ್ಣಗೊಳಿಸುವುದು ಎಲ್ಲರಿಗೂ ಇಷ್ಟವಾಗುತ್ತದೆ. ಕೊರೊನಾ ಕಷ್ಟದ ವೇಳೆಯಲ್ಲಿ ಕಷ್ಟದಲ್ಲಿದ್ದವರನ್ನು ಹುಡುಕಿಕೊಂಡು ಹೋಗಿ ಸಹಾಯ ಮಾಡಿದವರು. ಎಂದಿಗೂ, ಎಲ್ಲಿಯೂ ಹೇಳಿಕೊಳ್ಳದೇ ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಮಾಡಿರುವ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.
ಎಂದಿಗೂ ಧರ್ಮ, ಜಾತಿ ಎಂದವರಲ್ಲ. ಎಲ್ಲರೂ ನಮ್ಮವರೇ ಅಂದುಕೊಂಡವರು. ಬಸವಣ್ಣನವರ ಸಿದ್ಧಾಂತ ಅಂದರೆ ತುಂಬಾನೇ ಆನಂದರಾಜು ಅವರಿಗೆ ಅಚ್ಚುಮೆಚ್ಚು. ವಿವಿಧತೆಯಲ್ಲಿ ಏಕತೆ, ಬಡತನ, ಸಿರಿವಂತ
ಎಂಬ ಭೇದ ಭಾವ ತೋರದೇ ಎಲ್ಲರನ್ನೂ ಸಮಾನರೀತಿಯಲ್ಲಿ ಕಾಣುವ ಅವರ ಹೃದಯವಂತಿಕೆ ಎಲ್ಲರಿಗೂ ಇಷ್ಟವಾಗುತ್ತದೆ.
ಕರಾಟೆ ಕಿಂಗ್, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಶಂಕರ್ ನಾಗ್ 1990ರ ಸೆಪ್ಟಂಬರ್ 30ರಂದು ದಾವಣಗೆರೆ ತಾಲೂಕಿನ ಆನಗೋಡಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವೇಳೆ
ಮಾನವೀಯತೆ ಮೆರೆದಿದ್ದರು ಬಾಡದ ಆನಂದರಾಜು. ಶಂಕರ್ ನಾಗ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಓಡಿ ಬಂದಿದ್ದರು. ಆಗ ಶಂಕರ್ ನಾಗ್ ಮೃತದೇಹ ಸ್ಥಳಾಂತರಿಸುವ ವೇಳೆ ಮಾಡಿದ ಕಾರ್ಯ ಇಂದಿಗೂ ನೆನಪಿನಲ್ಲಿ ಉಳಿಯುವಂಥದ್ದು.
ಶಂಕರ್ ನಾಗ್ ಮೃತದೇಹವನ್ನು ವಾಹನದಿಂದ ವಾಹನಕ್ಕೆ ಹಾಕಲು ಹೆಗಲು ಕೊಟ್ಟಿದ್ದರು. ಅರುಂಧತಿ ನಾಗ್ ರಕ್ತಸಿಕ್ತವಾಗಿದ್ದರು. ಈ ದಂಪತಿ ಪುತ್ರಿ ಕಾವ್ಯಳನ್ನು ಬಾಡದ ಆನಂದರಾಜು ಎತ್ತಿಕೊಂಡು ಸಂತೈಸಿದ್ದರು.
ಶಂಕರ್ ನಾಗ್ ನೋಡಿದರೆ ಸಾಕು ಎಂದುಕೊಳ್ಳುತ್ತಿದ್ದ ಕಾಲದಲ್ಲಿ ಅವರ ಕಳೆಬರಹ ನೋಡಿದ್ದ ಆನಂದರಾಜು ಈಗಲೂ ಕಣ್ಣುಕಟ್ಟಿದಂತಿದೆ.
ಶಂಕರ್ ನಾಗ್ ರ ದೇಹ ನೋಡಿದಾಕ್ಷಣ ನೋವು ತಡೆದುಕೊಳ್ಳಲು ಆಗಲಿಲ್ಲ.ಅಂಥ ಮೇರು ಕಲಾವಿದನ ದೇಹ ವಾಹನಕ್ಕೆ ಹಾಕುವಾಗ ಹೃದಯವೇ ಕಲುಕಿತ್ತು. ನೆರೆದಿದ್ದವರ ಕಣ್ಣೀರ ಕೋಡಿ ಇಂದಿಗೂ ನೆನಪಿದೆ ಎನ್ನುತ್ತಾರೆ ಆನಂದರಾಜು.
ರಾಷ್ಟ್ರೀಯ ಪ್ರಜಾಸೇವ ರತ್ನ ಪ್ರಶಸ್ತಿ ಬಾಡದ ಆನಂದರಾಜು ಅವರಿಗೆ ಕುಟುಂಬದವರು, ಸ್ನೇಹಿತರು, ಹಿರಿಯರು, ಹಿತೈಷಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ. ಇಂಥ ಅನೇಕ ಪ್ರಶಸ್ತಿಗಳು ಮುಂಬರುವ ದಿನಗಳಲ್ಲಿ ಅರಸಿ ಬರಲಿ ಎಂದು ಹಾರೈಸಿದ್ದಾರೆ.

