ನಂದೀಶ್ ಭದ್ರಾವತಿ ಶಿವಮೊಗ್ಗ
ಸ್ಥಳೀಯ ಡಿಸಿಸಿ ಬ್ಯಾಂಕ್ ಚುನಾವಣೆ ವಿಧಾನಸಭಾ ಚುನಾವಣೆಗಿಂತ ಜೋರಾಗಿ ನಡೆಯುತ್ತಿದೆ.
ಸದ್ಯ 13 ನಿರ್ದೇಶಕರ ಸ್ಥಾನಕ್ಕೆ 35 ಜನ ಆಕಾಂಕ್ಷಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಮೂವರು ಹೊಸ ಅಭ್ಯರ್ಥಿಗಳಿದ್ದಾರೆ.
ಸದ್ಯ ಒಬ್ಬ ಆಕಾಂಕ್ಷಿ ಒಂದರಿಂದ ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದು, 193 ನಾಮಪತ್ರಗಳು ಸಲ್ಲಿಕೆಯಾಗಿದೆ. ಜೂ.21 ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಜೂ.22 ನಾಮ ಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ.
ಜೂನ್ 28ರಂದು ಡಿಸಿಸಿ ಬ್ಯಾಂಕಿನ 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 621 ಮತದಾರರು ಇದ್ದಾರೆ. ಹೊಸನಗರ ಕ್ಷೇತ್ರದಿಂದ ಪರಮೇಶ್ವರ್ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಈ ಕ್ಷೇತ್ರ ಅವಿರೋಧ ಆಯ್ಕೆಯಾಗುವ ಸಂಭವ ಇದೆ. ಆಯ್ಕೆಯಾಗುವ ಎಂಟು ನಿರ್ದೆಶಕರು ಯಾರಿಗೆ ಬೆಂಬಲ ನೀಡುತ್ತಾರೆ ಅವರು ಅಧ್ಯಕ್ಷರಾಗುವ ಸಂಭವ ಹೆಚ್ಚಿದೆ.
ನಿರ್ದೇಶಕರ ಆಯ್ಕೆಗಾಗಿ ಕಸರತ್ತು ಜೋರಾಗಿದ್ದು, ಹೋಟೆಲ್, ಡಾಬಾ, ತೋಟಗಳಲ್ಲಿ ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಸದ್ಯ ಹಾಲಿ ಪದಾಧಿಕಾರಿಗಳು ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ. ಇನ್ನೂ ಕೆಲವರು ಹೊಸದಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಹಳಬರು ಭಾರಿ ಪ್ರಯತ್ನ ಮಾಡುತ್ತಿದ್ದಾರೆ.
ಬ್ಯಾಂಕಿನ ಹಾಲಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಹಿರಿಯ ನಿರ್ದೇಶಕ ಬಸವಾನಿ ವಿಜಯದೇವ್, ಅಗಡಿ ಅಶೋಕ, ಕೆ.ಪಿ. ದುಗ್ಗಪ್ಪಗೌಡ, ಜೆ.ಪಿ. ಯೋಗೀಶ್, ಎಸ್.ಪಿ. ದಿನೇಶ್, ಬಿ.ಡಿ. ಭೂಕಾಂತ್, ಜಿ.ಎನ್. ಸುಧೀರ್ ಮತ್ತೊಮ್ಮೆ ಸ್ಪರ್ಧೆ ಮಾಡಿದ್ದಾರೆ. ಈ ನಡುವೆ ಶಿಮುಲ್ ಮಾಜಿ ಅಧ್ಯಕ್ಷ ಶಿವಶಂಕರ್ ಕೂಡ ನಾಮ ಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಮೊದಲ ಬಾರಿ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯ ದಿನೇಶ್, ಬುಳ್ಳಾಪುರ, ಜೆಡಿಎಸ್ನ ಯೋಗೇಶ್, ಶಿಮುಲ್ನ ಹಾಲಿ ನಿರ್ದೇಶಕ ಆನಂದ ಅವರೂ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಸಹಕಾರಿ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಹಿಡಿತದಲ್ಲಿ ಡಿಸಿಸಿ ಬ್ಯಾಂಕ್ ಇದೆ. ಇದರ ನಡುವೆ ಬಿಜೆಪಿಯೂ ಈ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲು ಶತಪ್ರಯತ್ನ ನಡೆಸಿದೆ. ಒಟ್ಟಾರೆ
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನ ಹಲವು ರಾಜಕಾರಣಿಗಳು ಅಖಾಡಕ್ಕೆ ಇಳಿದಿರುವುದರಿಂದ ಚುನಾವಣಾ ಕಣ ರಂಗೇರಿದೆ.