ನಂದೀಶ್ ಭದ್ರಾವತಿ, ದಾವಣಗೆರೆ
ಸದ್ಯ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಜನ ಕೊಂಡಾಡುತ್ತಿದ್ದಾರೆ..ಆದರೆ ಇಲ್ಲೊಂದು ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಎಲೆ ಮರೆ ಕಾಯಿಯಂತೆ ಕೆಲಸ ಮಾಡಿದ್ದು, ರೈತರಿಗೆ ವಂಚನೆ ಮಾಡಿದ್ದ ಕೋಟಿಗಟ್ಟಲೇ ಹಣ ವಾಪಸ್ ಕೊಡಿಸಿದ್ದಾರೆ.
ದಾವಣಗೆರೆ ಇತಿಹಾಸದಲ್ಲಿಯೇ ಇಂತಹ ಕೇಸ್ ಮೊದಲನೆಯದಾಗಿದ್ದು, ಎಸ್ಪಿ ಸಿಬಿ ರಿಷ್ಯಂತ್, ಡಿಎಸ್ಪಿ ಬಸವರಾಜ್ ತಂಡ ಈ ಕೆಲಸ ಮಾಡಿದೆ. ಆದ್ರೆ ಇದು ಸ್ಯಾಂಪಲ್ ಅಷ್ಟೇ..ಇಂತಹ ಹಲವಾರು ಪ್ರಕರಣಗಳನ್ನು ಈ ತಂಡ ಬೇಧಿಸಿದೆ.
ಏನಿದು ಪ್ರಕರಣ?
ದಾವಣಗೆರೆ ಹೇಳಿ ಕೇಳಿ ಮೆಕ್ಕೆಜೋಳ ಕಣಜ, ಹಾಗಾಗಿ ವ್ಯಾಪಾರವೂ ಕೋಟಿಗಟ್ಟಲೇ ನಡೆಯುತ್ತದೆ. ಆದ್ದರಿಂದ ವಂಚಕರು ರೈತರ ಜಮೀನಿಗೆ ಹೋಗಿ ಅವರಿಂದ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಿ ಆ ಮೆಕ್ಕೆಜೋಳ ತಮಿಳುನಾಡಿಗೆ ಕಳುಹಿಸುತ್ತಿದ್ದರು. ಮೊದಲು ರೈತರ ಕೈಗೆ ಪುಡಿಗಾಸು ಕೊಟ್ಟು ನಂತರ ಹಣವೆ ಬಂದಿಲ್ಲ ಎಂದು ಮೋಸ ಮಾಡಿ ಹಣವನ್ನು ತಾವೇ ಇಟ್ಟುಕೊಳ್ಳುತ್ತಿದ್ದರು.
ಹೀಗೆ ಸಾವಿರಾರು ರೈತರಿಗೆ ವಂಚನೆ ಮಾಡುವುದು ಇವರ ಕೆಲ್ಸಾ. ಇದಕ್ಕಾಗಿಯೇ ಇವರೊಂದು ಜಿಎಂಸಿ ಎಂದು ಕಂಪನಿ ಮಾಡಿಕೊಂಡಿದ್ದರು. ನಂತರ 96 ಜನ ರೈತರ ಹಾಗೂ 29 ಜನ ವರ್ತಕರಿಂದ 125 ಜನರಿಂದ ಮೆಕ್ಕೆಜೋಳ ಖರೀದಿಸಿ ಕಳೆದ ಒಂದುವರೆ ವರ್ಷದಿಂದ ಹಣ ನೀಡದೇ ವಂಚಿಸಿ ತಲೆ ಮರೆಸಿಕೊಂಡಿದ್ದರು.
