ದಾವಣಗೆರೆ : ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಿಡ್ನಾಪ್ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಹೆಚ್ಡಿ ರೇವಣ್ಣ ಅವರ ಪಿಎ ತೋಟದ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯನ್ನ ರಕ್ಷಿಸಿರೋ SIT ಅಧಿಕಾರಿಗಳು ಶಾಸಕ ಹೆಚ್ಡಿ ರೇವಣ್ಣ ಅವರನ್ನೂ ವಶಕ್ಕೆ ಪಡೆದಿದ್ದಾರೆ. ಹಾಗಾದ್ರೆ ಏನಿದು ಪ್ರಕರಣ ಅಂದ್ರಾ..?
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಹೊಸ ಹೊಸ ಟ್ವಿಸ್ಟ್ ಅಂಡ್ ಟರ್ನ್ಗಳನ್ನ ಪಡ್ಕೊಂತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಜರ್ಮನಿ ದೇಶಕ್ಕೆ ಹಾರಿದ್ರೆ, ಇತ್ತ ಪ್ರಜ್ವಲ್ ತಂದೆ ಹೆಚ್ಡಿ ರೇವಣ್ಣ ಅವರಿಗೆ ಕಿಡ್ನಾಪ್ ಪ್ರಕರಣ ಕಂಟಕವಾಗೋ ಸಾಧ್ಯತೆ ಇದೆ. ಯಾಕಂದ್ರೆ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳಿಸಿದೆ. ಜೊತೆಗೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದೆ. ಮಧ್ಯಂತರ ನಿರೀಕ್ಷಣಾ ಜಾಮೀನು ವಜಾಗೊಳ್ಳುತ್ತಿದ್ದಂತೆ ಹೆಚ್.ಡಿ ರೇವಣ್ಣಗೆ ಬಂಧನದ ಭೀತಿ ಶುರುವಾಗಿತ್ತು. ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ಎಸ್ಐಟಿ ಅಧಿಕಾರಿಗಳು ಆಗಮಿಸಿದ್ದರು. ದೇವೇಗೌಡರ ಮನೆಯಲ್ಲಿ ರೇವಣ್ಣ ಅವರು ಇರಬಹುದು ಎಂದು ಶಂಕಿಸಿರುವ ಅಧಿಕಾರಿಗಳು ಮನೆಯ ಮುಂಬಾಗಿಲು ಹಾಗೂ ಹಿಂಬಾಗಿಲಿನಲ್ಲಿ ನಿಂತುಕೊಂಡಿದ್ದರು. ಇನ್ನು ರೇವಣ್ಣ ಮನೆಯಿಂದ ಹೊರಬರುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹೆಚ್ಡಿ ರೇವಣ್ಣರನ್ನು ವಶಕ್ಕೆ ಪಡೆದ ಅಧಿಕಾರಿಗಳು ನೇರವಾಗಿ ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಮಹಿಳೆಯರಲ್ಲಿ ಓರ್ವ ಮಹಿಳೆ ನಾಪತ್ತೆಯಾಗಿದ್ರು. ಹೀಗಾಗಿ ತನ್ನ ತಾಯಿಯನ್ನು ಕಿಡ್ನಾಪ್ ಮಾಡಲಾಗಿದೆ ಅಂತೇಳಿ 20 ವರ್ಷದ ವ್ಯಕ್ತಿಯೊಬ್ಬರು ಮೈಸೂರಿನಲ್ಲಿ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಏಪ್ರಿಲ್ 29ರಂದು ರೇವಣ್ಣ ಅವರ ಸಂಬಂಧ ಸತೀಶ್ ಬಾಬು ಎಂಬುವರು ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದರು ಅನ್ನೋದು ಗೊತ್ತಾಗಿತ್ತು. ಆ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಆ ಮಹಿಳೆ ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಇದ್ದಾರೆ ಅನ್ನೋದು ಬೆಳಕಿಗೆ ಬಂದಿತ್ತು. ಹೀಗಾಗಿ ಸಂತ್ರಸ್ತ ಮಹಿಳೆಯನ್ನು SIT ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ರೇವಣ್ಣರ ಪಿಎ ರಾಜಶೇಖರ ಎಂಬುವರ ತೋಟದ ಮನೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿರುವ ಎಸ್ಐಟಿ ಅಧಿಕಾರಿಗಳು ಆಕೆಯನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.
ಅಷ್ಟೇ ಅಲ್ಲ, ಅಪಹರಣ ಪ್ರಕರಣದ ಆರೋಪಿ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣನನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇತ್ತ, ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯ ಭಾಗವಾಗಿ ವಿಶೇಷ ತನಿಖಾ ತಂಡ ಹೊಳೆನರಸೀಪುರದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ವೇಳೆ ಶಾಸಕರ ಬೆಂಬಲಿಗರು ಅವರ ನಿವಾಸಕ್ಕೆ ನುಗ್ಗಿದ್ದರಿಂದ ಕೆಲ ಕಾಲ ಗೊಂದಲ ಉಂಟಾಗಿತ್ತು. ಇನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ಎಸ್‌ಐಟಿ ಇವತ್ತು ಎರಡನೇ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ಇದರ ಜೊತೆಗೆ ಕೇಂದ್ರ ತನಿಖಾ ದಳವು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.
ಅದೇನೇ ಇರ್ಲಿ, ಹೆಚ್ಡಿ ದೇವೇಗೌಡ್ರು ತಮ್ಮ ಬದುಕಿನುದ್ದಕ್ಕೂ ಶೀಲ ಚಾರಿತ್ರ್ಯದ ವಿಚಾರದಲ್ಲಿ ಯಾವತ್ತೂ ಹೆಸರು ಕೆಡಿಸಿಕೊಂಡಿರ್ಲಿಲ್ಲ. ಸುಧೀರ್ಘ ರಾಜಕಾರಣ ಮಾಡಿಕೊಂಡು ಬಂದು ಈಗ ಇಳಿ ವಯಸ್ಸಿನಲ್ಲಿ ಇಂತಹದೊಂದು ಅಸಹ್ಯಕಾರಿ ಸುದ್ದಿಯನ್ನು ತನ್ನ ಮೊಮ್ಮಗನಿಂದ ಕೇಳಬೇಕಾಯಿತಲ್ಲ ಅನ್ನೋ ಕೊರಗು ದೇವೇಗೌಡ್ರನ್ನ ಇನ್ನಿಲ್ಲದಂತೆ ಕಾಡ್ತಾಯಿದೆ. ಈಗ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಆಕ್ರೋಶಗಳು ಒಂದೆಡೆಯಾದರೆ, ರಾಜಕೀಯ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಇದನ್ನು ಬಿಜೆಪಿ ಮತ್ತು ಜೆಡಿಎಸ್ ಮೇಲೆ ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳುತ್ತಿದೆ.