ಹಣ ಕೊಡದೇ ವಂಚಿಸುವುದೇ ಇವರ ಕೆಲ್ಸ
ವಂಚಕರು ರೈತರಿಗೆ ಸಾಲ ಹಾಗೂ ರಸಗೊಬ್ಬರ ನೀಡುತ್ತಿದ್ದರು. 20 ರಿಂದ 30 ಲಕ್ಷ ರೂಪಾಯಿ ಬಂಡವಾಳ ಹಾಕಿ ಪ್ರತಿ ವರ್ಷ ಮೆಕ್ಕೆಜೋಳದ ಹಂಗಾಮಿನಲ್ಲಿ ರೈತರಿಗೆ ದುಡ್ಡು ಕೊಡದೇ ಮೆಕ್ಕೆಜೋಳ ಖರೀದಿಸುತ್ತಿದ್ದರು. ನಂತರ ದುಡ್ಡು ಬಂದಿಲ್ಲ ಎನ್ನುತ್ತಿದ್ದರು. ತೀವ್ರ ಒತ್ತಡ ಹಾಕಿದವರಿಗೆ ಅಲ್ಪ ಸ್ವಲ್ಪ ಹಣ ಕೊಟ್ಟು ಸುಮ್ಮನಾಗುತ್ತಿದ್ದರು. ಇದೇ ವಂಚನೆ ನಿರಂತರ ಮಾಡಿಕೊಂಡು ಬಂದಿದ್ದರು. ಅದರಲ್ಲೂ ದಾವಣಗೆರೆ ಹಾಗೂ ಪಕ್ಕದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರೈತರೇ ಮೋಸ ಹೋಗಿದ್ದರು. ಆ ಬಳಿಕ ಸಂತೋಷ ಎಂಬ ಓರ್ವ ರೈತ ಎಲ್ಲರನ್ನು ಸೇರಿಸಿ ದಾವಣಗೆರೆ ನಗರದ ಆರ್ ಎಂಸಿ ಪೊಲೀಸ್ ಠಾಣೆಗೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದ.
ಡಿಎಸ್ಪಿ ಬಸವರಾಜ್ ತಂಡ ರೆಡಿಯಾಗಿತ್ತು
ವಂಚಕರು ರೈತರಿಗೆ 2 ಕೋಟಿ 68 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ಎಫ್ ಐ ಆರ್ ಆದ ಬಳಿಕ ಖಡಕ್ ಅಧಿಕಾರಿ ಎಸ್ಪಿ ರಿಷ್ಯಂತ್ ಕ್ರೈಂ ಬ್ರಾಂಚ್ ನ ಡಿಎಸ್ಪಿ ಬಿ.ಎಸ್.ಬಸವರಾಜ್ ತಂಡ ರೆಡಿ ಮಾಡಿದರು. ಅವರು ಹರಪನಹಳ್ಳಿ, ದಾವಣಗೆರೆ ಸೇರಿದಂತೆ ಇನ್ನಿತರ ಕಡೆ ಆರೋಪಿಗಳ ಹುಡುಕಾಟ ನಡೆಸಿದರು. ಆಗ ಸಿಕ್ಕಿದವನೇ ಕೆನರಾ ಬ್ಯಾಂಕ್ ಉದ್ಯೋಗಿ ನಂತರ ಆತನಿಂದ ಇನ್ನುಳಿದ ಆರೋಪಿಗಳನ್ನು ಬಂಧಿಸಿ ಎರಡು ಕೋಟಿ ಹಣ ವಶಪಡಿಸಿಕೊಂಡರು
ಬಂಧಿತರು ಯಾರು ?
ಶಿವಲಿಂಗಯ್ಯ, ಚೇತನ್, ವಾಗೀಶ್ ಚಂದ್ರು , ಮಹೇಶ್ವರಯ್ಯ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ಶಿವಕುಮಾರ್ ಡಿ.ಎಸ್ಪಿ.ಬಸವರಾಜ್ ಬಲೆಗೆ ಬಿದ್ದರು.
ರೈತರಿಗೆ ಹಣ ಕೊಡಿಸಿದ ಡಿಎಸ್ಪಿ ಬಸವರಾಜ್ ತಂಡ
ಆರೋಪಿಗಳ ಬಳಿ ಸಿಕ್ಕ ಬರೋಬರಿ ಎರಡು ಕೋಟಿ 68 ಲಕ್ಷ ರೂಪಾಯಿ ನಗದನ್ನು ರೈತರಿಗೆ ಹಿಂತಿರುಗಿಸಲಾಗಿತ್ತು. ಮೆಕ್ಕೆಜೋಳ ಮಾರಾಟ ಮಾಡಿ ಹಣ ಕಳೆದು ಕೊಂಡ ರೈತರು ಅಂದು ನಿಜಕ್ಕೂ ಭಾವುಕರಾಗಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಬೈರತಿ ಬಸವರಾಜ್ ಅವರು ಹಣ ಕಳೆದುಕೊಂಡ ರೈತರಿಗೆ ಹಣ ವಾಪಸ್ಸು ಮಾಡಿದರು. ಒಟ್ಟಾರೆ ಪೊಲೀಸರ ಶ್ರಮದಿಂದ ರೈತರಿಗೆ ತಾವು ಬೆಳೆದಿದ್ದ ಬೆಳೆ ಹಣ ಸಿಕ್ಕಿತ್ತು..ಈಗಲೂ ಈ ರೈತರು ಈ ಪ್ರಾಮಾಣಿಕ ಅಧಿಕಾರಿಗಳನ್ನು ನೆನಸಿಕೊಳ್ಳುತ್ತಾರೆ.